ನವದೆಹಲಿ[ಮಾ.10]: ಹಗರಣಪೀಡಿತ ಯಸ್‌ ಬ್ಯಾಂಕ್‌ನ ಪುನಶ್ಚೇತನ ಯೋಜನೆ ಭಾಗವಾಗಿ ಬ್ಯಾಂಕ್‌ನ ಗ್ರಾಹಕರ ಮೇಲೆ ಹೇರಲಾಗಿದ್ದ ಮಾಸಿಕ ಗರಿಷ್ಠ 50000 ರು. ಹಿಂಪಡೆತ ಮಿತಿ ಶೀಘ್ರವೇ ರದ್ದಾಗುವ ಸುಳಿವನ್ನು ಆರ್‌ಬಿಐನಿಂದ ನೇಮಕಗೊಂಡಿರುವ ಬ್ಯಾಂಕ್‌ನ ಆಡಳಿತಾಧಿಕಾರಿ ನೀಡಿದ್ದಾರೆ. ಜೊತೆಗೆ ಇಂಥ ಶುಭ ಸುದ್ದಿ ಈ ವಾರಾಂತ್ಯದಲ್ಲೇ ಸಿಗಬಹುದು ಎಂದೂ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಯಸ್‌ ಬ್ಯಾಂಕ್‌ನ ಆಡಳಿತಾಧಿಕಾರಿ ಪ್ರಶಾಂತ್‌ ಕುಮಾರ್‌, ‘ನಮಗೆ ಗ್ರಾಹಕರೇ ಮೊದಲ ಆದ್ಯತೆ. ಹೀಗಾಗಿಯೇ ಈಗಾಗಲೇ ಯಾವುದೇ ಬ್ಯಾಂಕ್‌ನಿಂದ ಹಣ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಬ್ಯಾಂಕ್‌ನಲ್ಲಿನ ತಮ್ಮ ಹಣದ ಬಗ್ಗೆ ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಮಾಸಿಕ ಗರಿಷ್ಠ 50000 ರು.ಮಾತ್ರ ಹಿಂಪಡೆಯಬಹುದು ಎಂಬ ನಿಯಮ ಶೀಘ್ರವೇ ಹಿಂಪಡೆಯಲಾಗುವುದು. ಅದು ಇದೇ ಶನಿವಾರದೊಳಗೆ ಆದರೂ ಆಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್‌ಬಿಐ ನೇತೃತ್ವದಲ್ಲಿ ಯಸ್‌ ಬ್ಯಾಂಕ್‌ ಪುನಶ್ಚೇತನಕ್ಕೆ ಮಾಡಿರುವ ಯೋಜನೆಗೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಅಂತಿಮ ಒಪ್ಪಿಗೆ ನೀಡಿದಾಕ್ಷಣ, ಯಸ್‌ ಬ್ಯಾಂಕ್‌ ಮೇಲೆ ಹೇರಿರುವ ವಿವಿಧ ನಿರ್ಬಂಧಗಳು ಹಿಂದಕ್ಕೆ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಬ್ಯಾಂಕ್‌ನ ಗ್ರಾಹಕರು ಬ್ಯಾಂಕ್‌ಗಳಲ್ಲಿ ಸರದಿ ನಿಲ್ಲುವ ಬದಲು ಡೆಬಿಟ್‌ ಕಾರ್ಡ್‌ಗಳ ಮೂಲಕ ಹಣ ಹಿಂಪಡೆಯಬಹುದು ಮತ್ತು ಯಾವುದೇ ಬ್ಯಾಂಕ್‌ನ ಎಟಿಎಂಗಳಿಂದಲೂ ಹಣ ಹಿಂಪಡೆಯಲು ಅವಕಾಶ ನೀಡಿದ ಬೆನ್ನಲ್ಲೇ, ಹೊರಬಿದ್ದಿರುವ ಈ ಹೇಳಿಕೆ ಯಸ್‌ ಬ್ಯಾಂಕ್‌ನ ಲಕ್ಷಾಂತರ ಗ್ರಾಹಕರಿಗೆ ಮತ್ತಷ್ಟು ನಿರಾಳತೆ ತಂದಿದೆ.