ದುಬೈ(ಸೆ.22): ತೈಲ ಖರೀದಿ ಮತ್ತು ವ್ಯಾಪಾರದ ಮೇಲೆ ಅನವಶ್ಯಕ ನಿರ್ಬಂಧ ಹೇರುತ್ತಿರುವ ಅಮೆರಿಕಕ್ಕೆ ಇರಾನ್ ತಕ್ಕ ಪಾಠ ಕಲಿಸಲಿದೆ ಎಂದು ಅಧ್ಯಕ್ಷ ಹಸನ್ ರೋಹಾನಿ ಗುಡುಗಿದ್ದಾರೆ. 

ಇರಾನ್ ಮೇಲೆ ತೈಲ ಮತ್ತು ಅಣ್ವಸ್ತ್ರ ನಿರ್ಬಂಧ ಹೇರಿಕೆಯನ್ನು ಅಮೆರಿಕ ಮಾಡುತ್ತಿದ್ದು, ಇದರಿಂದಾಗಿ ಉಭಯ ರಾಷ್ಟ್ರಗಳ ಮಧ್ಯೆ ಕಲಹಕ್ಕೆ ಕಾರಣವಾಗಿದೆ. ಆದರೆ ಅಮೆರಿಕದ ಬೆದರಿಕೆಗೆ ಇರಾನ್ ಬಗ್ಗುವುದಿಲ್ಲ. ಇರಾನ್ ಜೊತೆಗಿನ ಕಲಹದಲ್ಲಿ ಡೊನಾಲ್ಡ್ ಟ್ರಂಪ್ ಸೋಲಲಿದ್ದಾರೆ ಎಂದು ರೋಹಾನಿ ಹೇಳಿದ್ದಾರೆ. 

ಇರಾನ್ ವಿಷಯದಲ್ಲಿ ಮೂಗು ತೂರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ, ಇರಾಕ್‌ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಆದ ಗತಿಯೇ ಆಗಲಿದೆ ಎಂದು ರೋಹಾನಿ ಹರಿಹಾಯ್ದಿದ್ದಾರೆ.  

ಇರಾನ್ ಈಗಾಗಲೇ ಹೊಂದಿರುವ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಹಾಗೆಯೇ ಬಿಟ್ಟು ಬಿಡುವುದಿಲ್ಲ ಎಂದು ರೋಹಾನಿ ಸ್ಪಷ್ಟಪಡಿಸಿದ್ದಾರೆ. ಗಲ್ಫ್ ನಲ್ಲಿ ನಡೆಯುತ್ತಿರುವ ವಾರ್ಷಿಕ ಪರೇಡ್‌ನಲ್ಲಿ ಇರಾನ್ ತನ್ನ ನೌಕಾಪಡೆಯ ಸಾಮರ್ಥ್ಯವನ್ನು ತೋರಿಸಿದೆ ಎಂದು ಅವರು ತಿಳಿಸಿದ್ದಾರೆ.