ಹಬ್ಬದ ಸಮಯದಲ್ಲಿ ಮನೆಗೆ ಅತಿಥಿಗಳು ಬಂದಾಗ ಎಲ್ಲರಿಗೂ ಇಷ್ಟವಾದ ಆಹಾರವನ್ನು ಆರ್ಡರ್ ಮಾಡುವುದು ಸಾಮಾನ್ಯ, ಖಾದ್ಯದ ಬೆಲೆಯೂ ಕಾಣಿಸುವುದರಿಂದ ಕೆಲವೊಮ್ಮೆ ಅತಿಥಿಗಳಿಗೆ ಮುಜುಗರವಾಗಬಹುದು. ಸಮಸ್ಯೆಗೆ ಪರಿಹಾರ ನೀಡಲು Zomatoದಲ್ಲಿ ಹೊಸ ಫೀಚರ್ ಪರಿಚಯಿಸುತ್ತದೆಯಂತೆ.
ಹಬ್ಬದ ಸಮಯದಲ್ಲಿ ಮನೆಗೆ ಅತಿಥಿಗಳು ಬಂದಾಗ ಎಲ್ಲರಿಗೂ ಇಷ್ಟವಾದ ಆಹಾರವನ್ನು ಆರ್ಡರ್ ಮಾಡುವುದು ಸಾಮಾನ್ಯ. ಆದರೆ, ಮೊಬೈಲ್ನಲ್ಲಿ ಮೆನು ತೋರಿಸುವಾಗ ಪ್ರತಿಯೊಂದು ಖಾದ್ಯದ ಬೆಲೆಯೂ ಕಾಣಿಸುವುದರಿಂದ ಕೆಲವೊಮ್ಮೆ ಅತಿಥಿಗಳಿಗೆ ಮುಜುಗರವಾಗಬಹುದು. ಇಂತಹ ಸಣ್ಣ ಸಮಸ್ಯೆಗೆ ಪರಿಹಾರ ನೀಡಲು Zomatoದಲ್ಲಿ ಹೊಸ ಫೀಚರ್ ಪರಿಚಯಿಸುವಂತೆ ದೆಹಲಿಯ ವ್ಯಕ್ತಿಯೊಬ್ಬರು ಸಲಹೆ ನೀಡಿದ್ದಾರೆ. ಈ ಐಡಿಯಾಗೆ Zomato ಸಂಸ್ಥಾಪಕ ದೀಪಿಂದರ್ ಗೋಯಲ್ ಕೂಡ ತಕ್ಷಣವೇ ಸ್ಪಂದಿಸಿದ್ದಾರೆ.
ಏನಿದು Zomatoದ ‘ಮೆಹಮಾನ್ ಮೋಡ್’?
ದೆಹಲಿ ಮೂಲದ ಮಾರ್ಕೆಟಿಂಗ್ ವೃತ್ತಿಪರ ಆಯುಷ್ಮಾನ್ ಅಗರ್ವಾಲ್ಲಾ ಅವರು LinkedInನಲ್ಲಿ ‘Mehmaan Mode’ ಎಂಬ ಹೊಸ ಫೀಚರ್ ಪರಿಚಯಿಸುವಂತೆ ಸಲಹೆ ನೀಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ದೀಪಿಂದರ್ ಗೋಯಲ್ ಅವರನ್ನು ಟ್ಯಾಗ್ ಮಾಡಿ, ಮನೆಗೆ ಬಂದ ಅತಿಥಿಗಳು ಆಹಾರ ಆರ್ಡರ್ ಮಾಡುವಾಗ ಬೆಲೆಯ ಬಗ್ಗೆ ಮುಜುಗರ ಪಡದಂತೆ ಮಾಡಲು ಈ ಫೀಚರ್ ಸಹಾಯ ಮಾಡಬಹುದು ಎಂದು ವಿವರಿಸಿದ್ದಾರೆ.
