ಇಂದು 5 ಸಾವಿರ ಕೋಟಿಯ ಮೌಲ್ಯ ಹೊಂದಿರುವ ಈ ಕಂಪನಿಯನ್ನು ಮಾಲೀಕ ಮಾರಿದ್ದು ಬರೀ 70 ಕೋಟಿಗೆ!
ಬ್ಯುಸಿನೆಸ್ ಜಗತ್ತೆಂದರೆ ಹಾಗೆ ಇಲ್ಲಿ ಮಾಡುವ ಒಂದೇ ಒಂದು ಸಣ್ಣ ತಪ್ಪು ಇಡೀ ಜೀವನದಲ್ಲಿ ಮರೆಯಲಾಗದ ಪಾಠವನ್ನು ಕಲಿಸುತ್ತದೆ. ಅಂಥದ್ದೊಂದು ತಪ್ಪು ಹಾಗೂ ಅದರಿಂದ ಕಲಿತ ಪಾಠದಿಂದ ಮತ್ತೆ ಯಶಸ್ಸಿನೆಡೆಗೆ ಸಾಗಿದ ಉದ್ಯಮಿ ರಾಮ್ ಚಂದ್ರ ಅಗರ್ವಾಲ್. ಇಂದು ದೇಶದ ಮೂಲೆಮೂಲೆಗಳಲ್ಲಿ ಕಾಣುವ ವಿಶಾಲ್ ಮೆಗಾಮಾರ್ಟ್‌ನ ಮೊದಲ ಮಾಲೀಕ ಇವರು.
ಬೆಂಗಳೂರು (ಅ.24): ಗೆದ್ದವನು ಸೋತ, ಸೋತವನು ಸತ್ತ ಅನ್ನೋ ಮಾತು ಬ್ಯುಸಿನೆಸ್ ಜಗತ್ತಿನಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುತ್ತದೆ. ತೀರಾ ಅಪರೂಪಕ್ಕೆ ಮಾತ್ರವೇ ಸೋಲಿನ ಪಾತಾಳಕ್ಕೆ ಇಳಿದವರು ಗೆಲುವಿನ ದಾರಿಗೆ ಮರಳಲು ಯಶಸ್ವಿಯಾಗುತ್ತಾರೆ. ಅಂಥಾ ಒಬ್ಬ ಉದ್ಯಮಿ ರಾಮ್ ಚಂದ್ರ ಅಗರ್ವಾಲ್. ಇಂದು ದೇಶದದಲ್ಲಿ 550ಕ್ಕೂ ಸ್ಟೋರ್‌ಗಳನ್ನು ಹೊಂದಿರುವ ವಿಶಾಲ್ ಮೆಗಾ ಮಾರ್ಟ್‌ನ ಮೊದಲ ಮಾಲೀಕ ರಾಮ್ ಚಂದ್ರ ಅಗರ್ವಾಲ್. ಭಾರತದ ಮೊಟ್ಟದಮೊದಲ ಹೈಪರ್ ರೀಟೇಲ್ ಮಾರ್ಕೆಟ್ ಆಗಿದ್ದ ವಿಶಾಲ್ ಮೆಗಾ ಮಾರ್ಟ್ ಇಂದು ಪಾರ್ಟ್‌ನರ್ಸ್ ಗ್ರೂಪ್ ಮತ್ತು ಕೇದಾರ ಕ್ಯಾಪಿಟಲ್‌ನ ಮಾಲೀಕತ್ವದಲ್ಲಿದೆ. ಆದರೆ, 2008ರಲ್ಲಿ ರಾಮ್ ಚಂದ್ರ ಅಗರ್ವಾಲ್ ಮಾಡಿದ ಒಂದೇ ಒಂದು ತಪ್ಪಿನಿಂದಾಗಿ 2010ರಲ್ಲಿ ವಿಶಾಲ್ ಮೆಗಾಮಾರ್ಟ್ ಎನ್ನುವ ಕಂಪನಿಯನ್ನು ಬರೀ 70 ಕೋಟಿಗೆ ಮಾರಾಟ ಮಾಡಿದ್ದರು. ಇಂದು ಈ ಕಂಪನಿಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ. ಅಷ್ಟಕ್ಕೂ ರಾಮ್‌ಚಂದ್ರ ಅಗರ್ವಾಲ್ ಅವರ ತಪ್ಪಿನ ಬಗ್ಗೆ ತಿಳಿಯುವ ಮುನ್ನ ಅವರು ಈ ಕಂಪನಿ ಆರಂಭಿಸಿದ್ದರ ಹಿಂದೆ ಸಾಹಸಮಯ ಕಥೆ ಇದೆ.
