ವಿಶ್ವಸಂಸ್ಥೆ[ಅ.09]: ಚೀನಾ-ಅಮೆರಿಕ ನಡುವಿನ ವ್ಯಾಪಾರ ಬಿಕ್ಕಟ್ಟು, ಭಾರತದ ಆರ್ಥಿಕ ಬೆಳವಣಿಗೆಯ ಕುಸಿತ ಸೇರಿದಂತೆ ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟು ಎದುರಾದ ಬಗ್ಗೆ ಸರಣಿ ವರದಿಗಳ ಬೆನ್ನಲ್ಲೇ, ವಿಶ್ವದ ಶಾಂತಿಗೆ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ಅಂತಾರಾಷ್ಟ್ರೀಯ ಸಂಸ್ಥೆಯಾದ ವಿಶ್ವಸಂಸ್ಥೆಯೂ ಆರ್ಥಿಕ ಕೊರತೆ ಎದುರಿಸುತ್ತಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ವಿಶ್ವಸಂಸ್ಥೆಯಲ್ಲಿ 230 ಮಿಲಿಯನ್‌ ಡಾಲರ್‌(ಸುಮಾರು 1,650 ಕೋಟಿ ರು.) ಕೊರತೆ ಉಂಟಾಗಿದ್ದು, ಅಕ್ಟೋಬರ್‌ ಕೊನೇ ವಾರಾಂತ್ಯದಲ್ಲಿ ವಿಶ್ವಸಂಸ್ಥೆಯ ಖಜಾನೆಯೇ ಬರಿದಾಗಬಹುದು ಎಂದು ಸ್ವತಃ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರ್ರಸ್‌ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಕಾರಾರ‍ಯಲಯದಲ್ಲಿರುವ 37 ಸಾವಿರ ಸಿಬ್ಬಂದಿಗೆ ಗ್ಯುಟೆರ್ರಸ್‌ ಬರೆದ ಪತ್ರವು ಸುದ್ದಿ ಸಂಸ್ಥೆಯೊಂದಕ್ಕೆ ಲಭ್ಯವಾಗಿದ್ದು, ಸಿಬ್ಬಂದಿಯ ವೇತನ ಹಾಗೂ ಅವರ ವೆಚ್ಚಗಳನ್ನು ನೀಡುವ ಸಲುವಾಗಿ ಅನಗತ್ಯದ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

2019ರಲ್ಲಿ ನಮ್ಮ ಸಾಮಾನ್ಯ ಚಟುವಟಿಕೆಗಳಿಗೆ ಅಗತ್ಯವಿದ್ದ ಹಣದ ಪೈಕಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಶೇ.70ರಷ್ಟುಹಣವನ್ನು ಮಾತ್ರ ಪಾವತಿಸಿವೆ. ಇದು ಸೆಪ್ಟೆಂಬರ್‌ ಕೊನೆಗೆ 1650 ಕೋಟಿ ರು. ಕೊರತೆಗೆ ಕಾರಣವಾಗಿತ್ತು. ತಿಂಗಳ ಕೊನೆಯಾಂತ್ಯದಲ್ಲಿ ಉಳಿಕೆ ಮಾಡಲಾದ ಹಣದಲ್ಲಿ ಕೊರತೆ ಹಣವನ್ನು ನಿಭಾಯಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ತೀರಾ ಅಗತ್ಯದ ಚಟುವಟಿಕೆಗಳನ್ನು ಹೊರತುಪಡಿಸಿ ಸಿಬ್ಬಂದಿಯ ಅಧಿಕೃತ ಪ್ರವಾಸ, ಸಭೆ-ಸಮಾರಂಭ ಮತ್ತು ಸುದ್ದಿಗೋಷ್ಠಿಗಳ ಆಯೋಜನೆಗಳನ್ನು ಏರ್ಪಡಿಸಬಾರದು.

ಈ ಮೂಲಕ ಹಣವನ್ನು ಉಳಿಸಬೇಕು. ನಮ್ಮ ಆರ್ಥಿಕತೆಯ ಆರೋಗ್ಯ ಸುಧಾರಣೆಯು ಸದಸ್ಯ ರಾಷ್ಟ್ರಗಳ ಕೈಯಲ್ಲಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರ್ರಸ್‌ ತಮ್ಮ ಪತ್ರದಲ್ಲಿ ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿಕೊಂಡಿದ್ದಾರೆ.