ನವದೆಹಲಿ(ಸೆ.07): ಆರ್ಥಿಕ ಕುಸಿತ ಮತ್ತು ಚಿನ್ನದ  ಬೆಲೆ ಆಕಾಶ ಮುಟ್ಟಿರುವ ನಡುವೆಯೇ, ಭಾರತದ ಮೀಸಲು ಚಿನ್ನದ ಪ್ರಮಾಣ ಹೆಚ್ಚಾಗಿರುವ ಸಂತಸದ ಸುದ್ದಿ ಹೊರ ಬಿದ್ದಿದೆ.

ಈ ಕುರಿತು ವಿಶ್ವ ಚಿನ್ನದ ಮಂಡಳಿ  ಅಂಕಿ ಅಂಶ ಬಿಡುಗಡೆಗೊಳಿಸಿದ್ದು, ಭಾರತದಲ್ಲಿ 618.2 ಮೆಟ್ರಿಕ್ ಟನ್ ಚಿನ್ನದ ಸಂಗ್ರಹವಿದೆ ಎಂದು ವರದಿ ಮಾಡಿದೆ. 

ಅಲ್ಲದೇ ಚಿನ್ನದ ಸಂಗ್ರಹದಲ್ಲಿ ಭಾರತ ಇಡೀ ವಿಶ್ವದಲ್ಲೇ 9ನೇ ಸ್ಥಾನದಲ್ಲಿದ್ದು, ಕಳೆದೆರಡು ದಶಕಗಳಲ್ಲಿ ಭಾರತದ ಚಿನ್ನದ ಮೀಸಲು ದ್ವಿಗುಣಗೊಂಡಿದೆ ಎಂದು ವರದಿ ತಿಳಿಸಿದೆ. 

2000ರ ಮೊದಲ ತ್ರೈಮಾಸಿಕದಲ್ಲಿ 357.8 ಮೆಟ್ರಿಕ್ ಟನ್ ಇದ್ದ ಭಾರತದ ಚಿನ್ನದ ಮೀಸಲು, ಪ್ರಸಕ್ತ 618.2 ಮೆಟ್ರಿಕ್ ಟನ್’ಗೆ ಹೆಚ್ಚಳವಾಗಿದೆ.

ಇನ್ನು ಅಮೆರಿಕ 8,134 ಮೆಟ್ರಿಕ್ ಟನ್ ಚಿನ್ನದ ಸಂಗ್ರಹದೊಂದಿಗೆ ಅಗ್ರಸ್ಥಾನದಲ್ಲಿದ್ದು 3,367 ಮೆಟ್ರಿಕ್ ಟನ್ ಮೀಸಲು ಚಿನ್ನ ಹೊಂದಿರುವ ಜರ್ಮನಿ ಎರಡನೇ ಸ್ಥಾನದಲ್ಲಿದೆ.

ಸದ್ಯ ಭಾರತ ಮೀಸಲು ಚಿನ್ನದ ಪ್ರಮಾಣದಲ್ಲಿ ನೆದರ್‌’ಲ್ಯಾಂಡ್ ರಾಷ್ಟ್ರವನ್ನು ಹಿಂದಿಕ್ಕಿದ್ದು, ಒಟ್ಟಾರೆ ಮೀಸಲು ಚಿನ್ನದ ಅಗ್ರ 100 ರಾಷ್ಟ್ರಗಳ ಪಟ್ಟಿಗೆ  ಸೇರಿದೆ.

ಮ್ಯೂಚುಯಲ್ ಫಂಡ್, ರಿಯಲ್ ಎಸ್ಟೇಟ್, ನಿಶ್ಚಿತ ಠೇವಣಿಗಿಂತ ಚಿನ್ನದ ಹೂಡಿಕೆ ಇದೀಗ ಉತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಬೆಲೆ ಇಳಿಮುಖವಾಗುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. 

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಾಗ್ಯೂ ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಚಿನ್ನ ಅತಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ.