Asianet Suvarna News Asianet Suvarna News

ಟೆಲಿಕಾಂ ತಲ್ಲಣ,  ವೋಡಾಪೋನ್, ಏರ್‌ಟೆಲ್ ಷೇರು ಭಾರೀ ಏರಿಕೆ

ವೋಡಾಫೋನ್ ಐಡಿಯಾ, ಏರ್ ಟೆಲ್ ಷೇರು ದರದಲ್ಲಿ ಭಾರೀ ಏರಿಕೆ/ ದರ ಹೆಚ್ಚಳ ಘೋಷಣೆ ಮಾಡಿದ್ದೆ ತಡ ಮುಗಿಬಿದ್ದ ಹೂಡಿಕೆದಾರರು/  ಸಮಗ್ರವಾಗಿ ಶೇ. 30 ರಷ್ಟು ಏರಿಕೆ ಕಂಡ ಟೆಲಿಕಾಂ ಕಂಪನಿಗಳು

VodafoneIdea Bharti Airtel Shares Zoom up 30 Percent After Tariff Hike
Author
Bengaluru, First Published Nov 19, 2019, 8:02 PM IST

ನವದೆಹಲಿ[ನ.19]: ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದರ ಸಮರದ ಹೊಡೆತಕ್ಕೆ ಸಿಕ್ಕು ಮೊಬೈಲ್‌ ಕರೆ ದರ ಸೇರಿದಂತೆ ವಿವಿಧ ರೀತಿಯ ಸೇವೆಗಳ ದರ ಇಳಿಸಿದ್ದ ವಿವಿಧ ಟೆಲಿಕಾಂ ಕಂಪನಿಗಳು ಮತ್ತೆ ದರ ಏರಿಕೆಯ ಘೋಷಣೆ ಮಾಡಿವೆ. ದರ ಏರಿಕೆ ಘೋಷಣೆ ಮಾಡಿದ್ದೇ ತಡ ಕಂಪನಿಯ ಷೇರುಗಳಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದೆ.

ಮಾರುಕಟ್ಟೆಯಲ್ಲಿ ವೋಡಾಫೋನ್ ಐಡಿಯಾ 29.75 ಶೇ. ಅಂದರೆ   5.80 ರೂ ಏರಿಕೆ ದಾಖಲಿಸಿದ್ದರೆ, ಭಾರ್ತಿ ಏರ್ ಟೆಲ್ ಶೇ. 6.31 ರಷ್ಟು ಏರಿಕೆ ಕಂಡಿದ್ದು ಈ ವರ್ಷದಲ್ಲೇ ಅಧಿಕ ಅಂದರೆ 435 ರೂ. ದಾಖಲೆ ಕಂಡಿದೆ.

ಡಿಸೆಂಬರ್‌ನಿಂದಲೇ ಎಲ್ಲಾ ರೀತಿಯ ಮೊಬೈಲ್‌ ಸೇವೆಗಳ ಶುಲ್ಕವನ್ನು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌- ಐಡಿಯಾ ಕಂಪನಿಗಳು ಸೋಮವಾರ ಪ್ರಕಟಿಸಿದ್ದವು. ಟೆಲಿಕಾಂ ಕಂಪನಿಗಳು ಕರೆ ಮತ್ತು ಡಾಟಾ ಶುಲ್ಕ ಏರಿಸುತ್ತಿರುವುದು ಸುಮಾರು 3 ವರ್ಷಗಳ ಬಳಿಕ ಎಂಬುದು ಕೂಡಾ ಅಷ್ಟೇ ಗಮನಾರ್ಹ ಸಂಗತಿಯಾಗಿತ್ತು.

ಟೆಲಿಕಾಂ ಕಂಪನಿಗಳೇಕೆ ನಷ್ಟದಲ್ಲಿ ಮುಳುಗಿವೆ? ಜಿಯೋ ಕಾರಣವೋ?

