Budget 2021: ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್: ನಾಳೆಯಿಂದಲೇ ಜಾರಿ!
ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್| ಸೆಸ್ ಹೆಚ್ಚಿಸಿದರೂ ವಾಹನ ಸವಾರರಿಗಿಲ್ಲ ಬೀತಿ| ಚಿನ್ನ, ಮದ್ಯ, ಅಡುಗೆ ಎಣ್ಣೆ, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಬಟಾಣಿ ಮೇಲೆಯೂ ಕೃಷಿ ಸೆಸ್
ನವದೆಹಲಿ(ಫೆ.01): 2021ರ ಬಜೆಟ್ ಅನೇಕ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಆದಾಯ ತೆರಿಗೆಯಲ್ಲಿ ಕೊಂಚ ವಿನಾಯಿತಿ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡವರಿಗೆ ಬಜೆಟ್ ನಿರಾಸೆಗೀಡು ಮಾಡಿದೆ. ಹೀಗಿರುವಾಗಲೇ ಅತ್ತ ಪೆಟ್ರೋಲ್ ಮತ್ತು ಡೀಸೆಲ್ ಮೇಲೂ ಕೃಷಿ ಸೆಸ್ ವಿಧಿಸಲಾಗಿದ್ದು, ನಾಳೆಯಿಂದಲೇ ಇದು ಜಾರಿಯಾಗಲಿದೆ. ಹಾಗಾದ್ರೆ ಮತ್ತೆ ಪೆಟ್ರೋಲ್, ಡೀಸೆಲ್ ದರವೂ ಏರುತ್ತಾ ಎಂಬ ಪ್ರಶ್ನೆ ಹಲವರಲ್ಲಿದೆ. ಆದರೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.
"
ಹೌದು ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಗ್ರಾಹಕರಿಗೆ ಈ ಸೆಸ್‌ನಿಂದ ಹೆಚ್ಚುವರಿ ಹೊರೆಯಾಗುವುದಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆ ಮಾಡಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಹಣಕಾಸು ಸಚಿವರ ಈ ಮಾತು ವಾಹನ ಸವಾರರನ್ನು ಕೊಂಚ ನಿರಾಳರನ್ನಾಗಿಸಿದೆ.
ಎಷ್ಟು ಸೆಸ್?
ಪೆಟ್ರೋಲ್ ಮೇಲೆ 2.5 ರೂಪಾಯಿ ಕೃಷಿ ಸೆಸ್ ವಿಧಿಸಿದ್ದರೆ, ಡೀಸೆಲ್ ಮೇಲೆ 4 ರೂಪಾಯಿ ಕೃಷಿ ಸೆಸ್ ವಿಧಿಸಲು ತೀರ್ಮಾನಿಸಿದೆ. ಇದು ನಾಳೆಯಿಂದಲೇ ಜಾರಿಯಾಗಲಿದೆ.
ಇಂಧನ ಹೊರತಾಗಿ, ಚಿನ್ನ, ಬೆಳ್ಳಿ, ಚಿನ್ನದ ಗಟ್ಟಿ ಮೇಲೆ ಕೂಡ ಶೇ 2.5ರಷ್ಟು ಕೃಷಿ ಸೆಸ್ ಹೇರಲಾಗಿದೆ. ಮದ್ಯದ ಮೇಲೆ ಶೇಕಡಾ 100ರಷ್ಟು ಕೃಷಿ ಸೆಸ್ ಹಾಕಲಾಗಿದೆ.
ಕಚ್ಚಾ ಪಾಮ್‌ಆಯಿಲ್ ಮೇಲೆ ಶೇ 17.5ರಷ್ಟು ಕೃಷಿ ಸೆಸ್ ಹಾಗೂ ಸೋಯಾಬಿನ್ ಸೂರ್ಯಕಾಂತಿ ಎಣ್ಣೆ ಮೇಲೂ ಸೆಸ್ ಹಾಕಲಾಗಿದೆ. ಸೇಬು ಹಣ್ಣಿನ ಮೇಲೆ ಶೇಕಡಾ 35ರಷ್ಟು ಕೃಷಿ ಸೆಸ್. ಕಲ್ಲಿದ್ದಲು, ಲಿಗ್ನೈಟ್ ಮತ್ತು ಪೀಟ್ ಮೇಲೆ ಶೇ 1.5ರಷ್ಟು ಸೆಸ್. ಯೂರಿಯಾ ಸೇರಿ ಕೆಲ ರಸಗೊಬ್ಬರಗಳ ಮೇಲೂ ಸೆಸ್ ವಿಧಿಸಲಾಗಿದೆ.
ಬಟಾಣಿ ಮೇಲೆ ಶೇ 40ರಷ್ಟು, ಕಾಬುಲ್ ಕಡಲೆಯ ಮೇಲೆ ಶೇ 40ರಷ್ಟು, ಕಡಲೇ ಬೇಳೆ ಮೇಲೆ ಶೇ 50ರಷ್ಟು, ಬೇಳೆಕಾಳುಗಳ ಮೇಲೆ ಶೇ 20ರಷ್ಟು, ಹತ್ತಿಯ ಮೇಲೆ ಶೇ 5ರಷ್ಟು ಸೆಸ್ ವಿಧಿಸಲಾಗಿದೆ.