ಮುಂದಿನ ವರ್ಷ ಷೇರು ಮಾರುಕಟ್ಟೆಯಲ್ಲಿ ಹೊಸ ವ್ಯವಸ್ಥೆ ಜಾರಿ, ಬರೀ ಒಂದು ಗಂಟೆಯಲ್ಲಿ ಟ್ರೇಡ್ ಸೆಟ್ಲಮೆಂಟ್!
ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆಯಲ್ಲಿ T+1 ವ್ಯವಸ್ಥೆಯ ಟ್ರೇಡ್ ಸೆಟ್ಲಮೆಂಟ್ ಜಾರಿಯಲ್ಲಿದೆ. ಅಂದರೆ ವಹಿವಾಟು ನಡೆದ 24 ಗಂಟೆಗಳಲ್ಲಿ ಟ್ರೇಡ್ ಸಂಬಂಧಿ ಸೆಟ್ಲಮೆಂಟ್ ಗಳನ್ನು ಮಾಡಲಾಗುತ್ತಿದೆ. ಈ ಅವಧಿಯನ್ನು ಒಂದು ಗಂಟೆಗೆ ಇಳಿಸಲು ಸೆಬಿ ಯೋಜನೆ ರೂಪಿಸಿದ್ದು, ಮುಂದಿನ ವರ್ಷದ ಮಾರ್ಚ್ ನಿಂದ ಜಾರಿಗೆ ತರಲು ಯೋಚಿಸಿದೆ.

ಮುಂಬೈ (ಸೆ.6): ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಟ್ರೇಡ್ ಗಳನ್ನು ಒಂದು ಗಂಟೆಯಲ್ಲಿ ಸೆಟ್ಲಮೆಂಟ್ ಮಾಡುವ ವ್ಯವಸ್ಥೆಯನ್ನು ಮುಂದಿನ ವರ್ಷದ ಮಾರ್ಚ್ ನಿಂದ ಜಾರಿಗೆ ತರಲು ಯೋಚಿಸಿದೆ. ಪ್ರಸ್ತುತ ಸೆಬಿ T+1 ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಅಂದರೆ ನಿಜವಾದ ವಹಿವಾಟುಗಳು ನಡೆದ 24 ಗಂಟೆಗಳಲ್ಲಿ ಟ್ರೇಡ್ ಸಂಬಂಧಿ ಸೆಟ್ಲಮೆಂಟ್ ಗಳನ್ನು ಮಾಡಲಾಗುತ್ತದೆ. ಈಗ ಈ ಸೆಟ್ಲಮೆಂಟ್ ಅವಧಿಯನ್ನು 24 ಗಂಟೆಗಳಿಂದ ಒಂದು ಗಂಟೆಗೆ ಇಳಿಸಲು ಸೆಬಿ ಯೋಜನೆ ರೂಪಿಸುತ್ತಿದೆ. ಟ್ರೇಡ್ ಗಳ ರಿಯಲ್ ಟೈಮ್ ಸೆಟ್ಲಮೆಂಟ್ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದು ಸೆಬಿ ಜುಲೈನಲ್ಲಿ ಘೋಷಿಸಿತ್ತು. ಈಗ ಒಂದು ಗಂಟೆ ಅವಧಿಯ ಟ್ರೇಡ್ ಗಳ ಸೆಟ್ಲಮೆಂಟ್ ಅನ್ನು ಮೊದಲು ಅನುಷ್ಠಾನಗೊಳಿಸಲು
ಯೋಜನೆ ರೂಪಿಸುತ್ತಿದ್ದು, ಈ ಬಗ್ಗೆ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಮಂಗಳವಾರ ಮಾಹಿತಿ ನೀಡಿದ್ದಾರೆ. ಸೆಕೆಂಡರಿ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡಲು ಅಪ್ಲಿಕೇಷನ್ ಸಪೋರ್ಟೆಡ್ ಬೈ ಬ್ಲಾಕ್ಡ್ ಅಮೌಂಟ್ (ಎಎಸ್ ಬಿಎ) ಸೌಲಭ್ಯ ಕೂಡ 2024ರ ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಕೂಡ ಅವರು ನೀಡಿದ್ದಾರೆ.
