ತಾಯಿಯನ್ನು ವೈದ್ಯರ ಬಳಿ ಕರೆದೊಯ್ಯಲು ಪೈಲಟ್ ಗೆ ರಜೆ ನೀಡದ ವಿಸ್ತಾರ; ಏರ್ ಲೈನ್ಸ್ ಕ್ರಮಕ್ಕೆ ಆಕ್ರೋಶ
ಅನಾರೋಗ್ಯಪೀಡಿತ ತಾಯಿ ಚಿಕಿತ್ಸೆಗೆ ವಿಸ್ತಾರ ಏರ್ ಲೈನ್ಸ್ ಪೈಲಟ್ ರಜೆ ಕೋರಿದ್ದರು. ಆದರೆ, ವಿಸ್ತಾರ ರಜೆ ನಿರಾಕರಿಸಿ ಇ-ಮೇಲ್ ಕಳುಹಿಸಿದೆ. ಈ ಇ-ಮೇಲ್ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಸ್ತಾರದ ಕ್ರಮವನ್ನು ನೆಟ್ಟಿಗರು ಖಂಡಿಸಿದ್ದಾರೆ. ಅಲ್ಲದೆ, ಕೆಲವು ಕಂಪನಿಗಳು ಉದ್ಯೋಗಿಗಳನ್ನುನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಇದು ಚರ್ಚೆ ಹುಟ್ಟುಹಾಕಿದೆ.
ನವದೆಹಲಿ (ಅ.12): ಟಾಟಾ ಸಂಸ್ಥೆ ಮಾಲೀಕತ್ವದ ವಿಸ್ತಾರ ಏರ್ ಲೈನ್ಸ್ ಪೈಲಟ್ ಗೆ ತುರ್ತು ರಜೆ ನಿರಾಕರಿಸಿದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಏರ್ ಲೈನ್ಸ್ ಕ್ರಮವನ್ನು ಟೀಕಿಸಿದ್ದಾರೆ. ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಕೊಡಿಸಲು ತುರ್ತು ರಜೆ ಕೇಳಿದ ಪೈಲಟ್ ಗೆ ವಿಸ್ತಾರ ಏರ್ ಲೈನ್ಸ್ ರಜೆ ನಿರಾಕರಿಸಿದೆ. ಏರ್ ಲೈನ್ಸ್ ಕಾರ್ಯನಿರ್ವಹಣೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ರಜೆ ನೀಡಲು ಸಾಧ್ಯವಿಲ್ಲ ಎಂದಿರುವ ಸಂಸ್ಥೆ, ವೈದ್ಯರ ಜೊತೆಗಿನ ಭೇಟಿಯನ್ನು ಮುಂದೂಡುವಂತೆ ಅಥವಾ ಸಂಬಂಧಿಕರ ನೆರವು ಪಡೆಯುವ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದೆ. ಪೈಲಟ್ ಗೆ ಕಳುಹಿಸಿರುವ ಇ-ಮೇಲ್ ಸ್ಕ್ರೀನ್ ಶಾಟ್ ಅನ್ನು ಪತ್ರಕರ್ತೆ ದೀಪಿಕಾ ನಾರಾಯಣ ಭಾರಧ್ವಜ್ ಎಕ್ಸ್ ನಲ್ಲಿ ( ಈ ಹಿಂದಿನ ಟ್ವಿಟ್ಟರ್) ಶೇರ್ ಮಾಡಿದ್ದಾರೆ. ಅಲ್ಲದೆ, ವಿಸ್ತಾರ್ ಏರ್ ಲೈನ್ಸ್ ಇಂಥ ಕ್ರಮ ಕೈಗೊಂಡಿರೋದಾಗಿ ತಿಳಿಸಿರುವ ಅವರು, ಇದನ್ನು ಖಂಡಿಸಿದ್ದಾರೆ ಕೂಡ. ಈ ಎಕ್ಸ್ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯಿಸಿದ್ದು, ವಿಸ್ತಾರ ಏರ್ ಲೈನ್ಸ್ ಉನ್ನತಾಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾ ಬಳಕೆದಾರರು ಈ ಘಟನೆಯನ್ನು ಒಂದು ಕಂಪನಿ ತನ್ನ ಉದ್ಯೋಗಿಯ ವೈಯಕ್ತಿಕ ತುರ್ತು ಅಗತ್ಯಗಳು ಹಾಗೂ ಆರೋಗ್ಯದ ತುರ್ತಿನ ಬಗ್ಗೆ ಸಹಾನುಭೂತಿ ಕಳೆದುಕೊಳ್ಳುತ್ತಿರೋದಕ್ಕೆ ಇದು ನಿದರ್ಶನ ಎಂದು ಹೇಳಿದ್ದಾರೆ. ಈ ಮೂಲಕ ಕೆಲವು ಕಂಪನಿಗಳು ಉದ್ಯೋಗಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಸ್ತಾರ ಏರ್ ಲೈನ್ಸ್, ಪೈಲಟ್ ರಜೆ ಮನವಿ ತುರ್ತು ರಜೆಯದ್ದಾಗಿರಲಿಲ್ಲ. ತುರ್ತು ಸಂದರ್ಭಗಳಲ್ಲಿ ನಾವು ನಮ್ಮ ಉದ್ಯೋಗಿಗಳಿಗೆ ಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದೆ.
