ಕೋಲ್ಡ್ ವಾರ್ ಹೀಟ್ ಕಡಿಮೆ?: ಚೀನಾ ವಸ್ತುಗಳ ತೆರಿಗೆ ಕಡಿತ

First Published 28, Jul 2018, 3:56 PM IST
U.S. Senate quietly votes to cut tariffs on hundreds of Chinese goods
Highlights

ಚೀನಾ ವಸ್ತುಗಳ ಮೇಲಿನ ತೆರಿಗೆ ಕಡಿತ

ಸಂಧಾನದ ಕ್ರಮಕ್ಕೆ ಮುಂದಾದ ಅಮೆರಿಕ

ಚೀನಾ-ಅಮೆರಿಕ ಶಿಥಲ ಸಮರಕ್ಕೆ ಬ್ರೇಕ್?

1,660 ವಿದೇಶಿ ವಸ್ತುಗಳ ತೆರಿಗೆ ಕಡಿತ

ಚರ್ಚೆ ಇಲ್ಲದೇ ಮಸೂದೆ ಅಂಗೀಕಾರ
 

ವಾಷಿಂಗ್ಟನ್(ಜು.28): ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಯುದ್ಧಕ್ಕೆ ಬ್ರೇಕ್ ಬೀಳುವ ಲಕ್ಷಣ ಕಾಣುತ್ತಿದೆ. ಚೀನಾ ಕುರಿತ ತನ್ನ ಹಠಮಾರಿ ಧೋರಣೆಯನ್ನು ಸಡಿಲಗೊಳಿಸಿರುವ ಅಮೆರಿಕ, ಚೀನಾ ವಸ್ತುಗಳೂ ಸೇರಿದಂತೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಿದೆ.

ನಿನ್ನೆ ಅಮೆರಿಕ ಸಂಸತ್ತಿನಲ್ಲಿ ನಡೆದ ಕಲಾಪದ ವೇಳೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸುವ ಮಸೂದೆಗೆ ಅವಿರೋಧವಾಗಿ ಅನುಮೋದನೆ ನೀಡಲಾಗಿದೆ. ವಿಚಿತ್ರವೆಂದರೆ ಸಂಸತ್ತಿನಲ್ಲಿ ಯಾವುದೇ ಚರ್ಚೆ ಕೂಡ ನಡೆಸದೇ ಈ ಮಸೂದೆಗೆ ಅನುಮೋದನೆ ನೀಡಲಾಗಿದೆ. 

ಟೋಸ್ಟರ್, ಕೆಮಿಕಲ್ಸ್ ಸೇರಿದಂತೆ ಸುಮಾರು 1,660 ವಿದೇಶಿ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಬಹುತೇಕ ವಸ್ತುಗಳು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂಬುದು ವಿಶೇಷ. ಪ್ರಸ್ತುತ ತೆರಿಗೆ ಕಡಿತವಾಗಿರುವ 1,660 ವಸ್ತುಗಳ ಪೈಕಿ ಸುಮಾರು ಶೇ.50ಕ್ಕೂ ಅಧಿಕ ವಸ್ತುಗಳು ಚೀನಾ ದೇಶದ ವಸ್ತುಗಳಾಗಿವೆ.

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ವಸ್ತುಗಳ ಮೇಲೆ ಚೀನಾ ಹೆಚ್ಚುವರಿ ತೆರಿಗೆ ಹೇರಿರುವುದನ್ನು ಖಂಡಿಸಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಚೀನಾ ಸೇರಿದಂತೆ ವಿವಿಧ ದೇಶಗಳ ವಸ್ತುಗಳ ಮೇಲಿನ ತೆರಿಗೆಯನ್ನು ಟ್ರಂಪ್ ಹೆಚ್ಚಿಸಿದ್ದರು.

ಇನ್ನು ಅಮೆರಿಕ ಸಂಸತ್ತಿನ ನಡೆಯನ್ನು ಸಂಧಾನದ ಕ್ರಮ ಎಂದು ಅಮೆರಿಕ ರಾಜಕೀಯ ತಜ್ಞರು ಬಣ್ಣಿಸಿದ್ದು, ಮೊದಲ ಹೆಜ್ಜೆಯಾಗಿ ಅಮೆರಿಕ ತನ್ನ ತೆರಿಗೆಯನ್ನು ಕಡಿತಗೊಳಿಸಿದೆ. ಈಗ ಇತರೆ ದೇಶಗಳೂ ಕೂಡ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.

loader