ನವದೆಹಲಿ[ಜ.05]: ದೀರ್ಘಕಾಲದಿಂದ ಬಾಕಿ ಉಳಿದಿರುವ ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸುವ ನಿಟ್ಟಿನಿಂದ ಕೇಂದ್ರ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ವ್ಯಾಜ್ಯ ಇತ್ಯರ್ಥ ಯೋಜನೆಯೊಂದನ್ನು ಪ್ರಕಟಿಸುವ ಸಾಧ್ಯತೆ ಇದೆ. ಅದರಂತೆ ತೆರಿಗೆ ಇಲಾಖೆ ಬೇಡಿಕೆ ಇಟ್ಟಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ಪಾವತಿಸಿ ಕಂಪನಿಗಳು ತಮ್ಮ ವಿರುದ್ಧದ ತೆರಿಗೆ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ದೇಶದ ನ್ಯಾಯಾಲಯ ಹಾಗೂ ಅರೆನ್ಯಾಯಿಕ ಸಂಸ್ಥೆಗಳಲ್ಲಿ ಅಂದಾಜು 5 ಲಕ್ಷ ತೆರಿಗೆ ವ್ಯಾಜ್ಯ ಪ್ರಕರಣಗಳು ಬಾಕಿ ಉಳಿದಿವೆ. ಈ ಎಲ್ಲ ಪ್ರಕರಣಗಳಲ್ಲಿನ ಒಟ್ಟು ಮೊತ್ತ 7​ರಿಂದ 8 ಲಕ್ಷ ಕೋಟಿ ರು. ಆಗಿದೆ. ತೆರಿಗೆ ವ್ಯಾಜ್ಯ ಪ್ರಕರಣಗಳು ಇತ್ಯರ್ಥಗೊಂಡರೆ, ವಿತ್ತೀಯ ಕೊರತೆಯನ್ನು ನೀಗಿಸಲು ಸರ್ಕಾರಕ್ಕೆ ಸಹಾಯವಾಗಲಿದೆ. ಆದರೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ದೀರ್ಘಕಾಲ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಪ್ರಕರಣಗಳಲ್ಲಿ ತೆರಿಗೆ ಇಲಾಖೆ ಅಂತಿಮವಾಗಿ ಗೆಲುವು ಸಾಧಿಸಬಹುದು. ಆದರೆ, ಈ ಹಣ ಯಾವಾಗ ಸರ್ಕಾರದ ಕೈಸೇರಲಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ತೆರಿಗೆ ವ್ಯಾಜ್ಯ ಇತ್ಯರ್ಥಕ್ಕೆ ಸರ್ಕಾರ ಯೋಜನೆ ಪ್ರಕಟಿಸುವ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.

ಅದರಂತೆ, ಸರ್ಕಾರ ತೆರಿಗೆ ಬೇಡಿಕೆಯ ಒಂದು ಭಾಗವನ್ನು ದಂಡ ಹಾಗೂ ಬಡ್ಡಿ ಸಹಿತ ಪಾವತಿ ಮಾಡುವಂತೆ ಕಂಪನಿಗಳಿಗೆ ಸೂಚಿಸುವ ಸಾಧ್ಯತೆ ಇದೆ ಅಥವಾ ಒಟ್ಟಾರೆ ತೆರಿಗೆ ಬೇಡಿಕೆಯಲ್ಲಿ ಶೇ.40ರಿಂದ 50ರಷ್ಟನ್ನು ಪಾವತಿಸುವಂತೆ ಸೂಚಿಸಬಹುದು. ತೆರಿಗೆ ದರ ದಾವೆ ಮೊತ್ತಕ್ಕೆ ತಕ್ಕಂತೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವ್ಯತ್ಯಾಸವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ರಚಿಸಲಾದ ಕಾರ್ಯಪಡೆಯೊಂದು ಕಳೆದ ಜುಲೈನಲ್ಲಿ ದಾವೆ ಇತ್ಯರ್ಥ ಯೋಜನೆಯನ್ನು ಶಿಫಾರಸು ಮಾಡಿತ್ತು. ಇದರ ಜೊತೆಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿತ್ತು. ಅದರಂತೆ ಕಂಪನಿಗಳು ತೆರಿಗೆ ಕಟ್ಟಬೇಕಿರುವ ಹಣದ ಪೈಕಿ ಶೇ.10ರಿಂದ 20ರಷ್ಟನ್ನು ಪಾವತಿಸಿ ತಮ್ಮ ವಿರುದ್ಧದ ತೆರಿಗೆ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಶಿಫಾರಸು ಮಾಡಲಾಗಿದೆ.