Asianet Suvarna News Asianet Suvarna News

ಗಲ್ಫ್‌ನ 700 ಕೋಟಿ ದೇಣಿಗೆಯನ್ನು ಮೋದಿ ಸರ್ಕಾರ ನಿರಾಕರಿಸಿದ್ದು ಏಕೆ?

ವಿಪತ್ತು ಪರಿಹಾರಕ್ಕೆ ವಿದೇಶಗಳಿಂದ ದೇಣಿಗೆ ಪಡೆಯುವುದನ್ನು ಭಾರತ 2004 ರ ಸುನಾಮಿ ವೇಳೆಯಲ್ಲೇ ನಿಲ್ಲಿಸಿದೆ. 14 ವರ್ಷಗಳ ಹಿಂದೆ ಮನಮೋಹನ ಸಿಂಗ್ ಕೈಗೊಂಡಿದ್ದ ನಿರ್ಧಾರವಿದು. ಭಾರತದ ಆರ್ಥಿಕತೆ ಸಶಕ್ತವಾಗಿದೆ ಎಂದು ಬಿಂಬಿಸಿಕೊಳ್ಳಲು ಹಾಗೂ ನಾನಾ ರಾಜತಾಂತ್ರಿಕ ಸೂಕ್ಷ್ಮಗಳ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗುತ್ತದೆ.

Why India refuse to foreign help?
Author
Bengaluru, First Published Aug 23, 2018, 9:52 AM IST

ಬೆಂಗಳೂರು (ಆ. 23): ಕೇರಳದಲ್ಲಾದ ಶತಮಾನದ ನೆರೆಹಾನಿ ಇಡೀ ಜಗತ್ತಿನ ಗಮನ ಸೆಳೆದಿದೆ. ಪ್ರಪಂಚದಲ್ಲಿ ಹೇಗೆ ಕೇರಳದ ಮಲೆಯಾಳಿಗಳು ಇಲ್ಲದ ದೇಶವಿಲ್ಲವೋ ಹಾಗೆಯೇ ಬಹುಶಃ ಕೇರಳದ ಪ್ರವಾಹಕ್ಕೆ ಮರುಗದ ದೇಶವೂ ಇರಲಿಕ್ಕಿಲ್ಲ. ಅದರಲ್ಲೂ ಕೇರಳಿಗರಿಗೆ ಕೊಲ್ಲಿ ರಾಷ್ಟ್ರಗಳು ಎರಡನೇ ಮನೆಯಿದ್ದಂತೆ. ಅರಬ್ ದೇಶಗಳ ಆರ್ಥಿಕತೆಯಲ್ಲಿ ಕೇರಳಿಗರ ಪಾತ್ರ ಬಹಳ ದೊಡ್ಡದಿದೆ. ಸುಮಾರು 24 ಲಕ್ಷ ಕೇರಳಿಗರು ಅರಬ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದ್ದರಿಂದಲೇ ಕೇರಳದಲ್ಲಾದ ನೆರೆಹಾನಿಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯುವರಾಜ ಶೇಕ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಾಹ್ಯಾನ್ 100 ಮಿಲಿಯನ್ ಡಾಲರ್ (ಸುಮಾರು 700 ಕೋಟಿ ರು.) ನೆರವು ಘೋಷಿಸಿದರು. ಯಾವುದೇ ಒಂದು ದೇಶ ಇನ್ನೊಂದು ದೇಶಕ್ಕೆ ಉಚಿತವಾಗಿ ನೀಡುವ ನೆರವಿನ ಲೆಕ್ಕದಲ್ಲಿ ಇದು ಬಹುದೊಡ್ಡ ದೇಣಿಗೆ.

