Asianet Suvarna News Asianet Suvarna News

ಇಂದು ಕೇಂದ್ರ ಬಜೆಟ್: ಸತತ 6ನೇ ಬಾರಿ ಬಜೆಟ್‌ ಮಂಡಿಸಿ ಮೊರಾರ್ಜಿ ದಾಖಲೆ ಸರಿಗಟ್ಟಲಿರುವ ನಿರ್ಮಲಾ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೆ ಹೋಗುವುದಕ್ಕೂ ಮುನ್ನ ಮಂಡಿಸಲಿರುವ ಕೊನೆಯ ಆಯವ್ಯಯವನ್ನು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. 

Union Budget 2024 today Nirmala Sitharaman will equal Morarji's record by presenting the budget for the 6th time in a row akb
Author
First Published Feb 1, 2024, 7:04 AM IST

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೆ ಹೋಗುವುದಕ್ಕೂ ಮುನ್ನ ಮಂಡಿಸಲಿರುವ ಕೊನೆಯ ಆಯವ್ಯಯವನ್ನು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. 

ಚುನಾವಣೆಗೂ ಮುನ್ನ ಮಂಡಿಸಲಿರುವ ಬಜೆಟ್‌ ಆಗಿರುವುದರಿಂದ ಇದು ಪೂರ್ಣ ಪ್ರಮಾಣದ ಬಜೆಟ್‌ ಆಗಿರದೆ ಮಧ್ಯಂತರ ಬಜೆಟ್‌ ಆಗಿರಲಿದೆ. ಅದರಲ್ಲಿ ಮತದಾರರಿಗೆ ಭರ್ಜರಿ ಕೊಡುಗೆಗಳು ಇರಲಿವೆಯೇ ಅಥವಾ ದೇಶದ ಆರ್ಥಿಕಾಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗುತ್ತದೆಯೇ ಅಥವಾ ಜನಪ್ರಿಯ ಹಾಗೂ ಅಭಿವೃದ್ಧಿಪರ ಉಪಕ್ರಮಗಳ ಮಿಶ್ರಣವಾದ ಬಜೆಟ್‌ ಆಗಿರಲಿದೆಯೇ ಎಂಬ ಕುತೂಹಲ ಮೂಡಿದೆ.

Union Budget 2024: ಪಿಎಂ ಕಿಸಾನ್ ಯೋಜನೆ ಸಹಾಯಧನ 9,000ರೂಪಾಯಿಗೆ ಏರಿಕೆ ಸಾಧ್ಯತೆ,ರೈತರಲ್ಲಿ ಹೆಚ್ಚಿದ ನಿರೀಕ್ಷೆ

ಹಾಗೆಯೇ, ಮೊರಾರ್ಜಿ ದೇಸಾಯಿ ಬಳಿಕ ಸತತ 6 ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ವಿತ್ತ ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್‌ ಇಂದು ದಾಖಲೆ ಬರೆಯಲಿದ್ದಾರೆ. ಅಲ್ಲದೆ, 2019ರಿಂದ ಈವರೆಗೆ ಪೂರ್ಣಾವಧಿ ವಿತ್ತ ಮಂತ್ರಿಯಾಗಿ ಕೆಲಸ ಮಾಡಿದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಲಿದ್ದಾರೆ. ಇನ್ನು, ಸತತ ಐದು ಬಜೆಟ್‌ಗಳನ್ನು ಮಂಡಿಸಿರುವ ಮನಮೋಹನ್ ಸಿಂಗ್‌, ಅರುಣ್‌ ಜೇಟ್ಲಿ, ಪಿ.ಚಿದಂಬರಂ ಹಾಗೂ ಯಶವಂತ್‌ ಸಿನ್ಹಾ ಅವರ ದಾಖಲೆಗಳನ್ನು ಅವರು ಮುರಿಯಲಿದ್ದಾರೆ.