ಸದ್ಯ ಮಾರುಕಟ್ಟೆಯಲ್ಲಿ ಏರ್‌ಟೆಲ್‌, ವೊಡಾಫೋನ್‌ ಹೊರತುಪಡಿಸಿದರೆ ಉಳಿದಿರುವ ಪ್ರಮುಖ ಕಂಪನಿಗಳೆಂದರೆ ರಿಲಯನ್ಸ್‌ ಜಿಯೋ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌. ಈ ಪೈಕಿ ಜಿಯೋ ಕೆಲ ದಿನಗಳ ಹಿಂದಷ್ಟೇ ತನ್ನ ನೆಟ್‌ವರ್ಕ್ ನಿಂದ ಬೇರೆ ನೆಟ್ ವರ್ಕ್‌ಗೆ ಮಾಡುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ದರ ವಿಧಿಸುವ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಅದು ಮತ್ತೊಂದು ಸುತ್ತಿನಲ್ಲಿ ತಕ್ಷಣಕ್ಕೆ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದಿಂದ ಪುನರುಜ್ಜೀವನ ಪ್ಯಾಕೇಜ್‌ ಪಡೆದುಕೊಂಡಿರುವ ಬಿಎಸ್‌ಎನ್‌ಎಲ್‌ ಕೂಡಾ ದರ ಏರಿಕೆ ಹಾದಿ ತುಳಿದರೆ ಅಚ್ಚರಿ ಇಲ್ಲ ಎನ್ನಲಾಗಿದೆ.

ವೊಡಾಫೋನ್, ಏರ್‌ಟೆಲ್ ಸಂಕಷ್ಟದಲ್ಲಿ: ನರಳುತ್ತಿವೆ ಭಾರೀ ನಷ್ಟದಲ್ಲಿ!

ಭಾರೀ ಸಂಕಷ್ಟ: ಸುಪ್ರೀಕೋರ್ಟ್‌ ಇತ್ತೀಚೆಗೆ ಟೆಲಿಕಾಂ ಕಂಪನಿಗಳಿಗೆ ಎಜಿಆರ್‌ (ಅಡ್‌ಜಸ್ಟೆಡ್‌ ಗ್ರಾಸ್‌ ರೆವಿನ್ಯೂ) ಶುಲ್ಕ, ದಂಡ ಮತ್ತು ಬಡ್ಡಿ ರೂಪದಲ್ಲಿ ಸುಮಾರು 1.4 ಲಕ್ಷ ಕೋಟಿ ರು. ಪಾವತಿಸಬೇಕೆಂದು ಸೂಚಿಸಿತ್ತು. ಪರಿಣಾಮ ಏರ್‌ಟೆಲ್‌ 42000 ಕೋಟಿ ರು. ಮತ್ತು ವೊಡಾಫೋನ್‌- ಐಡಿಯಾ ಕಂಪನಿಗಳು 40000 ಕೋಟಿ ರು. ಪಾವತಿಸುವ ಅನಿವಾರ್ಯತೆ ಸಿಲುಕಿದ್ದವು. ಈ ಹಣ ಪಾವತಿಸಲು ಇತ್ತೀಚೆಗಷ್ಟೇ ಪ್ರಕಟಗೊಂಡ ತ್ರೈಮಾಸಿಕದಲ್ಲಿ ಉಭಯ ಕಂಪನಿಗಳು ತಮ್ಮ ಆದಾಯದಲ್ಲಿ ಹಣ ತೆಗೆದಿರಿಸಿದ್ದವು. ಪರಿಣಾಮ ಸೆ.30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ವೊಡಾಫೋನ್‌ - ಐಡಿಯಾ ಕಂಪನಿ 50921 ಕೋಟಿ ರು. ನಷ್ಟದ ಲೆಕ್ಕ ತೋರಿಸಿತ್ತು. ಮತ್ತೊಂದೆಡೆ ಏರ್‌ಟೆಲ್‌ ಕೂಡಾ 23000 ಕೋಟಿ ರು. ನಷ್ಟದ ಲೆಕ್ಕ ತೋರಿಸಿತ್ತು.

ಇಂಗ್ಲೀಷ್ ನಲ್ಲಿಯೂ ಓದಿ

Follow Us:
Download App:
  • android
  • ios