ವಾಷಿಂಗ್ಟನ್(ಜೂ.01)​: ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಭಾರತಕ್ಕೆ ಡೋನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಶಾಕ್ ನೀಡಿದೆ.

ಭಾರತಕ್ಕೆ ನೀಡಿದ್ದ ಆದ್ಯತೆಯ ವ್ಯಾಪಾರ ಮಾನ್ಯತೆಯನ್ನು ಅಮೆರಿಕ ದಿಢೀರನೇ ರದ್ದುಗೊಳಿಸಿದೆ.ಈ ಕುರಿತಾದ ನಿರ್ಣಯಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಈ ಕುರಿತು ಕಳೆದ ಮಾರ್ಚ್ ತಿಂಗಳಲ್ಲೇ ಭಾರತಕ್ಕೆ ನೋಟಿಸ್ ನೀಡಿದ್ದು, 60 ದಿನಗಳ ಅಂತಿಮ ಗಡುವು ಇದೀಗ ಮುಗಿದಿದೆ ಎಂದು ಅಮೆರಿಕ ತಿಳಿಸಿದೆ. ಅಲ್ಲದೇ ಈ ಕುರಿತು ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಇದೇ ಜೂ.05ರಿಂದ ಜಾರಿಗೆ ಬರುವಂತೆ ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದುಗೊಳಿಸುತ್ತಿರುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ.

ಪ್ರಸ್ತುತ ಈ ಒಪ್ಪಂದದಡಿ 560 ಕೋಟಿ ಡಾಲರ್‌ ಮೌಲ್ಯದ ಭಾರತದ ಸರಕುಗಳು ಅಮೆರಿಕಕ್ಕೆ ಸುಂಕರಹಿತವಾಗಿ ರಫ್ತಾಗುತ್ತಿದ್ದು, ಅಮೆರಿಕ ಸರ್ಕಾರದ ಕ್ರಮದಿಂದಾಗಿ ಈ ವಸ್ತುಗಳಿಗೂ ಇನ್ನು ಮುಂದೆ ಭಾರತ ಸುಂಕ ನೀಡಬೇಕಾಗುತ್ತದೆ.

ಇನ್ನು ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ಇದೊಂದು ದುರದೃಷ್ಟಕರ ನಿರ್ಣಯ ಎಂದು ಹೇಳಿದೆ.