ಲೋಕಸಭೆಯಲ್ಲಿ ನಿರ್ಮಲಾ ಮಂಡಿಸಲಿರುವ ಬಜೆಟ್‌ ಅನ್ನು ನಂತರ ರಾಜ್ಯಸಭೆಯಲ್ಲೂ ಮಂಡಿಸಲಾಗುತ್ತದೆ. ನಂತರ ಚರ್ಚೆ ನಡೆಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲಾಗುತ್ತದೆ. ಬಜೆಟ್‌ ಮುನ್ನಾದಿನ ಮಂಡಿಸಬೇಕಾದ ಹಣಕಾಸು ಸಮೀಕ್ಷಾ ವರದಿಯನ್ನು ಈ ಬಾರಿ ಕೇಂದ್ರ ಸರ್ಕಾರ ಮಂಡಿಸದಿರಲು ನಿರ್ಧರಿಸಿದೆ.

Union Budget 2024:ಈ ಬಾರಿ ಯಾವೆಲ್ಲ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ? ಸುಳಿವು ನೀಡಿದ ವಿತ್ತ ಸಚಿವೆ

ಬಜೆಟ್‌ನಲ್ಲಿ ಏನಿರಬಹುದು?

  • ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಬಜೆಟ್‌ ತೆರಿಗೆದಾರ ಸ್ನೇಹಿ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಹೊಸ ಘೋಷಣೆಗಳು ಇರುವುದಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.
  • ಹಣದುಬ್ಬರದ ಬಿಸಿ ಕಡಿಮೆ ಮಾಡಲು ಸ್ಟಾಂಡರ್ಡ್‌ ಡಿಡಕ್ಷನ್‌ ಅನ್ನು ಹೊಸ ಹಾಗೂ ಹಳೆ ಎರಡೂ ತೆರಿಗೆ ಪದ್ಧತಿಯಡಿ 50,000 ರು.ಗೆ ಏರಿಸುವ ಸಾಧ್ಯತೆಯಿದೆ.
  •  ಆದಾಯ ತೆರಿಗೆ ದರಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಆದರೆ, ತೆರಿಗೆ ವಿನಾಯ್ತಿ ಮಿತಿ ಮತ್ತು ತೆರಿಗೆ ಸ್ಲ್ಯಾಬ್‌ಗಳನ್ನು ಬದಲಿಸುವ ಸಾಧ್ಯತೆಯಿದೆ. ತೆರಿಗೆ ವಿನಾಯ್ತಿ ಮಿತಿಯನ್ನು ಈಗಿರುವ 5 ಲಕ್ಷ ರು.ಗಳಿಂದ 5.5 ಲಕ್ಷ ರು.ಗೆ ಏರಿಸುವ ಸಾಧ್ಯತೆಯಿದೆ.
  • ಗ್ರಾಮೀಣ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲು ಉದ್ಯೋಗ ಖಾತ್ರಿ ಯೋಜನೆಗೆ ನೀಡುವ ಅನುದಾನ ಹೆಚ್ಚಿಸಬಹುದು.
  • ವಿತ್ತೀಯ ಕೊರತೆ ಗುರಿಯನ್ನು ಜಿಡಿಪಿಯ ಶೇ.5.3ಕ್ಕೆ ನಿಗದಿಪಡಿಸುವ ಸಾಧ್ಯತೆಯಿದೆ. ಆಗ ಸರ್ಕಾರವು ಈಗ ಮಾಡುತ್ತಿರುವುದಕ್ಕಿಂತ ಶೇ.10ರಷ್ಟು ಹೆಚ್ಚು ಖರ್ಚು ಮಾಡಲು ಸಾಧ್ಯವಾಗುತ್ತದೆ.
  • ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರಿಗೆ ಪ್ರತಿ ವರ್ಷ ನೀಡುತ್ತಿರುವ ನೆರವನ್ನು ಈಗಿರುವ 6000 ರು.ನಿಂದ 9000 ರು.ಗೆ ಏರಿಸುವ ಸಾಧ್ಯತೆಯಿದೆ.

