ನವದೆಹಲಿ[ಫೆ.23]: ಎಟಿಎಂಗಳಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ಪಡೆದವರು ಚಿಲ್ಲರೆ ಮಾಡಿಸಲು ಪರದಾಡುವುದನ್ನು ಗಮನಿಸಿರುವ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಬ್ಯಾಂಕ್‌, ಮಾ.1ರಿಂದ ತನ್ನ ಎಟಿಎಂಗಳಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ತುಂಬದೇ ಇರಲು ನಿರ್ಧರಿಸಿದೆ. 2000 ರು. ಬದಲಿಗೆ 200 ರು. ಮುಖಬೆಲೆಯ ನೋಟುಗಳಿಗೆ ಒತ್ತು ನೀಡುವುದಾಗಿ ಬ್ಯಾಂಕ್‌ ಘೋಷಿಸಿದೆ.

ಎಟಿಎಂಗಳಲ್ಲಿ ಹಣ ಹಿಂತೆಗೆದ ಬಳಿಕ ಗ್ರಾಹಕರು ಅದಕ್ಕೆ ಚಿಲ್ಲರೆ ಮಾಡಿಸಲು ಪರದಾಡುತ್ತಿದ್ದಾರೆ. ಅಂಗಡಿಗಳು ಹಾಗೂ ಇನ್ನಿತರ ಕಡೆ ಚಿಲ್ಲರೆ ಸಿಗದ ಕಾರಣ ಬ್ಯಾಂಕುಗಳಿಗೆ ಎಡತಾಕುತ್ತಿದ್ದಾರೆ. ಇದರಿಂದಾಗಿ ನೋಟು ವಿತರಣೆಯ ಉದ್ದೇಶವೇ ಹಾಳಾಗುತ್ತಿದೆ. ಆದ ಕಾರಣ 2000 ರು. ಮುಖಬೆಲೆಯ ನೋಟುಗಳನ್ನು ಎಟಿಎಂನಲ್ಲಿ ತುಂಬದೇ ಇರಲು ನಿರ್ಧರಿಸಲಾಗಿದೆ. 2000 ರು. ಮುಖಬೆಲೆಯ ನೋಟುಗಳ ಬದಲಿಗೆ 200 ರು. ನೋಟುಗಳನ್ನು ತುಂಬಲಾಗುತ್ತದೆ. ಆದಾಗ್ಯೂ ಎಟಿಎಂಗಳಲ್ಲಿ 2000 ರು. ಮುಖಬೆಲೆಯ ನೋಟುಗಳು ಉಳಿದಿದ್ದರೆ, ಮಾ.1ರ ಬಳಿಕ ಅವನ್ನು ಬ್ಯಾಂಕು ವಾಪಸ್‌ ಪಡೆಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಇಂಡಿಯನ್‌ ಬ್ಯಾಂಕ್‌ನ ಡಿಜಿಟಲ್‌ ಬ್ಯಾಂಕ್‌ ವಿಭಾಗ ಫೆ.17ರಂದು ಸುತ್ತೋಲೆ ಕೂಡ ಹೊರಡಿಸಿದೆ. ಎಲ್ಲ ಎಟಿಎಂಗಳಲ್ಲಿ 2000 ರು. ನೋಟು ತುಂಬು ಕೆಸೆಟ್‌ಗಳನ್ನು ಮಾ.1ರಂದು ನಿಷ್ಕಿ್ರಯಗೊಳಿಸಲಾಗುತ್ತದೆ. ಶಾಖೆಗಳ ಮೂಲಕ ಆ ನೋಟನ್ನು ನೀಡಲಾಗುತ್ತದೆ ಎಂದು ಅದರಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