Asianet Suvarna News Asianet Suvarna News

ಸಾಲಮನ್ನಾ ಕೃಷಿ ವ್ಯವಸ್ಥೆಯನ್ನು ಸಬಲಗೊಳಿಸುತ್ತಾ?: ಓದಿ, ಓದಿಸಿ!

ಅನ್ನದಾತನ ನೆರವಿಗೆ ಬರುತ್ತಾ ಸಾಲಮನ್ನಾ ಯೋಜನೆ?! ಸಾಲಮನ್ನಾ ಕೃಷಿ ವ್ಯವಸ್ಥೆಯನ್ನು ಸಬಲಗೊಳಿಸುತ್ತಾ?! ಮೂಲಭೂತ ಸೌಕರ್ಯ ಕಲ್ಪಿಸುವುದು ಸರ್ಕಾರದ ಕೆಲಸ ಅಲ್ಲವೇ?! ಸಾಲಮನ್ನಾ ಎಂಬ ಭೂತವನ್ನು ಶಾಶ್ವತವಾಗಿ ತೆಗೆದು ಹಾಕಬೇಕು! ಸಾಲಮನ್ನಾದಿಂದ ರೈತರ ಸ್ವಾಭಿಮಾನವನ್ನು ಹಾಳು! ಸಾಲಮನ್ನಾದ ಸುತ್ತ ಅವೈಜ್ಞಾನಿಕ ಸಂಪ್ರದಾಯದ ಅನಾವರಣ
 

Will Loan waiver help agriculture sector
Author
Bengaluru, First Published Sep 26, 2018, 12:49 PM IST

ದೇವರಾಜ ಮೇಟಿ ಲಿಂಗದಳ್ಳಿ

ಬೆಂಗಳೂರು(ಸೆ.26): ಸಾಲಮನ್ನಾ ನಿರೀಕ್ಷೆ ರೈತರಿಂದ ದೂರವಾಗಿ ತಮ್ಮ ಕೃಷಿಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸುವಂತ ಕೆಲಸವನ್ನು ಸರ್ಕಾರ ಮಾಡಬೇಕು. ಯಾವ ರೈತರೂ ಸಾಲಮನ್ನಾ ಮೊರೆ ಹೋಗದೆ ಸರ್ಕಾರದಿಂದ ದೊರೆಯುವ ಮೂಲಭೂತ ಸೌಕರ್ಯಗಳಿಗಾಗಿ ಮಾತ್ರ ಸರ್ಕಾರವನ್ನು ಅವಲಂಬಿಸುವಂತಾಗಬೇಕು.

ಅಂತೂ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಈ ಸರ್ಕಾರದ ಮೊದಲ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಚುನಾವಣಾ ಪೂರ್ವ ಪ್ರಣಾಳಿಕೆಯಂತೆ ಕೊಟ್ಟಮಾತನ್ನು ಉಳಿಸಿಕೊಂಡರೆಂಬುದು ಒಂದೆಡೆಯಾದರೆ, ಈ ಸಾಲಮನ್ನಾ ಎಂಬ ಪರಿಕಲ್ಪನೆಯ ಸುತ್ತ ಇರುವ ಹಲವು ವಿಭಿನ್ನ ವೈಚಾರಿಕ ನಿಲುವುಗಳನ್ನು ವಿಶ್ಲೇಷಿಸುತ್ತಾ ಹೋದಂತೆಲ್ಲ ಈ ಮನ್ನಾ ಪರಿಕಲ್ಪನೆಯ ಸುತ್ತ ಅದೆಷ್ಟೋ ಅವೈಜ್ಞಾನಿಕ ಸಂಪ್ರದಾಯ ಅನಾವರಣಗೊಳ್ಳುತ್ತಾ ಹೋಗುತ್ತದೆ. 

ಎಲ್ಲದಕ್ಕಿಂತ ಮುಖ್ಯವಾಗಿ ಸಾಲಮನ್ನಾ ಎಂಬ ಸಂಪ್ರದಾಯವೇ ನಮ್ಮ ದೇಶದ ಕೃಷಿ ವ್ಯವಸ್ಥೆಯನ್ನು ಅಬಲಗೊಳಿಸುತ್ತಿರುವ ಒಂದು ದೊಡ್ಡ ಮಾರಕ ಶಕ್ತಿಯಾಗಿ ತನ್ನ ಕೆಲಸವನ್ನು ಸಾಧಿಸುತ್ತ ಬಂದಿದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಅಂದಹಾಗೆ ಈ ಮಾತನ್ನು ರೈತ ವಿರೋಧಿ ನಿಲುವು ಎಂತಲೋ, ರೈತರಿಗೆ ಇಂತಹ ಆರ್ಥಿಕ ಅನುಕೂಲತೆಯ ಅಗತ್ಯ ಇಲ್ಲವೆಂತಲೋ ಅರ್ಥೈಸಿಕೊಳ್ಳಬೇಕಾಗಿಲ್ಲ.

