ಮಾ.31ರೊಳಗೆ ತೆರಿಗೆ ಉಳಿತಾಯ ಮಾಡಲು ಜೆರೋಧ ಸಿಇಒ ಟಿಪ್ಸ್; ಆದರೆ, ಇದು ಹಿಂದು ತೆರಿಗೆದಾರರಿಗೆ ಮಾತ್ರ ಅನ್ವಯ
2023-24ನೇ ಹಣಕಾಸು ಸಾಲಿನ ತೆರಿಗೆ ಉಳಿತಾಯ ಮಾಡಲು ತೆರಿಗೆದಾರರಿಗೆ ಮಾ.31 ಅಂತಿಮ ಗಡುವಾಗಿದೆ. ಕೊನೆಯ ಕ್ಷಣದಲ್ಲಿ ತೆರಿಗೆ ಉಳಿತಾಯ ಮಾಡಲು ಜೆರೋಧ ಸಿಇಒ ಸೂಪರ್ ಟಿಪ್ಸ್ ನೀಡಿದ್ದಾರೆ.
ಬೆಂಗಳೂರು (ಮಾ.30): 2023-24ನೇ ಹಣಕಾಸು ಸಾಲು ನಾಳೆ (ಮಾ. 31) ಅಂತ್ಯವಾಗಲಿದೆ. ಈ ಹಣಕಾಸು ಸಾಲಿಗೆ ತೆರಿಗೆ ಉಳಿತಾಯ ಮಾಡಲು ತೆರಿಗೆದಾರರಿಗೆ ಮಾ.31 ಅಂತಿಮ ಗಡುವಾಗಿದೆ. ಹೀಗಿರುವಾಗ ತೆರಿಗೆ ಉಳಿತಾಯಕ್ಕೆ ಸಂಬಂಧಿಸಿ ಜೆರೋಧ ಸಿಇಒ ಹಾಗೂ ಸಹಸಂಸ್ಥಾಪಕ ನಿತಿನ್ ಕಾಮತ್, ಮೌಲ್ಯಯುತವಾದ ಸಲಹೆಯೊಂದನ್ನು ನೀಡಿದ್ದಾರೆ. ಇತ್ತೀಚೆಗೆ ತಮ್ಮ ಟ್ವೀಟ್ ನಲ್ಲಿ ಈ ಹೆಚ್ಚು ಜನಪ್ರಿಯಲ್ಲದ ತೆರಿಗೆ ಉಳಿತಾಯದ ಮಾರ್ಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಧಾನದಿಂದ ವಿವಾಹಿತ ಹಿಂದುಗಳು ತಮ್ಮ ತೆರಿಗೆ ಉಳಿತಾಯವನ್ನು ಹೆಚ್ಚಿಸಿಕೊಳ್ಳಬಹುದು. ತಮ್ಮ ಹಣಕಾಸು ವ್ಯವಸ್ಥೆಯನ್ನು ಜಾಣತನದಿಂದ ನಿಭಾಯಿಸಲು ಎದುರು ನೋಡುತ್ತಿರುವ ಕುಟುಂಬಗಳು ಈ ವಿಧಾನ ಬಳಸಿಕೊಳ್ಳಬಹುದು. ಇದು ಹಿಂದು ಅವಿಭಜಿತ ಕುಟುಂಬಗಳಿಗೆ ಮಾತ್ರ ಅನ್ವಯಿಸುತ್ತದೆ.
ಹಿಂದು ಅವಿಭಜಿತ ಕುಟುಂಬದವರಿಗೆ ಅನ್ವಯ
ಇದು ಎಚ್ ಯುಎಫ್ ಅಥವಾ ಹಿಂದು ಅವಿಭಜಿತ ಕುಟುಂಬಗಳಿಗೆ ತೆರಿಗೆ ಉಳಿಸಲು ಇರುವ ವಿಶಿಷ್ಟ ವಿಧಾನವಾಗಿದೆ. ತೆರಿಗೆ ಉದ್ದೇಶಕ್ಕೆ ಅದನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ವೈಯಕ್ತಿಕ ತೆರಿಗೆದಾರರು ಹೇಗೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುತ್ತಾರೋ ಹಾಗೆಯೇ ಎಚ್ ಯುಎಫ್ ಕೂಡ ಪ್ರತ್ಯೇಕ ಐಟಿಆರ್ ಸಲ್ಲಿಕೆ ಮಾಡಬೇಕು.
ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಜೆರೋಧ ಸಿಇಒ ನೀಡಿದ ಟಿಪ್ಸ್ ಹೀಗಿದೆ..
ಇದ್ಯಾಕೆ ಮುಖ್ಯ?