ಸಾಮಾನ್ಯವಾಗಿ ಸ್ನೇಹಿತರು ಅಥವಾ ಕುಟುಂಬದವರು ಒಟ್ಟಿಗೆ ಸೇರಿದಾಗ ಮನೆಯವರು ತಮ್ಮ ಫೋನ್ ಅನ್ನು ಅತಿಥಿಗಳಿಗೆ ನೀಡಿ, ತಮಗೆ ಬೇಕಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಾರೆ. ಆದರೆ, ಮೆನುವಿನಲ್ಲಿ ಪ್ರತಿಯೊಂದು ಖಾದ್ಯದ ಬೆಲೆ ಕಾಣಿಸುವುದರಿಂದ ಕೆಲವರು ದುಬಾರಿ ಆಹಾರವನ್ನು ಆಯ್ಕೆ ಮಾಡಲು ಹಿಂಜರಿಯಬಹುದು. ಇನ್ನೂ ಕೆಲವರು ಬೆಲೆಯನ್ನು ಗಮನದಲ್ಲಿಟ್ಟುಕೊಂಡು ತಮಗೆ ಇಷ್ಟವಾದ ಖಾದ್ಯವನ್ನು ಆರ್ಡರ್ ಮಾಡದಿರಬಹುದು. ಈ ಸಮಸ್ಯೆಗೆ ಪರಿಹಾರವಾಗಿ ‘ಮೆಹಮಾನ್ ಮೋಡ್’ ಸಕ್ರಿಯಗೊಳಿಸಿದಾಗ ಮೆನುವಿನಲ್ಲಿರುವ ಆಹಾರ ಪದಾರ್ಥಗಳ ಬೆಲೆ ಕಾಣಿಸದಂತೆ ಮಾಡುವ ಐಡಿಯಾವನ್ನು ಅವರು ಮುಂದಿಟ್ಟಿದ್ದಾರೆ.
ದೀಪಿಂದರ್ ಗೋಯಲ್ ಕೊಟ್ಟ ಉತ್ತರವೇನು?
ಆಯುಷ್ಮಾನ್ ಅವರ ಸಲಹೆಗೆ Zomato ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ತಡಮಾಡದೆ ಪ್ರತಿಕ್ರಿಯಿಸಿದ್ದಾರೆ. LinkedIn ಪೋಸ್ಟ್ಗೆ ಉತ್ತರಿಸಿದ ಅವರು, “Thanks for the suggestion. Shipping it this week” ಎಂದು ತಿಳಿಸಿದ್ದಾರೆ. ಅಂದರೆ, ಈ ಫೀಚರ್ ಅನ್ನು ಈ ವಾರವೇ ಪರಿಚಯಿಸುವುದಾಗಿ ಭರವಸೆ ನೀಡಿದ್ದಾರೆ. ಹಬ್ಬದ ಸಮಯದಲ್ಲಿ ಅತಿಥಿಗಳಿಗೆ ಆಹಾರ ಆರ್ಡರ್ ಮಾಡಲು ಹೆಚ್ಚು ಅನುಕೂಲವಾಗುವಂತೆ ಮಾಡುವ ಈ ಐಡಿಯಾಗೆ ಗೋಯಲ್ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಗಮನ ಸೆಳೆದಿದೆ.
ಅತಿಥಿಗಳಿಗೆ ಅನುಕೂಲ, ಆತಿಥೇಯರಿಗೆ ಸುಲಭ!
ಈ ಫೀಚರ್ನ ಕಲ್ಪನೆ ಸರಳವಾಗಿದೆ. ಆತಿಥೇಯರು ತಮ್ಮ ಫೋನ್ ಅನ್ನು ಅತಿಥಿಗಳಿಗೆ ನೀಡಿದಾಗ, ಅವರು ಬೆಲೆಯ ಬಗ್ಗೆ ಯೋಚಿಸದೆ ತಮಗೆ ಇಷ್ಟವಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ನಂತರ ಆತಿಥೇಯರು ಫೋನ್ ಅನ್ನು ಮರಳಿ ಪಡೆದು ಸಂಪೂರ್ಣ ಆರ್ಡರ್ಗೆ ಪಾವತಿ ಮಾಡಬಹುದು. ಹಬ್ಬಗಳು, ಕುಟುಂಬದ ಸಮಾರಂಭಗಳು ಮತ್ತು ಸ್ನೇಹಿತರ ಭೇಟಿಯ ಸಂದರ್ಭದಲ್ಲಿ ಈ ಆಯ್ಕೆ ಉಪಯುಕ್ತವಾಗಬಹುದು. ಅತಿಥಿಗಳು ಆಹಾರದ ಬೆಲೆಯನ್ನು ನೋಡಿ ಮುಜುಗರ ಪಡುವುದು ತಪ್ಪುವುದರ ಜೊತೆಗೆ, ಆತಿಥೇಯರೂ ಎಲ್ಲರಿಗೂ ಇಷ್ಟವಾದ ಆಹಾರವನ್ನು ಆರ್ಡರ್ ಮಾಡಲು ಅವಕಾಶ ನೀಡಬಹುದು.