ಸಾಲಮನ್ನಾ ಏಕೆ ಬೇಕು?:

ಅದೆಷ್ಟೋ ದಿನಗಳಿಂದ ಊಟ ಸಿಗದೇ ಹಸಿದವನಿಗೆ ತುತ್ತು ಅನ್ನ ನೀಡಿ ಸಮಾಧಾನ ಪಡಿಸಿದರೆ ಆ ವ್ಯಕ್ತಿ ಕ್ಷಣಿಕವಾಗಿ ಸಮಾಧಾನ ಪಡುವುದೇನೋ ಸತ್ಯ. ಆದರೆ ಮರುದಿನ ಮತ್ತದೇ ಹಸಿದ ಹೊಟ್ಟೆಗೆ ಅದೆಲ್ಲಿಯತನಕ ಅನ್ನ ನೀಡಿ ಸಲಹಲು ಸಾಧ್ಯ? ಅದೇ ವ್ಯಕ್ತಿಗೆ ತಾನು ತಿನ್ನಬೇಕಿರುವ ಅನ್ನವನ್ನು ತಾನೇ ತಯಾರಿಸಿಕೊಳ್ಳುವಂತೆ ಅನುಕೂಲತೆಗಳನ್ನು ಕಲ್ಪಿಸಿ ಸ್ವಾವಲಂಬಿಯನ್ನಾಗಿ ಮಾಡಿದರೆ ಮತ್ತೊಬ್ಬರ ಸಹಾಯದ ಅಗತ್ಯತೆ ಅವನಿಗಿರುವುದಿಲ್ಲ. 

ಈ ಸಾಲಮನ್ನಾ ಎಂಬುದು ಇದಕ್ಕೆ ಹೊರತಾಗಿಲ್ಲ. ಪ್ರತಿ ವರ್ಷವೂ ನಷ್ಟಅನುಭವಿಸುತ್ತ ಬಂದಿರುವ ರೈತನಿಗೆ 5 ವರ್ಷಕ್ಕೊಮ್ಮೆಯೋ 10 ವರ್ಷಕ್ಕೊಮ್ಮೆಯೋ ಸಾಲಮನ್ನಾ ಮಾಡಿದರೆ ಆ ರೈತ ಉದ್ದಾರ ಆಗುತ್ತಾನೆಂದು ಭಾವಿಸಿದರೆ, ಅದೊಂದು ಮೂರ್ಖತನದ ಪರಮಾವಧಿಯಲ್ಲದೇ ಮತ್ತೇನೂ ಅಲ್ಲ. 

ಸಾಲಮನ್ನಾ ಮಾಡುವ ಮೂಲಕ ರೈತರನ್ನು ಸರ್ಕಾರದ ಮುಂದೆ ಕೈಯೊಡ್ಡುವ ಭಿಕ್ಷುಕರನ್ನಾಗಿ ಮಾಡುವ ಬದಲು ಕೃಷಿಗೆ ಅಗತ್ಯ ಉಪಕರಣಗಳನ್ನು ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿ ಬೆಳೆಗೆ ಸೂಕ್ತ ಬೆಲೆ ನಿಗದಿಪಡಿಸಿದರೆ ಯಾವ ರೈತ ಬಡವನಾದಾನು? ಅಷ್ಟಕ್ಕೂ ಸಾಲಮನ್ನಾ ಮಾಡುವುದೇ ಆದರೆ, ಆ ಸೌಲಭ್ಯಕ್ಕೆ ಅರ್ಹರಾಗಬೇಕಾದರೆ ಪರಿಗಣಿಸಬೇಕಾದ ಮಾನದಂಡಗಳನ್ನು ನೋಡಿದಾಗ ಪ್ರತಿಯೊಂದೂ ಅವೈಜ್ಞಾನಿಕವಾಗಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಸಾಲಮನ್ನಾದ ಮಾನದಂಡ ಏನು?:

ಮೊದಲನೆಯದಾಗಿ ಒಬ್ಬ ಸಾಮಾನ್ಯ ರೈತ ಯಾವುದೇ ಪ್ರಭಾವಿಗಳ ಸಹಕಾರವಿಲ್ಲದೇ ನೇರವಾಗಿ ಬ್ಯಾಂಕಿಗೆ ತೆರಳಿ ಸುಭವಾಗಿ ಸಾಲ ಪಡೆದ ಉದಾಹರಣೆ ನಮ್ಮ ದೇಶದಲ್ಲಿದೆಯೇ? ಸಾಲ ಸಿಗುತ್ತಿರುವುದಾದರೂ ಎಂಥವರಿಗೆ? ಒಬ್ಬ ಪ್ರಭಾವಿ ರಾಜಕೀಯ ನಾಯಕನ ಬೆಂಬಲಿಗರಿಗೆ, ಬ್ಯಾಂಕ್‌ ಅಧಿಕಾರಿಗಳ ಜೊತೆ ನಿಕಟ ಸಂಬಂಧ ಹೊಂದಿದವರಿಗೆ ಹಾಗೂ ಆರ್ಥಿಕವಾಗಿ ಸದೃಢವಾಗಿದ್ದೂ ಕೃಷಿ ಹೆಸರಿನಲ್ಲಿ ವಿವಿದೋದ್ದೇಶಕ್ಕಾಗಿ ಸಾಲ ಪಡೆಯುವ ವ್ಯಕ್ತಿಗಳಿಗೆ. 

ಈ ಕಠೋರ ಸತ್ಯವನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿದೆಯೇ? ಇನ್ನೊಂದು ರೈತ ತಾನು ಪಡೆದ ಸಾಲವನ್ನು ಪ್ರತಿವರ್ಷ ನವೀಕರಿಸಿಕೊಳ್ಳುತ್ತ ಬಂದರೆ ಅಂಥವರಿಗೆ ಕೇವಲ 25 ಸಾವಿರ ರು. ವಿನಾಯ್ತಿ ಮಾತ್ರ ನೀಡಲಾಗಿದೆ ವಿನಃ ಸಾಲ ಮನ್ನಾ ಅನ್ವಯ ಇಲ್ಲ. ಅಂದರೆ ಬ್ಯಾಂಕಿನ ನಿಯಮಗಳನ್ವಯ ರೈತ ಮತ್ತೊಂದು ಕಡೆ ಸಾಲ ಮಾಡಿಯೋ ಅಥವಾ ತನ್ನಲ್ಲಿದ್ದ ಕೃಷಿ ಉಪಕರಣಗಳನ್ನು ಮಾರಿಯೋ ಪ್ರತಿ ವರ್ಷ ನಿಗದಿತ ದಿನಗಳೊಳಗೆ ಸಾಲ ನವೀಕರಿಸಿ ಬ್ಯಾಂಕುಗಳಿಗೆ ತನ್ನ ನಿಷ್ಠೆಯನ್ನು ತೋರಿಸಿದ್ದು ತಪ್ಪೇ?.

ಇನ್ನೊಂದೆಡೆ 5 ಎಕರೆಗಳಿಗಿಂತ ಹೆಚ್ಚು ಜಮೀನು ಹೊಂದಿದ ರೈತನಿಗೆ ಸಾಲಮನ್ನಾ ಯೋಜನೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ. ಹಾಗಿದ್ದರೆ ಅಂತಹ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರ್ಥವೇ? ಕಡಿಮೆ ಭೂಮಿ ಹೊಂದಿದ ರೈತರಿಗಿಂತ ಹೆಚ್ಚು ಭೂಮಿ ಹೊಂದಿದ ರೈತ ಹೆಚ್ಚು ನಷ್ಟವನ್ನು ಅನುಭವಿಸಿರುತ್ತಾನೆ ಎಂಬ ಕನಿಷ್ಠ ಜ್ಞಾನ ಸರ್ಕಾರಕ್ಕಿಲ್ಲವೇ?.