ಯುಎಇನಲ್ಲಿ ಕೇರಳದ ತ್ರಿಶೂರ್ ಮೂಲದ ಯೂಸುಫ್ ಅಲಿ ಎಂಬ ಉದ್ಯಮಿ ಲುಲು ಗ್ರೂಪ್ ಹೆಸರಿನ ದೊಡ್ಡ ಬಿಸಿನೆಸ್ ಹೊಂದಿದ್ದಾರೆ. ಇವರು ಆ ದೇಶದಲ್ಲಿ ಪ್ರಭಾವಿ ಉದ್ಯಮಿ ಮತ್ತು ದೊಡ್ಡ ಶ್ರೀಮಂತ. ಯುವರಾಜ ಶೇಕ್ ಮೊಹಮ್ಮದ್‌ಗೆ ಬಕ್ರೀದ್ ಶುಭಾಶಯ ಹೇಳಲು ಮೊನ್ನೆ ಈ ಯೂಸುಫ್ ಅಲಿ ಹೋಗಿದ್ದಾಗ ಕೇರಳದ ಪ್ರವಾಹದ ಬಗ್ಗೆ ಪ್ರಸ್ತಾಪವಾಗಿದೆ. ಆಗ ಶೇಕ್ ಮೊಹಮ್ಮದ್ ತಾವು 700 ಕೋಟಿ ರು. ನೀಡುವುದಾಗಿ ಹೇಳಿದ್ದಾರೆ. ಅದನ್ನು ಯೂಸುಫ್ ಅಲಿ ಪ್ರಕಟಿಸಿದ್ದಾರೆ.

ಅದರ ಬೆನ್ನಲ್ಲೇ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿ ನಡೆಸಿ, ಯುಎಇಗೆ ನಾನು ಕೃತಜ್ಞನಾಗಿದ್ದೇನೆ. ಶೇಕ್ ಮೊಹಮ್ಮದ್ ಕೇರಳಕ್ಕೆ ಬಹುದೊಡ್ಡ ನೆರವು ನೀಡುವುದಾಗಿ ಹೇಳಿದ್ದಾರೆ. ಕೇರಳಕ್ಕೂ ಕೊಲ್ಲಿ ರಾಷ್ಟ್ರಗಳಿಗೂ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಅವರ ನೆರವಿನಿಂದ ನಮಗೆ ವಿಶೇಷ ಶಕ್ತಿ ಬಂದಿದೆ ಎಂದು ಹೇಳಿದರು. ನಂತರ ಬಂದೆರಗಿದ್ದು ಅಚ್ಚರಿಯ ಸುದ್ದಿ. ಭಾರತ ಸರ್ಕಾರ ಯುಎಇಯಿಂದ ನೆರವು ಸ್ವೀಕರಿಸಲು ನಿರಾಕರಿಸಿದೆ. ಅಷ್ಟೇ ಅಲ್ಲ, ಕೇರಳದಲ್ಲಾದ ನೆರೆಹಾನಿಗೆ ಯಾವುದೇ ವಿದೇಶಿ ನೆರವು ಸ್ವೀಕರಿಸುವುದಿಲ್ಲ ಎಂಬ ನಿಲುವಿಗೆ ಬಂದಿದೆ. ಹಣ ಎಷ್ಟಿದ್ದರೂ ಬೇಕು, ಆದರೆ..

ಮೋದಿ ಸರ್ಕಾರ ಇಂತಹದ್ದೊಂದು ನಿರ್ಧಾರ ಕೈಗೊಂಡಿದ್ದೇಕೆ?

ಕೇರಳದಲ್ಲಾದ ಹಾನಿಗೆ ಆರಂಭಿಕ ಪರಿಹಾರವಾಗಿ ಮೋದಿ ನೀಡಿದ್ದು 600 ಕೋಟಿ. ಅದಕ್ಕಿಂತ ಹೆಚ್ಚಿನ ನೆರವನ್ನು ಯುಎಇ ಪ್ರಕಟಿಸಿದೆ. ಇದು ಮುಜುಗರದ ವಿಷಯ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆಯೇ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ. ಏಕೆಂದರೆ ಕೇರಳದಲ್ಲಿ 21 ಸಾವಿರ ಕೋಟಿ ರು.ನಷ್ಟು ಹಾನಿಯಾಗಿದೆ. 300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಹಾಗಾಗಿ ಈಗ ಎಷ್ಟು ನೆರವು ಹರಿದುಬಂದರೂ ಬೇಕು.

