Auto Sales: 2021ರಲ್ಲಿ 40,273 ಎಂಜಿ ಮೋಟಾರ್ಸ್ ವಾಹನಗಳ ಮಾರಾಟ!
*2021ರಲ್ಲಿ 40,273 ಎಂಜಿ ಮೋಟಾರ್ಸ್ ವಾಹನಗಳ ಮಾರಾಟ
*ಹೆಕ್ಟರ್ ಶೇ.21.5ರಷ್ಟು ಹಾಗೂ ಝೆಡ್ ಎಸ್ ಇವಿ ಶೇ.145ರಷ್ಟು ಮಾರಾಟ
*2022ರಲ್ಲಿ ಮತ್ತಷ್ಟು ಹೊಸ ವಾಹನಗಳ ಬಿಡುಗಡೆ
Auto Desk: 2020 ಕೋವಿಡ್ ಸಾಂಕ್ರಾಮಿಕ ಪೀಡಿತ ವರ್ಷಕ್ಕೆ ಹೋಲಿಸಿದರೆ, ಎಂಜಿ ಮೋಟಾರ್ ಇಂಡಿಯಾ (MG Motor India) 2021ನೇ ಸಾಲಿನಲ್ಲಿ ಗಣನೀಯ ಮಾರುಕಟ್ಟೆಯ ಪಾಲು ಪಡೆದುಕೊಂಡಿದ್ದು, ಅದರ ಹೆಕ್ಟರ್ (Hector) ಶೇ.21.5ರಷ್ಟು ಹಾಗೂ ಝೆಡ್ ಎಸ್ ಇವಿ (ZDSEV) ಶೇ.145ರಷ್ಟು ಹಾಗೂ ಗ್ಲೊಸ್ಟರ್ (Gloster) ಶೇ.252 ರಷ್ಟು ಮಾರಾಟದ ಪ್ರಗತಿ ದಾಖಲಿಸಿದೆ. ಎಂಜಿ ಮೋಟಾರ್ ಇಂಡಿಯಾ 2021 ರಲ್ಲಿ 40,273 ವಾಹನಗಳನ್ನು ಮಾರಾಟ ಮಾಡಿದೆ. ಇದು 2022ಕ್ಕಿಂತ ಶೇ.43ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2020ನೇ ಸಾಲಿನ ಬಹುತೇಕ ಸಮಯ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ, ಆಟೊ ಉದ್ಯಮದಲ್ಲಿ ಕೂಡ ಶೂನ್ಯ ಮಾರಾಟ ದಾಖಲಾಗಿತ್ತು ಎಂಬುದನ್ನು ಮರೆಯಬಾರದು. 2021ರಲ್ಲಿ ಮಾರುಕಟ್ಟೆ ತೆರೆದುಕೊಂಡಿದ್ದರಿಂದ, ಆಟೊಮೊಬೈಲ್ ವಲಯದಲ್ಲೂ ವ್ಯಾಪಾರ ವಹಿವಾಟು ಚಿಗುರಿಕೊಂಡಿದೆ
MG ಆಸ್ಟರ್‌ಗೆ ಉತ್ತಮ ಪ್ರತಿಕ್ರಿಯೆ!
ಎಂಜಿ ಮೋಟಾರ್ ಕೂಡ ಹಲವು ಹೊಸ ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ MG ಆಸ್ಟರ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.ಈ ಕುರಿತು ಸಂತಸ ವ್ಯಕ್ತಪಡಿಸಿರುವ ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ, "ಓಮಿಕ್ರಾನ್ ಭೀತಿ, ಜಾಗತಿಕ ಸೆಮಿಕಂಡಕ್ಟರ್ ಕೊರತೆ ಮತ್ತು ಕಚ್ಚಾವಸ್ತು ದರ ಹೆಚ್ಚಳ, ಹಣದುಬ್ಬರದ ಅಪಾಯದ ನಡುವೆಯೂ 2021ರಲ್ಲಿ ಅನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆ ಹೊಸ ವಾಹನಗಳಿಗೆ ತೆರೆದುಕೊಂಡಿದೆ. ಇದೇ ರೀತಿಯ ಅನಿಶ್ಚಿತತೆಯು 2022 ರ ಮೊದಲ 6 ತಿಂಗಳುಗಳವರೆಗೆ ಮುಂದುವರಿಯಬಹುದು ಎಂದು ಉಹಿಸಲಾಗುತ್ತಿದೆ. ಎಂಜಿ ಮೋಟಾರ್ ನಿರಂತರವಾಗಿ ಈ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಲಿದೆ" ಎಂದರು.
ಇದನ್ನೂ ಓದಿ: Car Price Hike 2022 ಮಾರುತಿ ಸುಜುಕಿ to ಟೊಯೋಟಾ, ಇಲ್ಲಿದೆ ಹೊಸ ವರ್ಷದಿಂದ ಬೆಲೆ ಹೆಚ್ಚಿಸಿದ ಕಾರು ಕಂಪನಿ ಲಿಸ್ಟ್!