2017ರ ಕೊನೆಯ ದಿನಗಳೊಳಗಾಗಿ ಸಾಲ ಪಡೆದವರಿಗೆ ಮಾತ್ರ ಈ ಯೋಜನೆ ಅನ್ವಯವಾಗುವುದಾದರೆ ಅದರೀಚೆಗೆ ಸಾಲ ಪಡೆದ ರೈತರು ಶ್ರೀಮಂತರು ಎಂದರ್ಥವೇ? ಮನ್ನಾ ಘೋಷಣೆಯ ಬಳಿಕ ಒಬ್ಬ ರೈತ ಮನ್ನಾ ಯೋಜನೆ ತನಗೆ ಅನ್ವಯಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ. ಅಂತಹ ಅಮಾಯಕ ಜೀವಹಾನಿಗಳಿಗೆ ಹೊಣೆ ಯಾರು? ಬಹುತೇಕ ರೈತರು ಕೃಷಿಯಲ್ಲಿ ಮೇಲಿಂದ ಮೇಲೆ ನಷ್ಟಅನುಭವಿಸುತ್ತ ಸುಮಾರು 6-8 ಲಕ್ಷಗಳವರೆಗೆ ಸಾಲ ಮಾಡಿ ಮನ್ನಾ ಆಗುವ ನಿರೀಕ್ಷೆಯಲ್ಲಿರುತ್ತಾರೆ. 

ಸರ್ಕಾರ ಒಬ್ಬ ರೈತನ ಸಾಲದಲ್ಲಿ ಕೇವಲ 2 ಲಕ್ಷ ರು. ಮಾತ್ರ ಸಾಲ ಮನ್ನಾ ಮಾಡಿದರೆ ಉಳಿದ ಸಾಲವನ್ನು ತೀರಿಸಲು ಆ ರೈತ ಶಕ್ಯನಿದ್ದಾನೆ ಎಂದರ್ಥವೇ? ಮತ್ತೊಂದೆಡೆ ಸಾಲಮನ್ನಾ ಹಣವನ್ನು ಇಂಧನ ಬೆಲೆ ಹೆಚ್ಚಳದಿಂದ, ಅಬಕಾರಿ ಸುಂಕ ಹೆಚ್ಚಳದಿಂದ ಸರಿದೂಗಿಸುವ ಸರ್ಕಾರ ಹೊರಟಿದೆ. ಅದರ ಬದಲಿಗೆ ಸರ್ಕಾರಿ ಮಟ್ಟದಲ್ಲಿ ವ್ಯಾಪಕವಾಗಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಿಆ ಹಣದಿಂದಲೂ ಸರಿದೂಗಿಸಬಹುದಿತ್ತಲ್ಲವೇ?

ಇವು ಕೆಲವೇ ಕೆಲವು ಮಾನದಂಡಗಳ ಮೇಲೆ ಊಹಿಸಬಹುದಾದ ಪ್ರಶ್ನೆಗಳು. ಇಡೀ ಪ್ರಕ್ರಿಯೆಯನ್ನು ಅವಲೋಕಿಸಿ ನೋಡಿದಾಗ ಇಂತಹ ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹೀಗಿರುವಾಗ ಇಡೀ ಸಾಲಮನ್ನಾ ಸಂಸ್ಕೃತಿಯು ಒಂದು ಸಂಪೂರ್ಣ ಅವೈಜ್ಞಾನಿಕ ಪದ್ಧತಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಪ್ರದಾಯ ನಿಲ್ಲುವಂತಾಗಬೇಕು.

ಕೃಷಿ ಯೋಜನೆಗಳು ಹೇಗಿರಬೇಕು?:

ನಮ್ಮ ದೇಶದ ಅತಿಹೆಚ್ಚು ಮಾನವ ಸಂಪನ್ಮೂಲ ಕೃಷಿಯಲ್ಲೇ ತೊಡಗಿಕೊಂಡಿದ್ದರೂ ತಲಾದಾಯಕ್ಕೆ ಅದರ ಕೊಡುಗೆ ತೀರಾ ಕಡಿಮೆ ಎಂಬುದು ಆರ್ಥಿಕ ದಿವಾಳಿತನಕ್ಕೆ ಮೊದಲ ಕಾರಣ. ಆದ್ದರಿಂದ ಅತಿ ಹೆಚ್ಚು ಮಾನವ ಸಂಪನ್ಮೂಲ ತನ್ನನ್ನು ತೊಡಗಿಸಿಕೊಂಡ ಕೃಷಿ ಕ್ಷೇತ್ರಕ್ಕೆ ಹೆಚ್ಚು ವೈಜ್ಞಾನಿಕ ಪ್ರಾಧಾನ್ಯತೆ ಕೊಟ್ಟರೆ ದೇಶದ ವರಮಾನಕ್ಕೆ ಕೃಷಿಯೇ ಪ್ರಮುಖ ಮೂಲವಾಗುವುದರಲ್ಲಿ ಎರಡು ಮಾತಿಲ್ಲ. 

