Union Budget 2024: ಸ್ವಂತ ವ್ಯವಹಾರ ಆರಂಭಿಸೋರಿಗೆ ಸಿಗಲಿದೆ 20 ಲಕ್ಷ; ಬಜೆಟ್‌ನಲ್ಲಿ ಮಹತ್ವದ ಘೋಷಣೆ
ಯುವ ಸಮುದಾಯಕ್ಕೆ 20 ಲಕ್ಷ ರೂ.ವರೆಗೆ ಸಾಲ ಸಿಗಲಿದೆ. ಈ ಮೊದಲು ಮುದ್ರಾ ಯೋಜನೆಯಡಿ ಗರಿಷ್ಠ 10 ಲಕ್ಷ ರೂ.ವರೆಗೆ ಮಾತ್ರ ಹಣಕಾಸಿನ ನೆರವನ್ನು ನೀಡಲಾಗುತ್ತಿತ್ತು.
ನವದೆಹಲಿ: ಸ್ವಂತ ವ್ಯವಹಾರ ಆರಂಭಿಸುವ ಕನಸು ಕಂಡಿದ್ದವರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಹಣಕಾಸಿನ ಸಹಾಯದ (Loan) ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಮುದ್ರಾ ಯೋಜನೆಯಡಿ (Pradhan Mantri Mudra Yojana) ನೀಡಲಾಗುತ್ತಿದ್ದ ಮೊತ್ತವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಸ್ವಂತ ಉದ್ಯೋಗ ಅಥವಾ ವ್ಯವಹಾರ ಆರಂಭಕ್ಕೆ ಮೋದಿ ಸರ್ಕಾರ (Narendra Modi Government) ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಲದ ಮೊತ್ತದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಯುವ ಸಮುದಾಯಕ್ಕೆ 20 ಲಕ್ಷ ರೂ.ವರೆಗೆ ಸಾಲ ಸಿಗಲಿದೆ. ಈ ಮೊದಲು ಮುದ್ರಾ ಯೋಜನೆಯಡಿ ಗರಿಷ್ಠ 10 ಲಕ್ಷ ರೂ.ವರೆಗೆ ಮಾತ್ರ ಹಣಕಾಸಿನ ನೆರವನ್ನು ನೀಡಲಾಗುತ್ತಿತ್ತು.
10 ರಿಂದ 20 ಲಕ್ಷಕ್ಕೆ ಏರಿಕೆ
2015ರಲ್ಲಿ ಕೇಂದ್ರ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದಿತ್ತು. ಕಳೆದ 9 ವರ್ಷಗಳಲ್ಲಿ 40 ಕೋಟಿಗೂ ಅಧಿಕ ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. 2015ರಲ್ಲಿ ಆರಂಭವಾದ ಮುದ್ರಾ ಯೋಜನೆಯಡಿ ಹೊಸ ಕೆಲಸ ಆರಂಭಿಸೋರಿಗೆ ಅಥವಾ ವ್ಯವಹಾರ ವಿಸ್ತರಣೆಗಾಗಿ 50 ಸಾವಿರದಿಂದ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಇದೀಗ ಗರಿಷ್ಠ ಮೊತ್ತ 20 ಲಕ್ಷ ರೂ.ವರೆಗೆ ಏರಿಕೆ ಮಾಡಲಾಗಿದೆ.
Union Budget 2024 ಸರ್ಕಾರದಿಂದ ಮೊದಲ ತಿಂಗಳ ವೇತನ ಸೇರಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಘೋಷಣೆ!
ಮುದ್ರಾ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಸ್ಥರು ವ್ಯವಹಾರ ಆರಂಭಕ್ಕೆ ಅಥವಾ ವಿಸ್ತರಣೆಗಾಗಿ ಯಾವುದೇ ಗ್ಯಾರಂಟಿ ಇಲ್ಲದೇ ಸಾಲದ ನೆರವು ಪಡೆಯಬಹುದಾಗಿದೆ. ಈ ಸಾಲದ ನೆರವನ್ನು ಯಾವುದೇ ಬ್ಯಾಂಕ್ ಅಥವಾ ಮೈಕ್ರೋಫೈನಾನ್ಸ್ ಕಂಪನಿ ಅಥವಾ ಎನ್‌ಬಿಎಫ್‌ಸಿ ಮುಖೇನ ಪಡೆಯಬಹುದಾಗಿದೆ. ಎಲ್ಲಾ ಭಾರತೀಯರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ.
ಮೂರು ಶ್ರೇಣಿಗಳಲ್ಲಿ ಮುದ್ರಾ ಸಾಲ ವಿತರಣೆ
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲದ ನೆರವನ್ನು ಮೂರು ಶ್ರೇಣಿಗಳಲ್ಲಿ ಒದಗಿಸಲಾಗುತ್ತದೆ. ಮೊದಲ ಶ್ರೇಣಿಯನ್ನು ಶಿಶು ಸಾಲ ಎಂದು ಕರೆಯಲಾಗುತ್ತದೆ. ಈ ಶ್ರೇಣಿಯಲ್ಲಿ ಯಾವುದೇ ಗ್ಯಾರಂಟಿ ಪಡೆಯದೇ 50,000 ರೂ,ವರೆಗೆ ಸಾಲ ನೀಡಲಾಗುತ್ತದೆ. ಎರಡನೇ ಶ್ರೇಣಿ ಕಿಶೋರದಲ್ಲಿ 50,000 ರೂ.ಗಳಿಂದ 5 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಮೂರನೇ ತರುಣ ಶ್ರೇಣಿಯಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ಕೊಡಲಾಗುತ್ತಿತ್ತು. ಇದೀಗ ತರುಣ ಶ್ರೇಣಿ ಪ್ರಮಾಣ 5 ರಿಂದ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.