ರಾಮ್ ಚಂದ್ರ ಅಗರ್ವಾಲ್ ತುಂಬಾ ಸಣ್ಣ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಲ್ಲಿಯೇ ಪಾರ್ಶ್ವವಾಯುಗೆ ತುತ್ತಾದ ಬಳಿಕ ರಾಮ್ ಚಂದ್ರ ಅಗರ್ವಾಲ್ ಅವರ ಜೀವನ ಅತ್ಯಂತ ಕೆಟ್ಟ ತಿರುವು ಪಡೆದುಕೊಂಡಿತು. ಪಾರ್ಶ್ವವಾಯು ಎಷ್ಟು ಗಂಭೀರವಾಗಿತ್ತೆಂದರೆ, ಕ್ರಚ್ (ಊರುಗೋಲು) ಇಲ್ಲದೆ ರಾಮ್ ಚಂದ್ರ ಅಗರ್ವಾಲ್‌ಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಕ್ರಚ್‌ಗಳಿಲ್ಲದೆ ರಾಮ್ ಚಂದ್ರ ಅಗರ್ವಾಲ್ ನಡೆಯಲು ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಅವರ ಕುಟುಂಬ ಬಹಳ ಪ್ರಯತ್ನಪಟ್ಟಿತು. ಆದರೆ, ಇದ್ಯಾವುದು ಸಹಾಯಕ್ಕೆ ಬರಲಿಲ್ಲ. ಅವರ ಸ್ಥಿತಿಯನ್ನು ಕಂಡ ಕುಟುಂಬದವರಿಗೆ, ರಾಮ್ ಚಂದ್ರ ಅವರ ಭವಿಷ್ಯದ ಬಗ್ಗೆ ಆತಂಕ ಪಡುವಂತಾಗಿತ್ತು.
ವಿದ್ಯಾಭ್ಯಾಸ ಮುಗಿದ ಬಳಿಕ, ಆರ್ಥಿಕವಾಗಗಿ ಕೆಟ್ಟ ಪರಿಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಉದ್ಯೋಗಕ್ಕಾಗಿ ಶ್ರದ್ಧೆಯಿಂದ ಹುಡುಕಾಟ ನಡೆಸಿದ್ದರು. ಆದರೆ, ಅಂಗವೈಕಲ್ಯದ ಕಾರಣದಿಂದಾಗಿ ಯಾವ ಕಂಪನಿಗಳು ಕೂಡ ಇವರಿಗೆ ಕೆಲಸ ನೀಡಲು ಉತ್ಸುಕರಾಗಿರಲಿಲ್ಲ. ನಡೆಯುವುದಕ್ಕಿಂತ ಹೆಚ್ಚಾಗಿ ಕೆಲಸ ಹುಡುಕುವುದೇ ರಾಮ್‌ಚಂದ್ರ ಅಗರ್ವಾಲ್‌ಗೆ ಕಷ್ಟ ಎನಿಸಿತ್ತು. ಆ ಹಂತದಲ್ಲಿಯೇ ಇನ್ನು ಮುಂದೆ ಕೆಲಸ ಹುಡುಕೋದಿಲ್ಲ, ತನ್ನದೇ ಆದ ಬ್ಯುಸಿನೆಸ್ ಆರಂಭ ಮಾಡ್ತೇನೆ ಎಂದು ನಿರ್ಧಾರ ಮಾಡಿದ್ದರು. ಇದಕ್ಕೆ ಕುಟುಂಬ ಹಾಗೂ ಸ್ನೇಹಿತರ ಸಹಾಯವೂ ಸಿಕ್ಕಿತು. ಸ್ನೇಹಿತರಿಂದ ಸಾಲವಾಗಿ ಪಡೆದ ಹಣದಲ್ಲಿ 1986ರಲ್ಲಿ ಫೋಟೋಕಾಪಿ ಶಾಪ್‌ಅನ್ನು ಆರಂಭ ಮಾಡಿದ್ದರು. ಅದಾದ ಕೆಲವೇ ವರ್ಷಗಳಲ್ಲಿ ಕೋಲ್ಕತ್ತದ ಲಾಲ್ ಬಜಾರ್‌ನಲ್ಲಿ ತಮ್ಮದೇ ಆದ ಬಟ್ಟೆ ಅಂಗಡಿಯನ್ನು ಆರಂಭ ಮಾಡುವ ಮೂಲಕ ರಾಮ್ ಚಂದ್ರ ಅಗರ್ವಾಲ್ ತಮ್ಮ ಜೀವನದಲ್ಲಿ ದೊಡ್ಡ ಹೆಜ್ಜೆ ಇರಿಸಿದ್ದರು.
