Asianet Suvarna News Asianet Suvarna News

ಮಹಿಳಾ ಹೂಡಿಕೆದಾರರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್ : ಹೂಡಿಕೆಗೂ ಮುನ್ನ ಈ 4 ಕೆಲಸ ಮಾಡಿ

ಮಹಿಳೆಯರು ಕೂಡ ಇಂದು ಹೂಡಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ. ಹೀಗಿರುವಾಗ ಹೂಡಿಕೆ ಮಾಡುವ ಮುನ್ನ ಮಹಿಳೆಯರು ಯಾವೆಲ್ಲ ವಿಚಾರಗಳಿಗೆ ಆದ್ಯತೆ ನೀಡಬೇಕು? ಇಲ್ಲಿದೆ 4 ಟಿಪ್ಸ್. 

Women Investors 4 Tips Women Must Reflect Before Investing anu
Author
First Published Mar 23, 2024, 6:01 PM IST

Business Desk: ಇಂದು ಮಹಿಳೆಯರು ಉದ್ಯಮ, ಹೂಡಿಕೆ ವಿಚಾರಗಳಲ್ಲಿ ಕೂಡ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.  ಮಹಿಳೆಯರು ಉದ್ಯಮಗಳಲ್ಲಿ ತೊಡಗಿದ್ದು, ಈ ಕ್ಷೇತ್ರ ಬರೀ ಪುರುಷರಿಗಷ್ಟೇ ಸೀಮಿತ ಎಂಬ ಭಾವನೆಯನ್ನು ತೊಡೆದು ಹಾಕಿ ಯಶಸ್ಸು ಗಳಿಸಿದ್ದಾರೆ. ಇಂದು ಭಾರತದ ಅನೇಕ ಸ್ಟಾರ್ಟ್ ಅಪ್ ಗಳ ಸ್ಥಾಪಕರು ಕೂಡ ಮಹಿಳೆಯರೇ ಆಗಿದ್ದಾರೆ. ಇನ್ನು ಹೂಡಿಕೆ ವಿಚಾರದಲ್ಲೂ ಅಷ್ಟೇ, ಮಹಿಳೆ ಹಿಂದಿಗಿಂತ ಇಂದು ಸಾಕಷ್ಟು ಮುಂದಿದ್ದಾಳೆ. ಮನೆಯ ಹಣಕಾಸಿನ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುವ ಮಹಿಳೆ, ಈಕ್ವಿಟಿ ಮಾರುಕಟ್ಟೆಗಳಲ್ಲಿ ಕೂಡ ಹೂಡಿಕೆ ಮಾಡುವಷ್ಟು ಮುಂದುವರಿದಿದ್ದಾಳೆ. ಹಣಕಾಸು ಸಾಕ್ಷರತೆ ಅಂತರ ಹಾಗೂ ಲಿಂಗ ತಾರತಮ್ಯದ ನಡುವೆಯೂ ಮಹಿಳೆ ಹಣಕಾಸಿನ ನಿರ್ವಹಣೆಯನ್ನು ಮಾಡುತ್ತಿದ್ದಾಳೆ. ತಾನು ದುಡಿಯೋದು ಮಾತ್ರವಲ್ಲ, ದುಡಿದ ಹಣವನ್ನು ಸಮರ್ಪಕವಾಗಿ ಹೂಡಿಕೆ ಕೂಡ ಮಾಡಬಲ್ಲೆ ಎಂಬುದನ್ನು ಮಹಿಳೆ ಸಾಧಿಸಿ ತೋರಲು ಮುಂದಾಗಿದ್ದಾಳೆ. ಹೂಡಿಕೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿರುವ ಮಹಿಳೆಯರು ಹೂಡಿಕೆ ಮಾಡುವಾಗ ಕೆಲವೊಂದು ವಿಚಾರಗಳನ್ನು ಗಮನಿಸೋದು, ಅನುಸರಿಸೋದು ಅಗತ್ಯ. ಹಾಗಾದ್ರೆ ಏನದು? ಇಲ್ಲಿದೆ ಮಾಹಿತಿ.

1.ಹಣಕಾಸಿನ ಸಾಕ್ಷರತೆ ಹೆಚ್ಚಿಸಿಕೊಳ್ಳಿ: ಹೂಡಿಕೆ ಮಾಡುವ ಮುನ್ನ ಆ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸೋದು ಅಗತ್ಯ. ಇದರಿಂದ ಯಾವುದೇ ಅಪಾಯ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಹೂಡಿಕೆಗಿರುವ ಆಯ್ಕೆಗಳು, ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಸ್, ಕೈಗಾರಿಕೆ ಹಾಗೂ ಆರ್ಥಿಕ ಸೈಕಲ್ ಗಳು, ನಿರ್ವಹಣಾ ನೀತಿಗಳು, ವಿವಿಧ ಹೂಡಿಕೆಯ ರಿಟರ್ನ್ಸ್ ಮುಂತಾದ ಮಾಹಿತಿಗಳನ್ನು ಹೊಂದಿರೋದು ಅಗತ್ಯ. ಹಾಗೆಯೇ ಹೂಡಿಕೆಯಲ್ಲಿನ ಅಪಾಯಗಳ ಬಗ್ಗೆಯೂ ಮಾಹಿತಿ ಇರೋದು ಒಳ್ಳೆಯದು. ಹಾಗೆಯೇ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಎಐ ಆಧಾರಿತ ಹಣಕಾಸು ಸಾಧನಗಳ ಮಾಹಿತಿಯನ್ನು ಕೂಡ ಹೊಂದಿರಬೇಕು. ಡಿಮ್ಯಾಟ್ ಖಾತೆ, ವಿವಿಧ ಹೂಡಿಕೆ ಯೋಜನೆಗಳು ಸೇರಿದಂತೆ ಮೂಲಭೂತ ಜ್ಞಾನವನ್ನು ಹೊಂದಿರೋದು ಕೂಡ ಹೂಡಿಕೆಗೆ ಅಗತ್ಯ. 