2020 ವರ್ಷಕ್ಕೆ ಹೋಲಿಸಿದರೆ, 2021ರಲ್ಲಿ ಎಂಜಿ ಹೆಕ್ಟರ್ ಶೇ.21.5ರಷ್ಟು, ಝೆಡ್‌ಎಸ್ ಇವಿಗೆ ಶೇ. 145 ಮತ್ತು ಗ್ಲೋಸ್ಟರ್ ಶೇ. 252ರಷ್ಟು ಬೆಳವಣಿಗೆ ದಾಖಲಿಸಿದೆ. ಸದ್ಯ ಎಂ.ಜಿ.ಹೆಕ್ಟರ್‌ನ ಬೇಡಿಕೆ ಅತಿ ಹೆಚ್ಚಿದ್ದು, ಕಂಪನಿಯಿನ್ನೂ ಸಾಕಷ್ಟು ವಾಹನಗಳನ್ನು ವಿತರಣೆ ಮಾಡಬೇಕಿದೆ. 2022ರಲ್ಲಿ ಇವುಗಳನ್ನು ವಿತರಣೆ ಮಾಡುವ ನಿರೀಕ್ಷೆಯಿದೆ.
ದೇಶಾದ್ಯಂತ ಭಾರೀ ಬೇಡಿಕೆ!
MG ಹೆಕ್ಟರ್ ಬೆಲೆ 13.50ಲಕ್ಷ ರೂ.ಗಳಿಂದ ಪ್ರಾರಂಭವಾಗಿ 19.55 ಲಕ್ಷ ರೂ.ಗಳವರೆಗೆ ಇರುತ್ತದೆ. ಹೆಕ್ಟರ್‌ನ ಪೆಟ್ರೋಲ್ ಆವೃತ್ತಿಯ ಬೆಲೆ 13.50 ಲಕ್ಷ ರೂ.ಗಳಿಂದ 18.97 ಲಕ್ಷ ರೂ.ಗಳವರೆಗೆ ಇದೆ. ಡೀಸೆಲ್ ಆವೃತ್ತಿಯ ಬೆಲೆ 14.99 ಲಕ್ಷ ರೂ.ಗಳಿಂದ 19.55 ಲಕ್ಷ ರೂ.ಗಳವರೆಗೆ ಇದೆ. ಇದು ಗಂಟೆಗೆ 13.96ರಿಂದ 17.41 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 1451ರಿಂದ 1956 ಸಿಸಿವರೆಗೆ ಇಂಜಿನ್ ಹೊಂದಿರುವ ಹೆಕ್ಟರ್ ಮ್ಯಾನ್ಯುಯಲ್ ಹಾಗೂ ಆಟೊಮೆಟಿಕ್ ಎರಡೂ ಟ್ರಾನ್ಸ್‌ಮಿಷನ್‌ಗಳಲ್ಲಿ ಬರುತ್ತದೆ. ಇದು 5 ಸೀಟರ್ ಎಸ್‌ಯುವಿಯಾಗಿದ್ದು, ಬಿಡುಗಡೆಯಾಗುತ್ತಲೇ ದೇಶಾದ್ಯಂತ ಭಾರೀ ಬೇಡಿಕೆ ಸೃಷ್ಟಿಸಿದೆ.
ಇದನ್ನೂ ಓದಿ: Car Sales ಮಾರಾಟದಲ್ಲಿ ಶೇ.4 ರಷ್ಟು ಕುಸಿತ ಕಂಡ ಮಾರುತಿ ಸುಜುಕಿ!
MG ಗ್ಲೋಸ್ಟರ್ ಬೆಲೆ 29.98 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 37.68 ಲಕ್ಷ ರೂ.ಗಳವರೆಗೆ ಇದೆ. ಗ್ಲೋಸ್ಟರ್‌ನ ಡೀಸೆಲ್ ಆವೃತ್ತಿಯ ಬೆಲೆ 29.98 ಲಕ್ಷ ರೂ.ಗಳಿಂದ 37.68 ಲಕ್ಷ ರೂ.ಗಳವರೆಗೆ ಇದೆ. ಎಂಜಿ ಝೆಡ್ ಎಸ್ ಇವಿ (MG ZS EV) ಎಕ್ಸ್‌ಕ್ಲೂಸಿವ್ ಈ ಶ್ರೇಣಿಯಲ್ಲಿನ ಉನ್ನತ ಮಾದರಿಯಾಗಿದೆ ಮತ್ತು ಇದರ ಟಾಪ್ ಮಾದರಿಯ ಬೆಲೆ 24.22 ಲಕ್ಷ ರೂ., ಎಂಜಿ ಝೆಡ್‌ಎಸ್ ಇವಿ ಎಕ್ಸ್‌ಕ್ಲೂಸಿವ್ ಆಟೊಮೆಟಿಕ್ ನಲ್ಲಿ ಕೂಡ ಲಭ್ಯವಿದೆ ಮತ್ತು ನೀಲಿ, ಕೆಂಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. ಇದು 44.5 ಕೆಡಬ್ಲ್ಯುಎಚ್, ಲಿಥಿಯಂ ಐಯಾನ್ ಬ್ಯಾಟರಿ, 50 ನಿಮಿಷಗಳ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಇದರ ವಿಶಾಲ ಕ್ಯಾಬಿನ್ ಇದರ ಪ್ರಮುಖ ಆಕರ್ಷಣೆಯಾಗಿದೆ.