ವಿಶ್ವದ ಮೊದಲ ಎಐ ಸಾಫ್ಟ್ ವೇರ್ ಇಂಜಿನಿಯರ್ ಬಿಡುಗಡೆ; ಇದು ಕೋಡ್ ಬರೆಯಬಲ್ಲದು, ಸಾಫ್ಟ್ ವೇರ್ ಸೃಷ್ಟಿಸಬಲ್ಲದು!
ವಿಶ್ವದ ಮೊದಲ ಎಐ ಸಾಫ್ಟ್ ವೇರ್ ಇಂಜಿನಿಯರ್ ಡೆವಿನ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಸಾಧನ ಮಾನವ ಸಾಫ್ಟ್ ವೇರ್ ಇಂಜಿನಿಯರ್ ಮಾದರಿಯಲ್ಲಿ ಕೋಡ್ ಬರೆಯೋದ್ರಿಂದ ಹಿಡಿದು ಸಾಫ್ಟ್ ವೇರ್ ಸೃಷ್ಟಿ ತನಕ ಎಲ್ಲ ಕೆಲಸಗಳನ್ನು ಮಾಡಬಲ್ಲದು.
ನವದೆಹಲಿ (ಮಾ.13): ವಿಶ್ವದ ಮೊದಲ ಎಐ ಸಾಫ್ಟ್ ವೇರ್ ಇಂಜಿನಿಯರ್ ಅನ್ನು ಪರಿಚಯಿಸಲಾಗಿದೆ. ಕಾಗ್ನಿಷಿಯನ್ ಕಂಪನಿ ಸೃಷ್ಟಿಸಿರುವ ಈ ಎಐ ಸಾಫ್ಟ್ ವೇರ್ ಇಂಜಿನಿಯರ್ ಕೋಡಿಂಗ್ ಮಾಡಲು, ವೆಬ್ ಸೈಟ್ ಹಾಗೂ ಸಾಫ್ಟ್ ವೇರ್ ಸೃಷ್ಟಿಸಲು ಸಮರ್ಥವಾಗಿದೆ. ಇದನ್ನು ಮಾನವ ಇಂಜಿನಿಯರ್ ಗಳ ಜೊತೆಗೆ ಕೆಲಸ ಮಾಡುವ ಉದ್ದೇಶದಿಂದ ಸೃಷ್ಟಿಸಲಾಗಿದೆ. ಅಂದ ಹಾಗೇ ಈ ಎಐ ಸಾಫ್ಟ್ ವೇರ್ ಇಂಜಿನಿಯರ್ ಗೆ 'ಡೆವಿನ್' ಎಂಬ ಹೆಸರು ನೀಡಲಾಗಿದೆ. ನೀವು ಯಾವುದೇ ಸೂಚನೆ ನೀಡಿದರೂ ಅದನ್ನು ಡೆವಿನ್ ಮಾಡಬಲ್ಲದು. ಇನ್ನು ಕೃತಕ ಬುದ್ಧಿಮತ್ತೆ ಹಲವರ ಉದ್ಯೋಗಕ್ಕೆ ಕುತ್ತು ತರಲಿದೆ ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಈ ಬಗ್ಗೆ ಕಾಗ್ನಿಷಿಯನ್ ಸ್ಪಷ್ಟನೆ ನೀಡಿದೆ. ಅದೇನೆಂದರೆ ಮಾನವ ಇಂಜಿನಿಯರ್ ಗಳ ಸ್ಥಾನವನ್ನು ಆಕ್ರಮಿಸುವ ಉದ್ದೇಶದಿಂದ ಡೆವಿನ್ ಅನ್ನು ಸೃಷ್ಟಿಸಿಲ್ಲ. ಬದಲಿಗೆ ಇದು ಮಾನವ ಇಂಜಿನಿಯರ್ ಗಳ ಜೊತೆ ಜೊತೆಗೆ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿಯನ್ನು ನೀಡಿದೆ. ಈ ಇಂಜಿನ್ ಅನ್ನು ಮಾನವರ ಕೆಲಸವನ್ನು ಸುಲಭಗೊಳಿಸುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ಈ ಸಂಸ್ಥೆ ತಿಳಿಸಿದೆ.
'ಇಂದು ನಾವು ಮೊದಲ ಸಾಫ್ಟ್ ವೇರ್ ಇಂಜಿನಿಯರ್ ಡೆವಿನ್ ಅನ್ನು ಪರಿಚಯಿಸಲು ಸಂತಸಪಡುತ್ತೇವೆ. ಅಗಗ್ರಣ್ಯ ಎಐ ಕಂಪನಿಗಳಿಂದ ಪ್ರಾಯೋಗಿಕ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಡೆವಿನ್ ತೇರ್ಗಡೆ ಹೊಂದಿದೆ. ಅಲ್ಲದೆ, ಇದು ಅಪ್ ವರ್ಕ್ ನಲ್ಲಿ ಕೆಲಸ ಕೂಡ ನಿರ್ವಹಿಸಿದೆ. ಡೆವಿನ್ ಅಟೋನಮಸ್ ಏಜೆಂಟ್ ಆಗಿದ್ದು, ಇಂಜಿನಿಯರಿಂಗ್ ಕೆಲಸಗಳನ್ನು ತನ್ನ ಸ್ವಂತ ಶೆಲ್, ಕೋಡ್ ಎಡಿಟರ್ ಹಾಗೂ ವೆಬ್ ಬ್ರೌಸರ್ ಮೂಲಕ ಮಾಡುತ್ತದೆ' ಎಂದು ಕಾಗ್ನಿಷಿಯನ್ 'ಎಕ್ಸ್' ನಲ್ಲಿ ಪೋಸ್ಟ್ ಹಾಕಿದೆ.
