ವಿಜಯ್ ಮಲ್ಯಗೆ ಸೇರಿದ ಆಸ್ತಿ ವಶಕ್ಕೆ ಮುಂದಾದ ಇಡಿ..!

Vijay Mallya's Woes Worsen As ED Seeks To Confiscate Assets Worth Rs. 12,500 Crore
Highlights

ವಿಜಯ್ ಮಲ್ಯಗೆ ಸೇರಿದ ಆಸ್ತಿ ವಶಕ್ಕೆ ಮುಂದಾದ ಇಡಿ

ದೇಶಭ್ರಷ್ಟ ಅಪರಾಧಿ ಎಂದು ಘೋಷಿಸುವಂತೆ ಇಡಿ ಮನವಿ

12.500 ಕೋಟಿ ರೂ. ಮೊತ್ತದ ಆಸ್ತಿ ವಶಕ್ಕೆ ಇಡಿ ಸಜ್ಜು

ನವದೆಹಲಿ(ಜೂ.22): ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ  ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಅಪರಾಧಿ ಎಂದು ಘೋಷಿಸಲು ಜಾರಿ ನಿರ್ದೇಶನಾಲಯ ಸಜ್ಜಾಗಿದೆ. ಅಲ್ಲದೇ ವಿಜಯ್ ಮಲ್ಯ ಅವರಿಗೆ ಸೇರಿದ 12.500 ಕೋಟಿ ರೂಪಾಯಿ ಮೊತ್ತದ ಆಸ್ತಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ  ಅಧಿಕೃತವಾಗಿ ಇಂದು  ನ್ಯಾಯಾಲಯದ ಮೊರೆ ಹೋಗಿದೆ.

ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳ ಆಸ್ತಿ ವಶಪಡಿಸಿಕೊಳ್ಳಲು ಅಧಿಕಾರ ನೀಡುವ ಸುಗ್ರೀವಾಜ್ಞೆಯಡಿ  ಮುಂಬೈ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯ್ ಮಲ್ಯಗೆ ಸೇರಿದ 12.500 ಕೋಟಿ ರೂಪಾಯಿ ಮೊತ್ತದ  ಸ್ಥಿರ ಹಾಗೂ ಚರ ಆಸ್ತಿಗಳ ವಶ ಈ ಅರ್ಜಿಯಲ್ಲಿ ಸೇರಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆ ಪಿಎಂಎಲ್ ಎ ಅಡಿ ದಾಖಲಿಸಿರುವ ಎರಡು ಜಾರ್ಜ್ ಶೀಟ್ ನಲ್ಲಿ ಇಡಿ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದು, ನ್ಯಾಯಾಲಯದಿಂದ ವಿಜಯ್ ಮಲ್ಯ ಅವರನ್ನು ತಲೆಮರೆಸಿಕೊಂಡಿದ್ದ ಅಪರಾಧಿ ಎಂದು ಘೋಷಿಸಬೇಕೆಂದು ಮನವಿ ಮಾಡಿಕೊಂಡಿದೆ. ವಿವಿಧ ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಅವರನ್ನು ಕಾನೂನು ವ್ಯವಸ್ಥೆಯಡಿ ಸ್ವದೇಶಕ್ಕೆ ಕರೆತರಲು ಭಾರತ ತೀವ್ರ ಪ್ರಯತ್ನ ನಡೆಸುತ್ತಿದೆ.

ಇಂತಹ ದೇಶ ಭ್ರಷ್ಟರನ್ನು ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸುಗ್ರೀವಾಜ್ಞೆ 2018 ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದ ನಂತರ ರಾಷ್ಟ್ರಪತಿಗಳ ಅಂಗೀಕಾರವೂ ದೊರೆತಿದೆ. ಹಣ ವರ್ಗಾವಣೆ ಕಾಯ್ದೆ 2012ರ ಅಡಿಯಲ್ಲಿ ವಿಶೇಷ ಕೋರ್ಟ್ ಗಳಿಗೆ  ವಿಶೇಷ ವಿನಾಯಿತಿಯನ್ನು ಈ ಸುಗ್ರೀವಾಜ್ಞೆ ನೀಡಲಿದ್ದು, ದೇಶಭ್ರಷ್ಟರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿ  ಕೂಡಲೇ ಅವರ ಆಸ್ತಿ ವಶಪಡಿಸಿಕೊಳ್ಳಬಹುದಾಗಿದೆ.

loader