ನವದೆಹಲಿ(ಡಿ.11): ನಿನ್ನೆಯಷ್ಟೇ ಆರ್‌ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟದಿಂದ ಬೇಸತ್ತು ಪಟೇಲ್ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇಂದು ಬೆಳಗ್ಗೆ ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿಯ ತಾತ್ಕಾಲಿಕ ಸದಸ್ಯರಾಗಿದ್ದ ಸುರ್ಜಿತ್ ಭಲ್ಲಾ ಕೂಡ ರಾಜೀನಾಮೆ ನೀಡಿ ಹೊರ ಹೋಗಿದ್ದಾರೆ. ಈ ಮಧ್ಯೆ ಆರ್‌ಬಿಐ ಡೆಪ್ಯೂಟಿ ಗರ್ವನರ್ ವಿರಾಲ್ ಆಚಾರ್ಯ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹಬ್ಬಿದೆ.

ಎನ್‌ಪಿಎ, ಕೇಂದ್ರಕ್ಕೆ ಮೀಸಲು ಹಣ ವರ್ಗಾವಣೆ ಮತ್ತಿತರ ವಿಷಯಗಳ ಕುರಿತು ಊರ್ಜಿತ್ ಪಟೇಲ್ ಅವರಿಗಿಂತ ಹೆಚ್ಚಾಗಿ ವಿರಾಲ್ ಆಚಾರ್ಯ ಕೇಂದ್ರದೊಂದಿಗೆ ಜಗಳಕ್ಕಿಳಿದಿದ್ದರು.

ಆದರೆ ಇದೀಗ ಡೆಪ್ಯೂಟಿ ಗರ್ವನರ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹಬ್ಬಿದ್ದು, ಈ ವದಂತಿಯನ್ನು ಖುದ್ದು ವಿರಾಲ್ ಆಚಾರ್ಯ ಅವರೇ ತಳ್ಳಿ ಹಾಕಿದ್ದಾರೆ.

ಕುರಿತು ಆರ್‌ಬಿಐ ಕೂಡ ಸ್ಪಷ್ಟನೆ ನೀಡಿದ್ದು, ವಿರಾಲ್ ಆಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.