10 ಸಾವಿರ ಕಿ.ಮೀ. ಹೆದ್ದಾರಿ ನಿರ್ನಾಮವಾಗಿದೆ. 1 ಲಕ್ಷ ಕಟ್ಟಡಗಳಿಗೆ ಹಾನಿಯಾಗಿದೆ. ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ. ಹೀಗಿರುವಾಗ ತಾನಾಗಿಯೇ ಬಂದ ನೆರವನ್ನು ಯಾರಾದರೂ ಬೇಡ ಎನ್ನುತ್ತಾರೆಯೇ? ಮನಮೋಹನ ಸಿಂಗ್ ನಿರ್ಧಾರ ಇದು ವಾಸ್ತವವಾಗಿ ಕೇರಳಕ್ಕೆ ವಿದೇಶಿ ನೆರವು ಬೇಡ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಮೋದಿ ಅವರದ್ದಲ್ಲ. ಇದು 2004 ರ ಡಿಸೆಂಬರ್‌ನಲ್ಲಿ ಸಂಭವಿಸಿದ ಸುನಾಮಿಯ ವೇಳೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ತೆಗೆದುಕೊಂಡ ನಿಲುವು.

ಅಂದಿನಿಂದ ಭಾರತ ಇಂತಹ ಯಾವುದೇ ಪ್ರಕೃತಿ ವಿಕೋಪದಿಂದಾದ ಹಾನಿಗೆ ವಿದೇಶಿ ನೆರವು ಪಡೆದಿಲ್ಲ. ಅಲ್ಲಿಯವರೆಗೆ ಸಾಕಷ್ಟು ವಿದೇಶಿ ನೆರವು ಪಡೆಯುತ್ತಿತ್ತು. 1991 ರ  ಉತ್ತರಕಾಶಿಯ ಭೂಕಂಪ, 1993 ರ ಲಾತೂರ್ ಭೂಕಂಪ, 2001 ರ ಗುಜರಾತ್ ಭೂಕಂಪ, 2002 ರ ಪಶ್ಚಿಮ ಬಂಗಾಳದ ಚಂಡಮಾರುತ, 2004 ರ ಬಿಹಾರದ ನೆರೆಹಾನಿ... ಹೀಗೆ ಸಾಕಷ್ಟು ಬಾರಿ ಭಾರತ ವಿದೇಶಗಳಿಂದ ನೆರವು ಸ್ವೀಕರಿಸಿತ್ತು. ಅದೇ ರೀತಿ ಸುನಾಮಿಯ ಸಂದರ್ಭದಲ್ಲೂ ಅನೇಕ ದೇಶಗಳು ನೆರವು ನೀಡಲು ಮುಂದೆ ಬಂದವು. ಆದರೆ, ಆಗ ಕೇಂದ್ರ ಸರ್ಕಾರ ತನ್ನ ಪ್ರಕೃತಿ ವಿಕೋಪ ನೀತಿಯನ್ನು ಬದಲಿಸಿಕೊಂಡಿತು.

ಆ ವೇಳೆ ಮನಮೋಹನ ಸಿಂಗ್ ನೀಡಿದ ಹೇಳಿಕೆ ಪ್ರಸಿದ್ಧವಾಗಿತ್ತು. ‘ನಮ್ಮಲ್ಲಾದ ಹಾನಿಯನ್ನು ಸರಿಪಡಿಸಿಕೊಳ್ಳಲು ನಾವು ಶಕ್ತರಾಗಿದ್ದೇವೆ. ಅಗತ್ಯಬಿದ್ದರೆ ಮಾತ್ರ ಬೇರೆಯವರ ನೆರವು ಪಡೆಯುತ್ತೇವೆ.’ ಅಂದಿನಿಂದ ಭಾರತ ಬೇರೆ ದೇಶಗಳಿಗೆ ನೆರವು ನೀಡಲು ಆರಂಭಿಸಿ, ನೆರವು ಸ್ವೀಕರಿಸುವುದನ್ನು ನಿಲ್ಲಿಸಿತು. ಸುನಾಮಿಯಿಂದಾಗಿ ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್‌ಗಳಲ್ಲಿ 12,000 ಮಂದಿ ಪ್ರಾಣ ಕಳೆದುಕೊಂಡಿದ್ದರು.