ಟ್ರೇಡ್ ಸೆಟ್ಲಮೆಂಟ್ ಅಂದ್ರೇನು?
ಟ್ರೇಡ್ ಸೆಟ್ಲಮೆಂಟ್ ಅನ್ನೋದು ದ್ವಿಮುಖ ಪ್ರಕ್ರಿಯೆಯಾಗಿದೆ. ಇದರಲ್ಲಿ ಸೆಟ್ಲಮೆಂಟ್ ದಿನಾಂಕದಂದು ಫಂಡ್ ಗಳು ಹಾಗೂ ಸೆಕ್ಯುರಿಟಿಗಳ ವರ್ಗಾವಣೆ ಸೇರಿದೆ. ಖರೀದಿಸಿದ ಲಿಸ್ಟೆಡ್ ಕಂಪನಿಯ ಸೆಕ್ಯುರಿಟೀಸ್ ಗಳನ್ನು ಒಮ್ಮೆ ಖರೀದಿದಾರರಿಗೆ ಪೂರೈಕೆ ಮಾಡಿದರೆ ಹಾಗೂ ಅದನ್ನು ಮಾರಾಟ ಮಾಡಿದವರಿಗೆ ಹಣ ಸಿಕ್ಕರೆ ಆಗ ಟ್ರೇಡ್ ಸೆಟ್ಲಮೆಂಟ್ ಪೂರ್ಣವಾಯಿತು ಎಂದು ಅರ್ಥ. ಪ್ರಸ್ತುತ T+1 ಸೈಕಲ್ ಅನ್ನು ಸೆಬಿ ಅನುಸರಿಸುತ್ತಿದೆ. T+1 ಸೈಕಲ್ ಅಂದ್ರೆ ಟ್ರೇಡ್ ಸಂಬಂಧಿ ಸೆಟ್ಲಮೆಂಟ್ ಗಳು ನಿಜವಾದ ವಹಿವಾಟುಗಳು ನಡೆದ ಒಂದು ದಿನದೊಳಗೆ ಅಥವಾ 24 ಗಂಟೆಗಳಲ್ಲಿ ಪೂರ್ಣಗೊಳ್ಳುತ್ತವೆ. T+1 ಸೈಕಲ್ ಅನ್ನು ಸೆಬಿ ಈ ವರ್ಷದ ಜನವರಿಯಲ್ಲಿ ಅಳವಡಿಸಿಕೊಂಡಿತ್ತು. ಈ ಮೂಲಕ ಟಾಪ್ ಲಿಸ್ಟೆಡ್ ಸೆಕ್ಯುರಿಟೀಸ್ ಗಳಲ್ಲಿ T+1 ಸೆಟ್ಲಮೆಂಟ್ ಸೈಕಲ್ ಪ್ರಾರಂಭಿಸಿದ ಜಗತ್ತಿನ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಕೂಡ ಭಾರತ ಪಾತ್ರವಾಗಿದೆ. ಭಾರತಕ್ಕೂ ಮುನ್ನ ಚೀನಾ T+1 ಸೆಟ್ಲಮೆಂಟ್ ಸೈಕಲ್ ಅಳವಡಿಸಿಕೊಂಡಿತ್ತು. T+1 ಸೈಕಲ್ ಕಾರ್ಯನಿರ್ವಹಣೆಯಲ್ಲಿ ದಕ್ಷತೆ, ವೇಗದ ನಿಧಿ ವರ್ಗಾವಣೆ, ಷೇರು ಡೆಲಿವರಿ ಹಾಗೂ ಸ್ಟಾಕ್ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಿತ್ತು.
ಚಂದ್ರಯಾನ-3 ಪ್ರಮುಖ ಉಪಕರಣ ತಯಾರಿಸಿದ ಈ ಕಂಪನಿಗಳ ಷೇರಿಗೆ ಫುಲ್ ಡಿಮ್ಯಾಂಡ್, ನಿಮ್ಮಲಿದ್ಯಾ ಈ ಷೇರುಗಳು?
ಒಂದು ಗಂಟೆ ಟ್ರೇಡ್ ಸೆಟ್ಲಮೆಂಟ್ ಏಕೆ?