2001ರ ವೇಳೆ ಕೋಲ್ಕತ್ತವನ್ನು ಹಾಗೂ ತಮ್ಮ ಬಟ್ಟೆ ಅಂಗಡಿಯನ್ನು ತೊರೆದ ರಾಮ್ ಚಂದ್ರ ಅಗರ್ವಾಲ್, ನೇರವಾಗಿ ದೆಹಲಿಗೆ ಆಗಮಿಸಿದ್ದರು. ಮತ್ತೊಂದು ಹೊಸ ಸಾಹಸ ಮಾಡುವ ನಿರ್ಧಾರ ತಲೆಯಲ್ಲಿತ್ತು. 'ವಿಶಾಲ್ ರಿಟೇಲ್' ಎನ್ನುವ ಹೆಸರಲ್ಲಿ ತಮ್ಮ ರಿಟೇಲ್ ಬಟ್ಟೆ ಮಳಿಗೆಯನ್ನು ಆರಂಭ ಮಾಡಿದ್ದರು. ಒಂದೇ ಒಂದು ಸಣ್ಣ ಅಂಗಡಿಯಾಗಿ ಆರಂಭವಾಗಿದ್ದ ಈ ಕಂಪನಿ ಕೆಲವೇ ವರ್ಷಗಳಲ್ಲಿ ದೇಶದಲ್ಲಿ 200ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದ್ದ ದೊಡ್ಡ ಕಂಪನಿ ಎನಿಸಿಕೊಂಡಿತು. ವಿಶಾಲ್ ರಿಟೇಲ್ ಎಷ್ಟು ವೇಗವಾಗಿ ವಿಸ್ತರಣೆಯ ಆಯಿತು ಎಂದರೆ, ಕೊನೆಗೆ ದೇಶದ ಮೊಟ್ಟಮೊದಲ ಹೈಪರ್ ರಿಟೇಲ್ ಮಾರ್ಕೆಟ್ ಎನಿಸಿಕೊಂಡು ವಿಶಾಲ್ ಮೆಗಾ ಮಾರ್ಟ್ ಎನಿಸಿಕೊಂಡಿತು.
ತಮ್ಮ ಕಂಪನಿಯ ಜನಪ್ರಿಯತೆಯನ್ನು ಹೆಚ್ಚಿಸಲು, ರಾಮ್ ಚಂದ್ರ ಅಗರವಾಲ್ ಅವರು ಬ್ಯಾಂಕ್‌ಗಳಿಂದ ಗಣನೀಯ ಮೊತ್ತದ ಹಣವನ್ನು ಸಾಲವಾಗಿ ಪಡೆದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರು. ದುರದೃಷ್ಟವಶಾತ್, 2008 ರಲ್ಲಿ, ಸ್ಟಾಕ್ ಮಾರುಕಟ್ಟೆಯು ಭಾರೀ ಕುಸಿದ ಕಂಡಿತು. ಇದರಿಂದಾಗಿ ವಿಶಾಲ್ ಮೆಗಾ ಮಾರ್ಟ್ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿತು. ಇದರ ನಷ್ಟವೇ ಬರೋಬ್ಬರಿ 750 ಕೋಟಿ ರೂಪಾಯಿ ಆಗಿತ್ತು. ಈ ಆರ್ಥಿಕ ಬಿಕ್ಕಟ್ಟು ಕಂಪನಿಯ ದಿವಾಳಿತನಕ್ಕೆ ಕಾರಣವಾಯಿತು. ರಾಮ್ ಚಂದ್ರ ಅಗರವಾಲ್ ಅವರು ತಮ್ಮ ಸಾಲವನ್ನು ಮರುಪಾವತಿಸಲು ವಿಶಾಲ್ ರಿಟೇಲ್ ಅನ್ನು ಮಾರಾಟ ಮಾಡಲು ನಿರ್ಧಾರ ಮಾಡಿದ್ದರು.