ಎಚ್ ಯುಎಫ್ ಕೂಡ ವೈಯಕ್ತಿಕ ತೆರಿಗೆದಾರರಂತೆ ಅದೇ ರೀತಿಯ ಆದಾಯ ತೆರಿಗೆ ಸ್ಲಾಬ್ ಗಳನ್ನು ಹೊಂದಿದೆ. ಇದು ವಿವಿಧ ಕಡಿತಗಳ ಪ್ರಯೋಜನಗಳನ್ನು ಹೊಂದಿದೆ. ಇದು ವೈಯಕ್ತಿಕ ತೆರಿಗೆದಾರರಂತೆ ಕೆಲವು ಪ್ರಯೋಜನಗಳನ್ನು ಹೊಂದಿದೆ. ಗರಿಷ್ಠ ತೆರಿಗೆ ಉಳಿತಾಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಾಹಿತ ಹಿಂದುಗಳು ಎಚ್ ಯುಫ್ ಬಳಸಬಹುದು. ಎಚ್ ಯುಎಫ್ ಬಳಸಿಕೊಳ್ಳುವ ಮೂಲಕ ಕುಟುಂಬಗಳು ಹೆಚ್ಚುವರಿ ಪ್ರಯೋಜನಗಳನ್ನು ಬಳಸಿಕೊಳ್ಳಬಹುದು ಎಂದು ನಿತಿನ್ ಕಾಮತ್ ವಿವರಿಸಿದ್ದಾರೆ. ಉದಾಹರಣೆಗೆ ಎಚ್ ಯುಎಫ್ ಗೆ ಅವರು ಬಾಡಿಗೆ ಆದಾಯ ವರ್ಗಾವಣೆ ಮಾಡಲು, ಎಚ್ ಯುಎಫ್ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯಲು ಹಾಗೂ ಎಚ್ ಯುಎಫ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಹಾಗೂ ಎಚ್ ಯುಎಫ್ ಅಂಬ್ರೆಲಾ ಅಡಿಯಲ್ಲಿ ಉಡುಗೊರೆಗಳನ್ನು ಸ್ವೀಕರಿಸಲು ಇದು ಉದಾಹರಣೆ.
2023-24ನೇ ಹಣಕಾಸು ಸಾಲಿನ ಅಂತ್ಯಕ್ಕೆ ನಾವು ಸಮೀಪಿಸಿದ್ದೇವೆ. ಈ ಸಮಯದಲ್ಲಿ ತೆರಿಗೆ ಉಳಿತಾಯದ ಸಾಧನಗಳಲ್ಲಿ ಮಾ.31ರ ಮುನ್ನ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ವಿನಾಯ್ತಿಗಳನ್ನು ಪಡೆಯಬಹುದು. ಹೀಗಾಗಿ ತಮ್ಮ ತೆರಿಗೆ ಉಳಿತಾಯದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಬಯಸೋರು ಎಚ್ ಯುಎಫ್ ಪ್ರಯೋಜನಗಳನ್ನು ಬಳಸಿಕೊಳ್ಳಬಹುದು. ಎಚ್ ಯುಎಫ್ ಪ್ರಯೋಜನಗಳನ್ನು ಅರಿತುಕೊಳ್ಳುವ ಮೂಲಕ ಕುಟುಂಬಗಳು ತಮ್ಮ ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳಬಹುದು. ಇದು ತೆರಿಗೆ ದಕ್ಷತೆಯಿಂದ ಕೂಡಿರೋದು ಮಾತ್ರವಲ್ಲ ಬದಲಿಗೆ ದೀರ್ಘಕಾಲದ ಹಣಕಾಸಿನ ಸುಸ್ಥಿರತೆಗೆ ಕೂಡ ನೆರವು ನೀಡುತ್ತದೆ.
ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳಲು ಮಾ.31ರ ಮುನ್ನ ಈ 7 ಕೆಲಸಗಳನ್ನು ತಪ್ಪದೇ ಮಾಡಿ ಮುಗಿಸಿ
ಈ ಹಿಂದೆ ಅಡ್ವಾನ್ಸ್ ಟ್ಯಾಕ್ಸ್ ಪಾವತಿ ಬಗ್ಗೆ ಕೂಡ ನಿತಿನ್ ಕಾಮತ್ ಟಿಪ್ಸ್ ನೀಡಿದ್ದರು. ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ನಲ್ಲಿ ತೊಡಗಿರೋರು ಅಡ್ವಾನ್ಸ್ ಟ್ಯಾಕ್ಸ್ ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ನಿತಿನ್ ಕಾಮತ್ 'ಎಕ್ಸ್ ' ಪೋಸ್ಟ್ ನಲ್ಲಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದರು.
ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳಲು ಮಾರ್ಚ್ 31ಕ್ಕಿಂತ ಮುನ್ನ ತೆರಿಗೆ ಉಳಿತಾಯ ಮಾಡುವ ಯೋಜನೆಗಳಲ್ಲಿ ಹೂಡಿಕೆ ಮಾಡೋದು ಅಗತ್ಯ. ಯಾವೆಲ್ಲ ಹೂಡಿಕೆಗಳಿಗೆ ತೆರಿಗೆ ವಿನಾಯ್ತಿ ಸಿಗುತ್ತದೆ ಎಂಬುದನ್ನು ಅರಿತು ಹೂಡಿಕೆ ಮಾಡೋದು ಅಗತ್ಯ. ಆಗ ಮಾತ್ರ ದೊಡ್ಡ ಮೊತ್ತದ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.