ಜಿನಿವಾ(ಜು.28): ವಿಶ್ವಸಂಸ್ಥೆಗೆ ಹಣಕಾಸಿನ ಬಿಕ್ಕಟ್ಟು ಎದುರಾಗಿದ್ದು, ಅಂತರಾಷ್ಟ್ರೀಯ ಸಂಸ್ಥೆಗೆ ಹಣ ಪಾವತಿಸುವಂತೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಸದಸ್ಯ ರಾಷ್ಟ್ರಗಳು ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಅಂಟೊನಿಯೊ ಹೇಳಿದ್ದಾರೆ. ಈ ಕೂಡಲೇ ಸದಸ್ಯ ರಾಷ್ಟ್ರಗಳು ಹಣ ಪಾವತಿಸುವಂತೆ ಗುಟೆರಸ್ ಪತ್ರ ಬರೆದಿದ್ದಾರೆ. 

ಕ್ಯಾಲೆಂಡರ್ ವರ್ಷದಲ್ಲಿ ನಮ್ಮ ಖಜಾನೆಯಲ್ಲಿನ ಹಣ ಯಾವತ್ತೂ ಇಷ್ಟೊಂದು ಕಡಿಮೆಯಾಗಿರಲಿಲ್ಲ. ಶೀಘ್ರದಲ್ಲೇ ಖಜಾನೆ ಖಾಲಿಯಾಗಲಿದೆ ಎಂದು ಗುಟೆರಸ್ ಪತ್ರದಲ್ಲಿ ಹೇಳಿರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹಾಗೂ ವಿಶ್ವಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ಕೆಲ ಕ್ರಮಗಳನ್ನು ಕೈಗೊಳ್ಳುವುದಾಗಿ ಗುಟೆರಸ್‌ ಭರವಸೆ ನೀಡಿದ್ದಾರೆ.