ಫೋರ್ಬ್ಸ್ ಇಂಡಿಯಾದ ಪ್ರಕಾರ, ವಿಶಾಲ್ ರಿಟೇಲ್ ಅನ್ನು ಟಿಪಿಜಿ ಮತ್ತು ಶ್ರೀರಾಮ್ ಗ್ರೂಪ್ ಸಂಸ್ಥೆಗೆ 2010 ರಲ್ಲಿ ಅತೀ ಕಡಿಮೆ ಮೊತ್ತ 70 ಕೋಟಿ ರೂಪಾಯಿಗೆ ಮಾರಾಟ ಮಾಡಲಾಯಿತು. ಎಂಟು ವರ್ಷಗಳ ಕೆಳಗೆ, ಕಂಪನಿಯು ಕೈ ಮತ್ತೆ ಬದಲಾಯಿತು. ಈ ಬಾರಿ, ಅದನ್ನು ಮತ್ತೊಂದು ಖಾಸಗಿ ಇಕ್ವಿಟಿ ಕನ್ಸೋರ್ಟಿಯಂ ಪಾರ್ಟ್‌ನರ್ಸ್ ಗ್ರೂಪ್ ಮತ್ತು ಕೇದಾರ ಕ್ಯಾಪಿಟಲ್ ರೂ 5,000 ಕೋಟಿಗಿಂತ ಹೆಚ್ಚು ಮೊತ್ತಕ್ಕೆ ಖರೀದಿ ಮಾಡಿದೆ.
14 ವರ್ಷಗಳ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ನಿಮ್ಮ ಬಳಿ ಈಗ 1.36 ಕೋಟಿ ರೂ. ಇರ್ತಿತ್ತು!
ಹಾಗಂತ ರಾಮ್ ಚಂದ್ರ ಅಗರ್ವಾಲ್ ಸುಮ್ಮನೇ ಇದ್ರಾ ಅಂದ್ರೆ ಅದಕ್ಕೆ ಉತ್ತರ ಇಲ್ಲ ಎನ್ನುವುದಷ್ಟೇ.ಅವರು ಕೆಲವು ವರ್ಷಗಳ ನಂತರ "ವಿ2 ರಿಟೇಲ್" ಎಂಬ ಹೆಸರಿನಲ್ಲಿ ರಿಟೇಲ್ ಉದ್ಯಮಕ್ಕೆ ವಾಪಾಸ್ ಬಂದರು. ಇಂದು, ವಿ2 ರಿಟೇಲ್ ಲಿಮಿಟೆಡ್ 17 ರಾಜ್ಯಗಳಲ್ಲಿ 101 ಮಳಿಗೆಗಳನ್ನು ಹೊಂದಿರುವ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದಾಗಿದೆ ಮತ್ತು 2023ರ ಹಣಕಾಸು ವರ್ಷದಲ್ಲಿ ವಿ2 ರಿಟೇಲ್ 845 ಕೋಟಿ ಆದಾಯವನ್ನು ಗಳಿಸಿರುವ ಕಂಪನಿ ಎನಿಸಿದೆ.
ಮನರಂಜನಾ ಉದ್ಯಮದಲ್ಲೂ ಅಂಬಾನಿಯದ್ದೇ ಸಾಮ್ರಾಜ್ಯ: ಡಿಸ್ನಿ ಹಾಟ್‌ಸ್ಟಾರ್ ಕೂಡ ರಿಲಯನ್ಸ್ ಪಾಲು!