ನವದೆಹಲಿ[ಮಾ.09]: ಖಾಸಗಿ ಸ್ವಾಮ್ಯದ ಯಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಬ್ಯಾಂಕಿನ ಸಂಸ್ಥಾಪಕ ರಾಣಾ ಕಪೂರ್‌ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು, ಕಪೂರ್‌ ಕುಟುಂಬದ ಬಳಿ ಬರೋಬ್ಬರಿ 2000 ಕೋಟಿ ರು. ಆಸ್ತಿ, ಡಜನ್‌ ಶೆಲ್‌ (ಅಸ್ತಿತ್ವದಲ್ಲಿಲ್ಲದ) ಕಂಪನಿ ಹಾಗೂ ದುಬಾರಿಯ ಬೆಲೆಯ 44 ಪೇಂಟಿಂಗ್‌ಗಳನ್ನು ಪತ್ತೆ ಹಚ್ಚಿದೆ.

"

ಕಪೂರ್‌ ಕುಟುಂಬ ಲಂಡನ್‌ನಲ್ಲೂ ಆಸ್ತಿ ಹೊಂದಿರುವುದು ವಶಪಡಿಸಿಕೊಳ್ಳಲಾದ ದಾಖಲೆಗಳಿಂದ ತಿಳಿದುಬಂದಿದೆ. ಇಷ್ಟೆಲ್ಲಾ ಆಸ್ತಿಗೆ ಕಪೂರ್‌ ಕುಟುಂಬಕ್ಕೆ ಹಣ ಎಲ್ಲಿಂದ ಬಂತು ಎಂಬ ನಿಟ್ಟಿನಲ್ಲಿ ಇ.ಡಿ. ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಯಸ್‌ ಬ್ಯಾಂಕಲ್ಲಿ ಕಪೂರ್‌ ಅಕ್ರಮ ಏನು?:

ಯಸ್‌ ಬ್ಯಾಂಕಿಗೆ ಕಪೂರ್‌ ಅವರು ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿದ್ದಾಗ ಹಗರಣಪೀಡಿತ ಡಿಎಚ್‌ಎಫ್‌ಎಲ್‌ ಕಂಪನಿಗೆ ಯಸ್‌ ಬ್ಯಾಂಕ್‌ನಿಂದ 3 ಸಾವಿರ ಕೋಟಿ ರು. ಸಾಲ ಮಂಜೂರಾಗಿತ್ತು. ಆದರೆ ಡಿಎಚ್‌ಎಫ್‌ಎಲ್‌ ಸಾಲ ಮರುಪಾವತಿಸಿರಲಿಲ್ಲ. ಯಸ್‌ ಬ್ಯಾಂಕ್‌ ಸಾಲ ವಸೂಲಾತಿಗೆ ಯಾವುದೇ ಕ್ರಮಗಳನ್ನೂ ಕೈಗೊಂಡಿರಲಿಲ್ಲ.

ಈ ನಡುವೆ, ಕಪೂರ್‌, ಅವರ ಪತ್ನಿ ಬಿಂದು ಹಾಗೂ ಮೂವರು ಪುತ್ರಿಯರ ನಿಯಂತ್ರಣದಲ್ಲಿರುವ ಡುಐಟಿ ಅರ್ಬನ್‌ ವೆಂಚ​ರ್‍ಸ್ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಡಿಎಚ್‌ಎಫ್‌ಎಲ್‌ಗೆ ಸಂಬಂಧಿಸಿದ ಕಂಪನಿಯೊಂದರಿಂದ 600 ಕೋಟಿ ರು. ವರ್ಗವಾಗಿತ್ತು. ಡಿಎಚ್‌ಎಫ್‌ಎಲ್‌ ಸಾಲ ಮರುಪಾವತಿಸದಿದ್ದರೂ ಯಸ್‌ ಬ್ಯಾಂಕ್‌ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೂ, ಕಪೂರ್‌ ಕುಟುಂಬದ ಕಂಪನಿಗೆ 600 ಕೋಟಿ ರು. ಕಂಪನಿಗೆ ಹಣ ವರ್ಗಾವಣೆಯಾಗಿದ್ದಕ್ಕೂ ಸಂಬಂಧವಿದೆ. ಪ್ರತಿಫಲಾಪೇಕ್ಷೆ ರೀತಿಯ ವ್ಯವಹಾರ ಇದಾಗಿರಬಹುದು ಎಂಬ ಶಂಕೆಯ ಮೇರೆಗೆ ಜಾರಿ ನಿರ್ದೇಶನಾಲಯಯ ತನಿಖೆ ನಡೆಸುತ್ತಿದೆ. 600 ಕೋಟಿ ರು. ಹಣವನ್ನು ವರ್ಗಾವಣೆ ಮಾಡಲು ಡಜನ್‌ ಶೆಲ್‌ ಕಂಪನಿಗಳನ್ನು ಬಳಸಿಕೊಂಡಿರಬಹುದು ಎಂಬ ಗುಮಾನಿಯೂ ಇದೆ.