ಭವಿಷ್ಯದ ಬಗ್ಗೆ ಯೋಚಿಸುವ ಹಾಗೂ ಸಂಕೀರ್ಣ ಕಾರ್ಯಗಳನ್ನು ಪ್ಲ್ಯಾನ್ ಮಾಡುವ ಸಾಮರ್ಥ್ಯ ಡೆವಿನ್ ಅನ್ನು ವಿಶೇಷ ಹಾಗೂ ವಿಭಿನ್ನವಾಗಿಸಿದೆ. ಇದು ಸಾವಿರಾರು ನಿರ್ಧಾರಗಳನ್ನು ಕೈಗೊಳ್ಳಬಲ್ಲದು. ಅಲ್ಲದೆ, ತನ್ನ ತಪ್ಪುಗಳಿಂದ ಪಾಠ ಕಲಿಯಬಲ್ಲದು ಹಾಗೂ ಸಮಯ ಸರಿದಂತೆ ತನ್ನನ್ನು ತಾನು ಉತ್ತಮ ಪಡಿಸಿಕೊಳ್ಳಬಲ್ಲದು. ಇದರೊಂದಿಗೆ ಡೆವಿನ್ ಮಾನವ ಇಂಜಿನಿಯರ್ ಗೆ ಅಗತ್ಯವಾಗಿರುವ ಕೋಡ್ ಎಡಿಟರ್ ಹಾಗೂ ಬ್ರೌಸರ್ ಸೇರಿದಂತೆ ಎಲ್ಲ ಸಾಧನಗಳನ್ನು ಹೊಂದಿದೆ.
ಡೆವಿನ್ ಅನ್ನು ಸಾಫ್ಟ್ ವೇರ್ ಇಂಜಿನಿಯರಿಂಗ್ ಕಾರ್ಯಗಳನ್ನು ಮೌಲ್ಯಮಾಪನ ಮಾಡುವ ಅತ್ಯಂತ ಮುಂದುವರಿದ ತಂತ್ರಜ್ಞಾನ ಎಂದು ಪರಿಗಣಿಸಬಹುದು. ಇತರ ಕೆಲವು ಸಾಧನಗಳಿಗೆ ಹೋಲಿಸಿದರೆ ಇದು ಅತ್ಯದ್ಭುತವಾಗಿ ಕಾರ್ಯನಿರ್ವಹಿಸಿದೆ. ಸಾಫ್ಟ್ ವೇರ್ ಇಂಜಿನಿಯರಿಂಗ್ ಸಮಸ್ಯೆಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಆಧಾರವಾಗಿಸಿಕೊಂಡು ಪರೀಕ್ಷಿಸಿದಾಗ ಈ ವಿಚಾರ ತಿಳಿದು ಬಂದಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಂಪನಿಗಳ ಉನ್ನತ ಅಧಿಕಾರಿಗಳು ನಡೆಸಿದ ಪ್ರಾಯೋಗಿಕ ಇಂಜಿನಿಯರಿಂಗ್ ಸಂಬಂಧಿ ಸಂದರ್ಶನಗಳಲ್ಲಿ ಕೂಡ ಈ ಎಐ ಸಾಧನ ಉತ್ತಮ ನಿರ್ವಹಣೆ ತೋರಿದೆ.
ಸುದ್ದಿ ವಾಚಕಿಯಾಯ್ತು, ಈಗ ಕೇರಳ ಶಾಲೆಗೆ ಬಂದ್ರು ಐರಿಸ್ ಮೇಡಂ! ಮಕ್ಕಳ ಅಚ್ಚುಮೆಚ್ಚು ಈ ರೋಬೋಟ್ ಟೀಚರ್
ಹೊಸ ತಂತ್ರಜ್ಞಾನಗಳ ಕಲಿಕೆಯಿಂದ ಹಿಡಿದು ಅಪ್ಲಿಕೇಷನ್ ಗಳ ನಿರ್ಮಾಣದ ಹಾಗೂ ನಿರ್ವಹಣೆ ತನಕ ಪ್ರಾರಂಭದಿಂದ ಅಂತ್ಯದ ತನಕ, ಕೋಡ್ ಅಲ್ಲಿನ ಸಮಸ್ಯೆಗಳ ನಿವಾರಣೆ ತನಕ ಎಲ್ಲ ಕಾರ್ಯಗಳನ್ನು ಇದು ಮಾಡಬಲ್ಲದು. ಅಲ್ಲದೆ, ಇದು ತನ್ನಂತಹ ಎಐ ಮಾದರಿಗಳಿಗೆ ತರಬೇತಿ ಕೂಡ ನೀಡಬಲ್ಲದು.
ಈ ಹಿಂದಿನ ಎಐ ಮಾದರಿಗಳಿಗೆ ಹೋಲಿಸಿದರೆ ಡೆವಿನ್ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಹಿಂದಿನ ಮಾದರಿಗಳು ಕೇವಲ ಶೇ.2ರಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರೆ, ಡೆವಿನ್ ಅಂದಾಜು ಶೇ.14ರಷ್ಟು ಸಮಸ್ಯೆಗಳನ್ನು ಪರಿಹರಿಸಿದೆ. ಈ ಮೂಲಕ ಸಾಫ್ಟ್ ವೇರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡಿದೆ.