ಕೇಂದ್ರ ಸರ್ಕಾರವು ಚುನಾವಣೆಗೂ ಮೊದಲು ಮಧ್ಯಂತರ ಬಜೆಟ್ ಮಂಡಿಸಿದ್ದು, ಎಲ್ಲಾ ವರ್ಗದ ಜನರಿಗೆ ಖುಷಿ ನೀಡಿದೆ. ಅದರಲ್ಲೂ ವಿಶೇಷವಾಗಿ 5 ಲಕ್ಷದವರೆಗಿನ ಆದಾಯ ಗಳಿಸುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಬಹುತೇಕರಿಗೆ ಖುಷಿ ನೀಡಿದೆ. ಹೀಗಿರುವಾಗ 5 ಲಕ್ಷಕ್ಕಿಂತ ಅಧಿಕ ಇರುವವರು ಆದಾಯ ತೆರಿಗೆ ಉಳಿಸುವುದು ಸಾಧ್ಯವೇ? ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ಇಲ್ಲಿದೆ ಈ  ಉತ್ತರ...

5 ಲಕ್ಷ ರು.ಗಿಂತ ಹೆಚ್ಚು ಆದಾಯ ಇದ್ದರೂ ತೆರಿಗೆ ಉಳಿಸಬಹುದು

5 ಲಕ್ಷ ರು.ವರೆಗೆ ಆದಾಯವಿರುವವರು 87ಎ ಅಡಿ ವಿನಾಯ್ತಿ ಪಡೆಯಬಹುದು. ಹೀಗಾಗಿ ಅವರು ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹಾಗೆಯೇ 6.5 ಲಕ್ಷ ರು. ಆದಾಯವಿರುವವರು 1.5 ಲಕ್ಷ ರು.ಗೆ 80ಸಿ ಅಡಿ ವಿನಾಯ್ತಿ ಪಡೆಯಬಹುದು. ಹಾಗಾಗಿ ಅವರೂ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹಾಗೆಯೇ, 6.5 ಲಕ್ಷ ರು.ಗಿಂತ ಹೆಚ್ಚು ಆದಾಯವಿರುವವರೂ ಹೇಗೆ ತೆರಿಗೆ ಉಳಿಸಬೇಕು ಎಂಬುದನ್ನು ಬಜೆಟ್‌ನಲ್ಲಿ ಸ್ವತಃ ವಿತ್ತ ಮಂತ್ರಿ ಪೀಯೂಷ್ ಗೋಯಲ್ ಅವರೇ ತೋರಿಸಿಕೊಟ್ಟಿದ್ದಾರೆ.

2 ಲಕ್ಷ ರು.ವರೆಗೆ ಗೃಹ ಸಾಲದ ಮೇಲೆ ಬಡ್ಡಿ ಪಾವತಿಸಿದ್ದರೆ, ಶಿಕ್ಷಣ ಸಾಲದ ಮೇಲೆ ಬಡ್ಡಿ ಪಾವತಿಸಿದ್ದರೆ, ನ್ಯಾಷನಲ್ ಪೆನ್ಷನ್ ಸ್ಕೀಮ್ (ಎನ್ ಪಿಎಸ್)ನಲ್ಲಿ ಹೂಡಿಕೆ ಮಾಡಿದ್ದರೆ, ಆರೋಗ್ಯ ವಿಮೆ ಪ್ರೀಮಿಯಂ ಪಾವತಿಸಿದ್ದರೆ, ಹಿರಿಯ ನಾಗರಿಕರ ಚಿಕಿತ್ಸೆಗೆ ವೆಚ್ಚ ಮಾಡಿದ್ದರೆ ಮತ್ತು ಇಂತಹ ಇತರೆ ಖರ್ಚುಗಳನ್ನು ಮಾಡಿದ್ದರೆ ಅದನ್ನೂ ನಮ್ಮ ಆದಾಯದಲ್ಲಿ ಕಳೆಯಬಹುದು. ಆಗ ಇನ್ನಷ್ಟು ತೆರಿಗೆ ಉಳಿಸಲು ಸಾಧ್ಯವಿದೆ ಎಂದು ಗೋಯಲ್ ಹೇಳಿದ್ದಾರೆ.

10 ಲಕ್ಷ ಆದಾಯಕ್ಕೂ ತೆರಿಗೆ ಉಳಿತಾಯ ಹೇಗೆ?

ಸ್ಟಾಂಡರ್ಡ್‌ ಡಿಡಕ್ಷನ್‌ 50 ಸಾವಿರ ರು.ಗೇರಿಕೆ

ನೌಕರರ ಆದಾಯ ತೆರಿಗೆ ವ್ಯಾಪ್ತಿಗೆ ಬರುವ ಆದಾಯದಲ್ಲಿ ಕಡಿತ ಮಾಡುವ ಸ್ಟಾಂಡರ್ಡ್‌ ಡಿಡಕ್ಷನ್‌ ಅನ್ನು 40 ಸಾವಿರ ರು.ದಿಂದ 50 ಸಾವಿರ ರು.ಗೆ ಬಜೆಟ್‌ನಲ್ಲಿ ಏರಿಕೆ ಮಾಡಲಾಗಿದೆ.

ಕೆಲ ವರ್ಷಗಳ ಹಿಂದೆ ನಿಂತುಹೋಗಿದ್ದ ಸ್ಟಾಂಡರ್ಡ್‌ ಡಿಡಕ್ಷನ್‌ ಅನ್ನು ಕಳೆದ ಬಜೆಟ್‌ನಲ್ಲಿ 40 ಸಾವಿರ ರು. ನಿಗದಿಪಡಿಸಿ ಪರಿಚಯಿಸಲಾಗಿತ್ತು. ಅದನ್ನೀಗ 50 ಸಾವಿರ ರು.ಗೆ ಏರಿಸಲಾಗಿದೆ. ನೌಕರನಿಗೆ ತಗಲುವ ಸಾರಿಗೆ ವೆಚ್ಚ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯನ್ನು 50 ಸಾವಿರ ರು.ಗೆ ನಿಗದಿಪಡಿಸಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಇದಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಪರಿಗಣಿಸಲಾಗುತ್ತದೆ.

ಗರಿಷ್ಠ ತೆರಿಗೆ ಸ್ಲಾಬ್‌ನಲ್ಲಿ ಬರುವವರಿಗೆ ಈ ಬಾರಿಯ 10 ಸಾವಿರ ರು. ಹೆಚ್ಚಳದಿಂದ ತೆರಿಗೆಯಲ್ಲಿ 3210 ರು. ಉಳಿತಾಯವಾಗುತ್ತದೆ.