ನವದೆಹಲಿ(ಜ.21): ದೇಶದ ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೋ, ಉಬರ್ ಈಟ್ಸ್'ನ್ನು ಖರೀದಿಸಿದ್ದು, ಉಬರ್ ಟೆಕ್ನಾಲಜೀಸ್ ಇಂಕ್. ಸಂಸ್ಥೆಗೆ ತನ್ನ ಕಂಪನಿಯಲ್ಲಿ ಶೇ.10ರಷ್ಟು ಷೇರು ನೀಡುವುದಾಗಿ ಘೋಷಿಸಿದೆ.

ಅಲಿಬಾಬಾ ಆಂಟ್ ಫೈನಾನ್ಸಿಯಲ್ ಕಂಪನಿಯ ಉಪ ಸಂಸ್ಥೆಯಾಗಿರುವ ಉಬರ್ ಟೆಕ್ನಾಲಜೀಸ್ ಇಂಕ್‌, ಉಬರ್ ಈಟ್ಸ್'ನ್ನು ಜೊಮ್ಯಾಟೋಗೆ ಮಾರಾಟ ಮಾಡಿದೆ. ಬದಲಾಗಿ ಜೊಮ್ಯಾಟೋನಲ್ಲಿ ಶೇ.10ರಷ್ಟು ಪಾಲನ್ನು ಪಡೆದುಕೊಂಡಿದೆ.

ಒಟ್ಟು 350 ಮಿಲಿಯನ್(2,492 ಕೋಟಿ ರೂ.) ಡಾಲರ್ ಒಪ್ಪಂದವಾಗಿದ್ದು, ಜೊಮ್ಯಾಟೋ ಹಾಗೂ ಉಬರ್ ನಡುವಿನ ಒಪ್ಪಂದಿಂದ ಪ್ರತಿಸ್ಪರ್ಧಿ ಸ್ವಿಗ್ಗಿ ಹೆಚ್ಚಿನ ಶ್ರಮವಹಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್, ದೇಶದ 500ಕ್ಕೂ ಹೆಚ್ಚು ನಗರಗಳಲ್ಲಿ ಸೇವೆ ಹೊಂದಿರುವ ಜೊಮ್ಯಾಟೋ, ಇದೀಗ ಉಬರ್ ಈಟ್ಸ್'ನ್ನು ಖರೀದಿಸುವ ಮೂಲಕ ತ್ನನ ಸೇವಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಉಬರ್ ಈಟ್ಸ್'ನ ಎಲ್ಲಾ ಪ್ರಮುಖ ಪಾಲುದಾರರು ಜೊಮ್ಯಾಟೋ ಅಧೀನಕ್ಕೆ ಬಂದಿದ್ದು, ಈ ಕುರಿತು ಉಬರ್ ಈಟ್ಸ್ ಆಪ್‌ನಲ್ಲೂ ಮಾಹಿತಿ ನೀಡಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಉಬರ್ ಸಿಇಒ ದಾರಾ ಕೊಸ್ರೋವ್ಶಾಹಿ, ಕಳೆದ ಎರಡು ವರ್ಷಗಳಿಂದ ಉಬರ್ ಈಟ್ಸ್ ಭಾರತದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಜೊಮ್ಯಾಟೋ ಜೊತೆಗಿನ ಒಪ್ಪಂದದ ಮೂಲಕ ಮತ್ತಷ್ಟು ಸಾಧನೆ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.