6 ಲಕ್ಷ ಜನ ನಿರಾಶ್ರಿತರಾಗಿದ್ದರು. ಆಗ ವಿದೇಶಿ ನೆರವು ಪಡೆಯದೆ ದೇಶದಲ್ಲಿ ದೊರೆತ ಆಂತರಿಕ ದೇಣಿಗೆ ಹಾಗೂ ಸರ್ಕಾರದ ಹಣದಿಂದ ಪರಿಹಾರ ಕಾರ್ಯಾಚರಣೆ ನಡೆಸಲಾಯಿತು. ನಂತರ 2005 ರ ಕಾಶ್ಮೀರ ಭೂಕಂಪ, 2013 ರಲ್ಲಿ ಉತ್ತರಾಖಂಡದ ಮೇಘಸ್ಫೋಟ, 2014 ರಲ್ಲಿ ಸಂಭವಿಸಿದ ಕಾಶ್ಮೀರ ಪ್ರವಾಹದ ಸಂದರ್ಭಗಳಲ್ಲಿ ಹೀಗೇ ವಿದೇಶಿ ನೆರವನ್ನು ಸರ್ಕಾರ ನಿರಾಕರಿಸಿತ್ತು. ಕಳೆದ 14 ವರ್ಷಗಳಲ್ಲಿ ರಷ್ಯಾ, ಅಮೆರಿಕ, ಜಪಾನ್ ಮುಂತಾದ ಅನೇಕ ಸ್ನೇಹಿತ ರಾಷ್ಟ್ರಗಳಿಂದಲೂ ಭಾರತ ನೆರವು ಸ್ವೀಕರಿಸಲು ನಿರಾಕರಿಸಿದೆ.

ಹಣ ಪಡೆದರೆ ಸಮಸ್ಯೆಯೇನು?

ವಿದೇಶಿ ನೆರವು ಪಡೆಯುವುದರಿಂದ ನಮಗೆ ದೊಡ್ಡ ಸಮಸ್ಯೆಯೇನೂ ಆಗುವುದಿಲ್ಲ. ಆದರೆ, ಅದನ್ನು ನಿರಾಕರಿಸುವುದರ ಹಿಂದೆ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ನಡೆಗಳಿಗೆ ಪೂರಕವಾದ ಕೆಲ ಸೂಕ್ಷ್ಮ ವಿಚಾರಗಳಿರುತ್ತವೆ. ಮೊದಲನೆಯದಾಗಿ, ನಮ್ಮಲ್ಲಾದ ಹಾನಿ ಸರಿಪಡಿಸಿಕೊಳ್ಳಲು ನಾವು ಶಕ್ತರಿದ್ದೇವೆ ಎಂಬ ಸಂದೇಶ ರವಾನಿಸುವುದರಿಂದ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಎಂದು ಜಗತ್ತಿಗೆ ಹೇಳಿದಂತಾಗುತ್ತದೆ. ಇದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶದ ತೂಕವನ್ನು ಹೆಚ್ಚಿಸುತ್ತದೆ.