ಮೊದಲನೆಯದಾಗಿ ಈ ರೈತ ನಷ್ಟವನ್ನು ಅನುಭವಿಸುತ್ತಿರುವುದಾದರೂ ಎಲ್ಲಿ ಎಂಬುದನ್ನು ಸರ್ಕಾರ ಅರಿಯಬೇಕು. ವೈಜ್ಞಾನಿಕ ಉಪಕರಣಗಳನ್ನು ತನ್ನ ಕೃಷಿಯಲ್ಲಿ ಅಳವಡಿಸಿಕೊಳ್ಳುವಷ್ಟುಆರ್ಥಿಕ ಸಬಲತೆ ಅವನಲ್ಲಿ ಇಲ್ಲ ಎಂದಾದರೆ ರೈತನ ಕೈಗೆಟಕುವ ದರದಲ್ಲಿ ಆ ಸಲಕರಣೆಗಳನ್ನು ಸರ್ಕಾರವೇ ಪೂರೈಸಬೇಕು.ಆಗ ಮಾತ್ರ ರೈತನೊಬ್ಬ ಯಶಸ್ಸು ಕಾಣಲು ಸಾಧ್ಯ. ಆಗ ಸಾಲದ ಅಗತ್ಯತೆಯೂ ಬರುವುದಿಲ್ಲ.

ಅನಾವೃಷ್ಠಿಯಿಂದ ಬೆಳೆ ಹಾಳಾದರೆ ಹೋಬಳಿ ಮಟ್ಟದಲ್ಲಿ ಅಂತಹ ಕ್ಷೇತ್ರಗಳನ್ನು ಗುರುತಿಸಿ ತ್ವರಿತವಾಗಿ ಪರಿಹಾರ ವಿತರಿಸಲಿ. ರೈತ ಬೆಳೆದ ಬೆಳೆಗೆ ಅದರ ಖರ್ಚಿನ ದುಪ್ಪಟ್ಟು ಬೆಂಬಲ ಬೆಲೆ ನಿಗದಿಗೊಳಿಸಿ ತಾಲೂಕು ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಎಲ್ಲ ಬೆಳೆಗಳನ್ನು ಸುಲಭವಾಗಿ ಖರೀದಿಸುವ ವ್ಯವಸ್ಥೆಯಾಗಬೇಕು. 

ರೈತ ತನ್ನ ಜಮೀನಿನ ನಿರ್ವಹಣೆಗೆ ಸಾಲದ ಅಗತ್ಯವಿದ್ದಲ್ಲಿ ಸುಲಭವಾಗಿ ಯಾರ ಸಹಾಯವಿಲ್ಲದೆಯೂ ಬಡ್ಡಿರಹಿತ ಸಾಲ ಸಿಗುವಂತಾಗಬೇಕು. ಆದರೆ ಸಾಲಮನ್ನಾ ಎಂಬ ಭೂತವನ್ನು ಶಾಶ್ವತವಾಗಿ ತೆಗೆದು ಹಾಕಬೇಕು. ಸಾಲಮನ್ನಾದಿಂದ ರೈತರ ಸ್ವಾಭಿಮಾನವನ್ನು ಹಾಳು ಮಾಡಿದಂತಾಗುತ್ತದೆ. 

ಸಾಲಮನ್ನಾ ನಿರೀಕ್ಷೆ ರೈತರಿಂದ ದೂರವಾಗಿ ತಮ್ಮ ಕೃಷಿಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡುತ್ತದೆ. ಈ ಆತ್ಮವಿಶ್ವಾಸವನ್ನು ಬೆಳೆಸುವ ಕೆಲಸವನ್ನು ಸರ್ಕಾರ ಮಾಡಬೇಕು. ಒಟ್ಟಾರೆಯಾಗಿ ಈ ಸಾಲಮನ್ನಾ ಎಂಬುದು ರಾಜಕೀಯ ವ್ಯಕ್ತಿಗಳು ರೈತರ ಮತ ಪಡೆಯಲು ಬಳಸುವ ಅಸ್ತ್ರವಾಗಿರುವುದನ್ನು ತಪ್ಪಿಸಬೇಕು. ಯಾವ ರೈತರೂ ಸಾಲಮನ್ನಾ ಮೊರೆ ಹೋಗದೆ ಸರ್ಕಾರದಿಂದ ದೊರೆಯುವ ಮೂಲಭೂತ ಸೌಕರ್ಯಗಳಿಗಾಗಿ ಮಾತ್ರ ಸರ್ಕಾರವನ್ನು ಅವಲಂಬಿಸುವಂತಾಗಬೇಕು.

Follow Us:
Download App:
  • android
  • ios