ಮುಂಬೈ(ಫೆ.26): ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ದೇಶದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಅವರ ಮುಂಬೈ ನಿವಾಸ ಮುಂದೆ ಸ್ಫೋಟಕಗಳನ್ನು ಇಡಲಾಗಿದ್ದ ಕಾರೊಂದು ಗುರುವಾರ ಪತ್ತೆಯಾಗಿ ಭಾರೀ ಆತಂಕ ಮೂಡಿಸಿದೆ.

ಪೆದ್ದಾರ್‌ ರಸ್ತೆಯಲ್ಲಿನ ಮುಕೇಶ್‌ ಅವರ ನಿವಾಸ ಆ್ಯಂಟಿಲಿಯಾದ ಸಮೀಪದಲ್ಲೇ ಗುರುವಾರ ಮಧ್ಯಾಹ್ನ ಅನುಮಾನಸ್ಪಾದವಾಗಿ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರನ್ನು ತಪಾಸಣೆ ಒಳಪಡಿಸಿದ ವೇಳೆ ಅದರಲ್ಲಿ 20 ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿವೆ. ಕೂಡಲೇ ಬಾಂಬ್‌ ಪತ್ತೆ ಮತ್ತು ನಿಷ್ಕಿ್ರಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಫೋಟಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲೆಟಿನ್‌ ಕಡ್ಡಿಗಳನ್ನು ಸ್ಫೋಟದ ಕೃತ್ಯಗಳಿಗೆ ಬಳಸಲಾಗುವ ಕಾರಣ ಆತಂಕ ಉಂಟಾಗಿದೆ. ಆದರೆ ಪತ್ತೆಯಾದ ಜಿಲೆಟಿನ್‌ ಕಡ್ಡಿ ಸ್ಫೋಟಕ್ಕೆ ಸಜ್ಜಾದ ಸ್ಥಿತಿಯಲ್ಲಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಮುಂಬೈ ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ನಡುವೆ ಕಾರಿನೊಳಗೆ ಪ್ರತ್ಯೇಕ ನಂಬರ್‌ ಪ್ಲೇಟೊಂದು ಪತ್ತೆಯಾಗಿದೆ. ಅದು ಅಂಬಾನಿ ಅವರ ಮನೆ ಪ್ರವೇಶಕ್ಕೆ ಅನುಮತಿ ಪಡೆದಿದ್ದ ವಾಹನಗಳ ನಂಬರ್‌ ಪ್ಲೇಟ್‌ಗೆ ಹೋಲಿಕೆಯಾಗುತ್ತಿರುವ ಕಾರಣ, ಇದೊಂದು ಭಾರೀ ದುಷ್ಕೃತ್ಯದ ಸಂಚಿನ ಘಟನೆಯಾಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

27 ಅಂತಸ್ತುಗಳನ್ನು ಹೊಂದಿರುವ ಪೆದ್ದಾರ್‌ ರಸ್ತೆಯಲ್ಲಿನ ಮುಕೇಶ್‌ ಅಂಬಾನಿ ಮನೆ ವಿಶ್ವದಲ್ಲೇ ಅತಿದುಬಾರಿ ಮನೆಗಳ ಪೈಕಿ ಒಂದೆಂಬ ಹಿರಿಮೆ ಹೊಂದಿದೆ. ಮುಕೇಶ್‌ ಅಂಬಾನಿ ಸಿಐಎಸ್‌ಎಫ್‌ನಿಂದ ‘ಝಡ್‌’ ಮಾದರಿ ಭದ್ರತೆ ಹೊಂದಿದ್ದಾರೆ.

ಅಂಬಾನಿ ಕಾಪ್ಟರ್‌ನ ಇಂಧನ ಟ್ಯಾಂಕಲ್ಲಿ ಪತ್ತೆಯಾಗಿತ್ತು ಮಣ್ಣು!

2009ರಲ್ಲಿ ಮುಕೇಶ್‌ರ ಸೋದರ ಅನಿಲ್‌ ಅಂಬಾನಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನ ಇಂಧನ ಟ್ಯಾಂಕ್‌ನಲ್ಲಿ ಕಲ್ಲು ಮತ್ತು ಮಣ್ಣು ತುಂಬಿ ಭಾರೀ ದುಷ್ಕೃತ್ಯದ ಸಂಚೊಂದನ್ನು ನಡೆಸಲಾಗಿತ್ತು. ಆದರೆ ಅದೃಷ್ಟವಶಾತ್‌ ಎಂಜಿನಿಯರ್‌ ಒಬ್ಬರು ಭದ್ರತಾ ತಪಾಸಣೆ ವೇಳೆ ಇದನ್ನು ಪತ್ತೆಹಚ್ಚಿದ ಕಾರಣ ಸಂಭವನೀಯ ದುರ್ಘಟನೆಯೊಂದು ತಪ್ಪಿತ್ತು.