ಮಧ್ಯಂತರ ಬಜೆಟ್‌ ಏಕೆ?

ಚುನಾವಣೆಗೆ ಹೋಗುವುದಕ್ಕೂ ಮುನ್ನ ಸರ್ಕಾರಗಳು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲು ಸಾಧ್ಯವಿಲ್ಲ. ಹೀಗಾಗಿ ಲೇಖಾನುದಾನ ಅಥವಾ ಮಧ್ಯಂತರ ಬಜೆಟ್‌ ಮಂಡಿಸಲಾಗುತ್ತದೆ.

ಲೇಖಾನುದಾನ ಅಂದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳ ಅವಧಿಗೆ ಸರ್ಕಾರಿ ಖರ್ಚುವೆಚ್ಚ ಹಾಗೂ ನೌಕರರ ಸಂಬಳ ಪಾವತಿಗೆ ಬೇಕಾದ ಹಣವನ್ನು ಬೊಕ್ಕಸದಿಂದ ಖರ್ಚು ಮಾಡಲು ಶಾಸನಸಭೆಯಿಂದ ಪಡೆಯುವ ಅನುಮತಿ. ಲೇಖಾನುದಾನವು ಸಂಕ್ಷಿಪ್ತ ಹಣಕಾಸು ದಾಖಲೆಯಾಗಿದ್ದು, ಅದರಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅಂಕಿಅಂಶಗಳಷ್ಟೇ ಇರುತ್ತವೆ. ಅದರಲ್ಲಿ ತೆರಿಗೆ ದರಗಳನ್ನು ಬದಲಿಸಲು ಅಥವಾ ಹೊಸ ಯೋಜನೆಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಅಗತ್ಯಬಿದ್ದರೆ ಲೇಖಾನುದಾನವನ್ನು ಇನ್ನೆರಡು ತಿಂಗಳು ವಿಸ್ತರಿಸಬಹುದು.

ಆದರೆ, ಲೇಖಾನುದಾನದ ಬದಲು ಮಧ್ಯಂತರ ಬಜೆಟ್‌ ಮಂಡಿಸುವ ಪರಿಪಾಠ ಇತ್ತೀಚಿನ ವರ್ಷಗಳಲ್ಲಿದೆ. ಮಧ್ಯಂತರ ಬಜೆಟ್‌ ಅನ್ನು ಹಣಕಾಸು ವರ್ಷದ ಆರಂಭದಿಂದ ಅಂದರೆ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ನಾಲ್ಕು ತಿಂಗಳ ಅವಧಿಗೆ ಮಂಡಿಸಲಾಗುತ್ತದೆ. ಇದರಲ್ಲಿ ನಾಲ್ಕು ತಿಂಗಳ ಅವಧಿಗೆ ಬೇಕಾದ ಖರ್ಚುವೆಚ್ಚಗಳಿಗೆ ಅನುಮತಿ ಪಡೆಯುವುದರ ಜೊತೆಗೆ, ಹೊಸ ಯೋಜನೆಗಳನ್ನೂ ಘೋಷಿಸಬಹುದು ಹಾಗೂ ತೆರಿಗೆ ದರಗಳನ್ನೂ ಬದಲಿಸಬಹುದು. ಮುಂದೆ ಬರುವ ಸರ್ಕಾರ ಮಂಡಿಸುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಇವುಗಳನ್ನು ಬದಲಿಸಲು ಅವಕಾಶ ಇದ್ದೇ ಇರುತ್ತದೆ. ಜೊತೆಗೆ ಮಧ್ಯಂತರ ಬಜೆಟ್‌ನಲ್ಲಿ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಲು, ಈವರೆಗೆ ಆದ ಕೆಲಸಗಳು ಹಾಗೂ ಮುಂದಿನ ಗುರಿಗಳ ಬಗ್ಗೆ ಹೇಳಿಕೊಳ್ಳುವುದಕ್ಕೂ ಅವಕಾಶವಿರುತ್ತದೆ.

Follow Us:
Download App:
  • android
  • ios