ಉದ್ಯಮ ಯಾವುದೇ ಇರಲಿ, ಈ 4 ಮಾರ್ಕೆಟಿಂಗ್ ತಂತ್ರ ಬಳಸಿದ್ರೆ ದುಡ್ಡು ಮಾಡೋದು ಸುಲಭ!

2.ಅಗತ್ಯಗಳನ್ನು ವರ್ಗೀಕರಿಸಿ, ಸೂಕ್ತ ಹಣಕಾಸು ಯೋಜನೆ ರೂಪಿಸಿ: ಇನ್ನು ಹೂಡಿಕೆ ಮಾಡುವ ಮುನ್ನ ನೀವು ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ನಿವೃತ್ತಿ ಯೋಜನೆ, ಆರ್ಥಿಕಾ ಸ್ವಾವಲಂಬನೆ, ಮಕ್ಕಳ ಶಿಕ್ಷಣ ಹೀಗೆ ಯಾವ ಉದ್ದೇಶಕ್ಕೆ ಹೂಡಿಕೆ ಎಂಬುದನ್ನು ನಿರ್ಧರಿಸಿ. ಇದರಿಂದ ಎಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಅವಧಿಗೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಹೀಗಾಗಿ ನಿಮ್ಮ ಅಗತ್ಯಗಳನ್ನು ವರ್ಗೀಕರಿಸಿ, ಅದಕ್ಕೆ ಅನುಗುಣವಾಗಿ ಹೂಡಿಕೆ ಮಾಡಿ. 

3.ಸೂಕ್ತ ಯೋಜನೆ ರೂಪಿಸಿ, ಹೂಡಿಕೆಯನ್ನು ಹಂಚಿ: ಯಾವತ್ತೂ ಹೂಡಿಕೆಯನ್ನು ಒಂದೇ ಕಡೆ ಮಾಡಬಾರದು. ಹೂಡಿಕೆ ಹಂಚಿದಷ್ಟು ಅಪಾಯ ಕಡಿಮೆ. ಹೀಗಾಗಿ ಮ್ಯೂಚುವಲ್ ಫಂಡ್ಸ್, ಷೇರುಗಳು, ಬಾಂಡ್ಸ್ ಹಾಗೂ ವಿಮೆ ಸೇರಿದಂತೆ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿ. ಹಾಗೆಯೇ ಕೆಲವೊಂದು ಹೂಡಿಕೆಗಳ ಮೇಲೆ ತೆರಿಗೆ ಪ್ರಯೋಜನ ಕೂಡ ಇರುತ್ತದೆ. ಹೀಗಾಗಿ ನಿಮ್ಮ ಹೂಡಿಕೆ ಯೋಜನೆಗಳಲ್ಲಿ ಇಂಥ ಹೂಡಿಕೆಗಳಿಗೂ ಆದ್ಯತೆ ಇರುವಂತೆ ನೋಡಿಕೊಳ್ಳಿ.

ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದೀರಾ? ಹಾಗಾದ್ರೆ ಈ ಎಲ್ಲ ಶುಲ್ಕಗಳ ಬಗ್ಗೆ ಮಾಹಿತಿ ಇರಲಿ

4.ಉತ್ತಮ ಹಣಕಾಸು ವ್ಯವಸ್ಥೆಗೆ ಮಾರ್ಗದರ್ಶನ ಪಡೆಯಿರಿ: ಹೂಡಿಕೆ ಮಾಡುವಾಗ ಅನೇಕ ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಯಾವುದೇ ಗೊಂದಲ ಅಥವಾ ಮಾಹಿತಿ ಕೊರತೆ ಎದುರಾದ್ರೆ ಹೂಡಿಕೆ ತಜ್ಞರ ಸಲಹೆ ಹಾಗೂ ಮಾರ್ಗದರ್ಶನ ಪಡೆಯೋದು ಉತ್ತಮ. ಇದರಿಂದ ಹೂಡಿಕೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಗಳಿಸಬಹುದು ಎಂಬುದನ್ನು ತಜ್ಞರು ತಿಳಿದುವ ಕಾರಣ ನಿಮ್ಮ ಹೂಡಿಕೆ ಯೋಜನೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ. 

Follow Us:
Download App:
  • android
  • ios