ನವದೆಹಲಿ[ಮಾ.08]: ಆರ್ಥಿಕ ಸಂಕಷ್ಟದಲ್ಲಿರುವ ಯಸ್‌ ಬ್ಯಾಂಕ್‌ಗೆ ಸತತ 2ನೇ ದಿನವಾದ ಶನಿವಾರ ಕೂಡ ಖಾತೆದಾರರು ಹಣ ಹಿಂಪಡೆಯಲು ಮುಗಿಬಿದ್ದರು. ಈ ವೇಳೆ ಎಟಿಎಂಗಳಲ್ಲಿ ಹಣ ಖಾಲಿಯಾಗಿ ಗ್ರಾಹಕರು ಪರಾಡಿದರೆ, ಬ್ಯಾಂಕ್‌ಗಳ ಕ್ಯಾಶ್‌ ಕೌಂಟರ್‌ ಮುಂದೆ ಭಾರೀ ಉದ್ದದ ಸರದಿ ಸಾಲುಗಳಲ್ಲಿ ನಿಂತು ಜನ ಸುಸ್ತಾದರು.

ತಿಂಗಳಿಗೆ 50 ಸಾವಿರ ರು. ಮಾತ್ರ ಹಿಂಪಡೆಯಲು ರಿಸವ್‌ರ್‍ ಬ್ಯಾಂಕ್‌ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಗಾಬರಿಗೆ ಬಿದ್ದಿರುವ ಗ್ರಾಹಕರು ತಮ್ಮ ಅಳಿದುಳಿದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಬ್ಯಾಂಕ್‌ಗೆ ಎಡತಾಕಲು ಆರಂಭಿಸಿದ್ದಾರೆ.

‘ಅನೇಕ ಯಸ್‌ ಬ್ಯಾಂಕ್‌ ಎಟಿಎಂಗಳಲ್ಲಿ ಹಣ ಇರಲಿಲ್ಲ. ಹೀಗಾಗಿ ಹಣ ಸಿಗಲಿಲ್ಲ. ಶಾಖೆಗಳಲ್ಲಿ 50 ಸಾವಿರ ರು. ಚೆಕ್‌ ನೀಡಿ ಹಣ ಪಡೆಯಲು ಸಾಧ್ಯವಾಯಿತು. ಇದರಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ’ ಎಂದು ದಿಲ್ಲಿಯಲ್ಲಿನ ಕೆಲವು ಗ್ರಾಹಕರು ಹೇಳಿದರು.

ನೆಟ್‌ ಬ್ಯಾಂಕಿಂಗ್‌ ಸೇವೆ ಕೂಡ ವ್ಯತ್ಯಯವಾಗಿದೆ. ಜತೆಗೆ ಕ್ರೆಡಿಟ್‌ ಕಾರ್ಡ್‌ಗಳು ಕೂಡ ಕೆಲಸ ಮಾಡುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಇನ್ನು ಹಲವಾರು ಎಟಿಎಂಗಳಲ್ಲಿ ಹಣ ಇರಲಿಲ್ಲ. ಇನ್ನು ಕೆಲವು ಎಟಿಎಂಗಳಲ್ಲಿ 3ರಿಂದ 4 ಸಾವಿರ ರು. ಮಿತಿ ವಿಧಿಸಿದ್ದು ಕೂಡ ತಲೆನೋವಾಯಿತು ಎಂದು ದೂರಲಾಗಿದೆ.

ಸಂಸತ್‌ ಬೀದಿಯ ಅಂಚೆ ಕಚೇರಿಯಲ್ಲಿ, ‘ಆರ್‌ಬಿಐ ಮುಂದಿನ ಆದೇಶದತನಕ ಯಸ್‌ ಬ್ಯಾಂಕ್‌ ಚೆಕ್‌ ಕ್ಲಿಯರ್‌ ಮಾಡುವುದಿಲ್ಲ’ ಎಂದು ಬರೆದದ್ದು ಕಂಡುಬಂತು.