ಈ ಘಟನೆ ಬಗ್ಗೆ ಮಾತನಾಡಿರುವ ವಿಸ್ತಾರದ ವಕ್ತಾರ ' ಒಂದು ನಿರ್ದಿಷ್ಟ ಇ-ಮೇಲ್ ಸ್ಕ್ರೀನ್ ಶಾಟ್ ಅನ್ನು ನಾವು ಕೂಡ ನೀಡಿದ್ದೇವೆ. ಇದು ನಮ್ಮ ಒಬ್ಬರುಪೈಲಟ್ ಅವರು ರಜೆಗಾಗಿ ಮಾಡಿದ ಮನವಿಗೆ ನೀಡಿರುವ ಪ್ರತಿಕ್ರಿಯೆಯಾಗಿದೆ. ಇನ್ನು ಇದರ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕ ತುಣಕನ್ನಷ್ಟೇ ಆನ್ ಲೈನ್ ನಲ್ಲಿ ಶೇರ್ ಮಾಡಲಾಗಿದ್ದು, ಅದರ ಮೇಲೆ ಚರ್ಚೆಗಳು ನಡೆಯುತ್ತಿವೆ. ಪೈಲಟ್ ರಜೆ ಮನವಿ ಮೂರು ದಿನಗಳದ್ದಾಗಿದ್ದು, ರಜಾ ಅರ್ಜಿಯನ್ನು ರಜೆ ಕೋರಿರುವ ದಿನಾಂಕಕ್ಕಿಂತ ಎಂಟು ದಿನ ಮೊದಲು ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಪೈಲಟ್ ಅವರ ತಾಯಿಯ ಆರೋಗ್ಯ ತಪಾಸಣೆಗಾಗಿ ರಜೆ ಅಗತ್ಯವಿದೆ ಎಂದು ಹೇಳಲಾಗಿದೆ. ಹೀಗಿರುವಾಗ ಇದು 'ತುರ್ತುರಜೆ' ವರ್ಗದಲ್ಲಿ ಬರೋದಿಲ್ಲ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತುರ್ತು ಅಗತ್ಯವಲ್ಲದ ಕಾರಣದಿಂದಲೇ ರಜೆ ನಿರಾಕರಿಸಲಾಗಿದೆ ಹಾಗೂ ವೈದ್ಯಕೀಯ ತಪಾಸಣೆ ದಿನಾಂಕ ಮರುನಿಗದಿ ಮಾಡುವಂತೆ ಅಥವಾ ಪರ್ಯಾಯ ವ್ಯವಸ್ಥೆಯನ್ನು ಹುಡುಕಿಕೊಳ್ಳುವಂತೆ ಸಲಹೆ ನೀಡಲಾಗಿದೆ. ನಮ್ಮದು ಜನಸ್ನೇಹಿ ಸಂಸ್ಥೆಯಾಗಿದ್ದು, ತುರ್ತು ಅಗತ್ಯಗಳಿಗೆ ನಾವು ಎಂದಿಗೂ ರಜೆಗಳನ್ನು ನಿರಾಕರಿಸೋದಿಲ್ಲ. ಅಲ್ಲದೆ, ಇಂಥ ಸಂದರ್ಭಗಳಲ್ಲಿ ಉದ್ಯೋಗಿಗಳಿಗೆ ಎಲ್ಲ ಅಗತ್ಯ ಬೆಂಬಲ ನೀಡುತ್ತೇವೆ ಎಂದು ವಿಸ್ತಾರ ಮಾಹಿತಿ ನೀಡಿದೆ.
ಟಾಟಾ ಮಾಲಿಕತ್ವದ ಏರ್‌ಇಂಡಿಯಾ-ವಿಸ್ತಾರ ವಿಲೀನಕ್ಕೆ ರಾಷ್ಟ್ರೀಯ ಸ್ಪರ್ಧಾ ಆಯೋಗ ಒಪ್ಪಿಗೆ
ಇನ್ನು ವಿಸ್ತಾರದ ಪ್ರತಿಕ್ರಿಯೆ ಬಗ್ಗೆ ಕೂಡ ಅನೇಕರು ಟೀಕೆಗಳನ್ನು ಮಾಡಿದ್ದಾರೆ. 'ನಿಜವಾಗಿಯೂ? ಹೀಗೆ ನೀವು ನಿಮ್ಮ ಉದ್ಯೋಗಿಗಳನ್ನು ನಡೆಸಿಕೊಳ್ಳುತ್ತೀರಾ?' ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಟಾಟಾದಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಗ್ರಾಹಕನಾಗಿ ವಿಸ್ತಾರದ ಕುರಿತು ನಾನು ನನ್ನದೇ ಆದ ಕೆಲವು ಅಸಮಾಧಾನಗಳನ್ನು ಹೊಂದಿದ್ದೇನೆ. ಆದರೆ, ಅವರ ಆಂತರಿಕ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ಕೂಡ ಕೆಲವು ಸಮಸ್ಯೆಗಳಿರೋದು ಈಗ ತಿಳಿಯುತ್ತಿದೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.