ತತ್ ಕ್ಷಣದ ಸೆಟ್ಲಮೆಂಟ್ ಅಳವಡಿಸಿಕೊಳ್ಳುವ ಹಾದಿಯಲ್ಲಿ ಒಂದು ಗಂಟೆ ಟ್ರೇಡ್ ಸೆಟ್ಲಮೆಂಟ್ ಅನುಷ್ಠಾನಗೊಳಿಸಲು ತತ್ ಕ್ಷಣದ ಸೆಟ್ಲಮೆಂಟ್ ಗಿಂತ ಹೆಚ್ಚು ತ್ವರಿತ ಎಂದು ನಾವು ಭಾವಿಸುತ್ತೇವೆ. ತತ್ ಕ್ಷಣದ ಸೆಟ್ಲಮೆಂಟ್ ಅನುಷ್ಠಾನಕ್ಕೆ ಇನ್ನೂ 6-7 ತಿಂಗಳು ಬೇಕಾಗಬಹುದು. ಹೀಗಾಗಿ ನಾವು ಅದಕ್ಕಿಂತ ಮುಂಚೆ ಒಂದು ಗಂಟೆಯ ಟ್ರೇಡ್ ಸೆಟ್ಲಮೆಂಟ್ ಅನುಷ್ಠಾನಗೊಳಿಸುತ್ತೇವೆ ಎಂದು ಮಾಧಬಿ ಪುರಿ ಬುಚ್ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಒಂದು ಗಂಟೆ ಟ್ರೇಡ್ ಸೆಟ್ಲಮೆಂಟ್ ಅನುಷ್ಠಾನಕ್ಕೆ ಅಗತ್ಯವಾದ ತಂತ್ರಜ್ಞಾನ ನಮ್ಮ ಬಳಿಯಿದೆ. ಆದೆ, ತತ್ ಕ್ಷಣದ ಟ್ರೇಡ್ ಸೆಟ್ಲಮೆಂಟ್ ಅನುಷ್ಠಾನಕ್ಕೆ ಹೆಚ್ಚುವರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಹೀಗಾಗಿ ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂಬ ಮಾಹಿತಿಯನ್ನು ಕೂಡ ಅವರು ನೀಡಿದ್ದಾರೆ.
2023 ರಲ್ಲಿ ಹೂಡಿಕೆ ಮಾಡಲು 5 ಅತ್ಯುತ್ತಮ ಷೇರುಗಳ ವಿವರ ಹೀಗಿದೆ..
ಒಂದು ಗಂಟೆ ಟ್ರೇಡ್ ಸೆಟ್ಲಮೆಂಟ್ ಪ್ರಯೋಜನ ಏನು?
ಪ್ರಸಕ್ತವಿರುವ T+1 ಸೆಟ್ಲಮೆಂಟ್ ಸೈಕಲ್ ನಲ್ಲಿ ಒಂದು ವೇಳೆ ಒಬ್ಬ ಹೂಡಿಕೆದಾರ ಸೆಕ್ಯುರಿಟಿಗಳನ್ನು ಮಾರಾಟ ಮಾಡಿದರೆ, ಮರುದಿನ ಹಣ ಆತನ ವೈಯಕ್ತಿಕ ಖಾತೆಗೆ ಕ್ರೆಡಿಟ್ ಆಗುತ್ತದೆ. ಇನ್ನು ಒಂದು ಗಂಟೆ ಸೆಟ್ಲಮೆಂಟ್ ನಲ್ಲಿ ಒಂದು ವೇಳೆ ಹೂಡಿಕೆದಾರ ಒಂದು ಷೇರು ಮಾರಾಟ ಮಾಡಿದ್ರೆ ಹಣ ಆತನ ಖಾತೆಗೆ ಒಂದು ಗಂಟೆಯೊಳಗೆ ಕ್ರೆಡಿಟ್ ಆಗುತ್ತದೆ. ಹಾಗೆಯೇ ಖರೀದಿದಾರನ ಡಿಮ್ಯಾಟ್ ಖಾತೆಗೆ ಒಂದು ಗಂಟೆಯೊಳಗೆ ಷೇರುಗಳು ಜಮೆ ಆಗುತ್ತವೆ ಕೂಡ.