ಕ್ಯಾಪಿಟಲ್‌ ಗೇನ್‌ ತೆರಿಗೆ ಹೆಚ್ಚಳ ಘೋಷಣೆ ಹೊರಬೀಳುತ್ತಿದ್ದಂತೆ 1000 ಅಂಕಗಳವರೆಗೂ ಕುಸಿತ ಕಂಡ ಷೇರು ಸೂಚ್ಯಂಕ ಸೆನ್ಸೆಕ್ಸ್‌, ಬೇರೆ ಘೋಷಣೆಗಳ ಬಳಿಕ ಚೇತರಿಸಿಕೊಂಡಿದೆ. ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್ ಹೆಚ್ಚಳದಿಂದಾಗಿ ಹೂಡಿಕೆದಾರರು ಚಿನ್ನ ಹಾಗೂ ರಿಯಲ್‌ ಎಸ್ಟೇಟ್‌ನಂತಹ ಆಸ್ತಿಗಳತ್ತ ಆಕರ್ಷಿತರಾಗುವ ಸಾಧ್ಯತೆ ಇದೆ. 

ಹೂಡಿಕೆದಾರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಏರಿಸಿ, ಬಿಸಿ ಮುಟ್ಟಿಸಿದ್ದಾರೆ. ಈ ಕ್ರಮ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದೆ. ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಶೇ.15ರಿಂದ ಶೇ.20ಕ್ಕೆ, ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಲಾಗಿದೆ. ಇದರ ನಡುವೆ, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಕ್ಯಾಪಿಟಲ್‌ ಗೇನ್‌ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರು.ನಿಂದ 1.25 ಲಕ್ಷ ರು.ವರೆಗೂ ಏರಿಕೆ ಮಾಡಲಾಗಿದೆ. 

ಕ್ಯಾಪಿಟಲ್‌ ಗೇನ್‌ ತೆರಿಗೆ ಹೆಚ್ಚಳ ಘೋಷಣೆ ಹೊರಬೀಳುತ್ತಿದ್ದಂತೆ 1000 ಅಂಕಗಳವರೆಗೂ ಕುಸಿತ ಕಂಡ ಷೇರು ಸೂಚ್ಯಂಕ ಸೆನ್ಸೆಕ್ಸ್‌, ಬೇರೆ ಘೋಷಣೆಗಳ ಬಳಿಕ ಚೇತರಿಸಿಕೊಂಡಿದೆ. ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್ ಹೆಚ್ಚಳದಿಂದಾಗಿ ಹೂಡಿಕೆದಾರರು ಚಿನ್ನ ಹಾಗೂ ರಿಯಲ್‌ ಎಸ್ಟೇಟ್‌ನಂತಹ ಆಸ್ತಿಗಳತ್ತ ಆಕರ್ಷಿತರಾಗುವ ಸಾಧ್ಯತೆ ಇದೆ ಎಂದು ಷೇರು ಹೂಡಿಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಸಮಾಜದ ಪ್ರತಿ ವರ್ಗದ ಜನರಿಗೆ ಶಕ್ತಿ ನೀಡುವ ಬಜೆಟ್, ದೇಶದ ಜನತೆಗೆ ಮೋದಿ ಅಭಿನಂದನೆ!

ನಿರ್ದಿಷ್ಟ ಹಣಕಾಸು ಸ್ವತ್ತುಗಳ ಮೇಲಿನ ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ದರವನ್ನು ಶೇ.15ರಿಂದ ಶೇ.20ಕ್ಕೆ ಹೆಚ್ಚಳ ಮಾಡಲಾಗಿದೆ. ಹಣಕಾಸೇತರ ಸ್ವತ್ತುಗಳಿಗೆ ಸೂಕ್ತ ದರ ಅನ್ವಯವಾಗಲಿದೆ. ಎಲ್ಲ ಹಣಕಾಸು ಹಾಗೂ ಹಣಕಾಸೇತರ ಸ್ವತ್ತುಗಳ ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಏರಿಕೆ ಮಾಡಲಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ನಿರ್ಮಲಾ ತಿಳಿಸಿದ್ದಾರೆ.

ಯಾವುದು ಅಲ್ಪಾವಧಿ? ಯಾವುದು ದೀರ್ಘಾವಧಿ?: ನೋಂದಾಯಿತ ಹಣಕಾಸು ಸ್ವತ್ತುಗಳನ್ನು ಒಂದು ವರ್ಷಕ್ಕಿಂತ ಹೆಚ್ಚು, ನೋಂದಾಯಿತವಲ್ಲದ ಹಣಕಾಸು ಸ್ವತ್ತುಗಳು ಹಾಗೂ ಎಲ್ಲ ಹಣಕಾಸೇತರ ಸ್ವತ್ತುಗಳನ್ನು ಕನಿಷ್ಠ 2 ವರ್ಷಗಳ ಕಾಲ ಹೊಂದಿದ್ದರೆ ಅಂತಹ ಸ್ವತ್ತುಗಳನ್ನು ದೀರ್ಘಾವಧಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಷೇರುಗಳನ್ನು 12 ತಿಂಗಳ ಬಳಿಕ ಮಾರಾಟ ಮಾಡಿದರೆ ಅದಕ್ಕೆ ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ಪಾವತಿಸಬೇಕಾಗುತ್ತದೆ.

ಬಜೆಟ್‌ನಲ್ಲಿ ತೆರಿಗೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಸಂಪೂರ್ಣ ಸ್ಪಷ್ಟ ಉತ್ತರ

ನೋಂದಾಯಿತ ಹಣಕಾಸು ಸ್ವತ್ತುಗಳನ್ನು ಒಂದು ವರ್ಷದೊಳಗೆ, ನೋಂದಾಯಿತವಲ್ಲದ ಹಣಕಾಸು ಸ್ವತ್ತುಗಳು ಹಾಗೂ ಎಲ್ಲ ಹಣಕಾಸೇತರ ಸ್ವತ್ತುಗಳನ್ನು 2 ವರ್ಷದೊಳಗೆ ಮಾರಾಟ ಮಾಡಿದರೆ ಅಂತಹ ಸ್ವತ್ತುಗಳನ್ನು ಅಲ್ಪಾವಧಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಷೇರುಗಳನ್ನು 12 ತಿಂಗಳ ಒಳಗೆ ಮಾರಿದರೆ ಅದಕ್ಕೆ ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ಕಟ್ಟಬೇಕಾಗುತ್ತದೆ.