ಎರಡನೆಯದಾಗಿ, ಯಾವುದಾದರೂ ಒಂದು ದೇಶದಿಂದ ನೆರವು ಸ್ವೀಕರಿಸಿದರೆ ನಂತರ  ಅನೇಕ ದೇಶಗಳು ನಾಮುಂದು ತಾಮುಂದು ಎಂದು ನೆರವು ನೀಡಲು ಬರಬಹುದು. ಆಗ ಭಾರತಕ್ಕೆ ಯಾವ ದೇಶದ ಜೊತೆಗೆ ಉತ್ತಮ ರಾಜತಾಂತ್ರಿಕ ಸಂಬಂಧವಿಲ್ಲವೋ ಅಥವಾ ಯಾವ ದೇಶದ ನೆರವನ್ನು ಸ್ವೀಕರಿಸಲು ನಮಗೆ ಮುಜುಗರವಾಗುತ್ತದೆಯೋ ಅಂತಹ ದೇಶಗಳಿಂದಲೂ ನೆರವು ಸ್ವೀಕರಿಸಬೇಕಾಗುತ್ತದೆ. ಒಬ್ಬರಿಂದ ಸ್ವೀಕರಿಸಿ, ಇನ್ನೊಬ್ಬರಿಂದ ನಿರಾಕರಿಸುವುದಕ್ಕೆ ಕಷ್ಟವಾಗುತ್ತದೆ.  ಅಲ್ಲಿ ಹಣದ ಮೊತ್ತ ಮುಖ್ಯವಾಗುವುದಿಲ್ಲ, ನೆರವು ಸ್ವೀಕರಿಸಿದ್ದೇವೆ ಎಂಬುದಷ್ಟೇ ಮುಖ್ಯವಾಗುತ್ತದೆ. ಇದು ರಾಜತಾಂತ್ರಿಕ ವ್ಯವಹಾರಗಳಲ್ಲಿ ಮುಂದೆ ನಾನಾ ಪರಿಣಾಮಗಳಿಗೆ ಕಾರಣವಾಗಬಹುದು.

ನೆರವು ನಿರಾಕರಿಸುವುದು ಹೇಗೆ?

ವಿದೇಶಗಳ ಸರ್ಕಾರದಿಂದ ಬರುವ ಹಣಕಾಸು ನೆರವನ್ನಷ್ಟೇ ಭಾರತ ನಿರಾಕರಿಸಿದೆ. ಅಲ್ಲಿರುವ ಭಾರತೀಯರು, ಸಂಘ ಸಂಸ್ಥೆಗಳು, ಎನ್ ಜಿಒಗಳು ಅಥವಾ ವಿದೇಶಿ ಪ್ರಜೆಗಳು ನೆರವು ನೀಡಿದರೆ ಅದನ್ನು ಸ್ವೀಕರಿಸುತ್ತದೆ. ಇನ್ನು, ಹೀಗೆ ವಿದೇಶಿ ನೆರವು ನಿರಾಕರಿಸುವುದಕ್ಕೆ ಸಿದ್ಧ ಮಾದರಿಯೊಂದಿರುತ್ತದೆ. ಪ್ರಕೃತಿ ವಿಕೋಪ ಸಂಭವಿಸಿದಾಕ್ಷಣ ಭಾರತ ಸರ್ಕಾರ ವಿದೇಶಿ ನೆರವನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದರೆ ಎಲ್ಲಾ ದೇಶಗಳಲ್ಲಿರುವ ಭಾರತೀಯ ರಾಯಭಾರಿಗಳಿಗೆ ಈ ಬಗ್ಗೆ ಸಂದೇಶ ರವಾನಿಸಲಾಗುತ್ತದೆ.

ಅವರು, ಆಯಾ ದೇಶದ ಸರ್ಕಾರಗಳು ನೆರವು ನೀಡಲು ಮುಂದೆಬಂದರೆ ಅದಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ನಯವಾಗಿ ‘ಸದ್ಯಕ್ಕೆ ಬೇರಾವುದೇ ದೇಶದ ನೆರವಿನ ಅಗತ್ಯ ನಮಗಿಲ್ಲ. ಸಂದರ್ಭ ಬಂದರೆ ನಿಮಗೆ ತಿಳಿಸುತ್ತೇವೆ’ ಎಂದು ಹೇಳುತ್ತಾರೆ. ಈ ಬಾರಿಯೂ ಪ್ರಧಾನಿ ಮೋದಿ ಯುಎಇ ಸರ್ಕಾರಕ್ಕೆ ರಾಜತಾಂತ್ರಿಕ ಮಾರ್ಗದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆಂದು ವರದಿಯಾಗಿದೆ.

-ಸುಹಾಸ್ ಹೆಗಡೆ  

Follow Us:
Download App:
  • android
  • ios