ದೇಶದಲ್ಲಿ ನಕಲಿ ನೋಟು ಪ್ರಮಾಣ ಭಾರೀ ಏರಿಕೆ!
* 500ರದ್ದು ಶೇ.101, .2000 ಶೇ.54 ಹೆಚ್ಚಳ
* ದೇಶದಲ್ಲಿ ನಕಲಿ ನೋಟುಗಳ ಪ್ರಮಾಣದಲ್ಲಿ ಭಾರೀ ಏರಿಕೆ
* ಸ್ವತಃ ಆರ್‌ಬಿಐ ವರದಿ ಪ್ರತಿಪಕ್ಷಗಳಿಂದ ಟೀಕೆ
ನವದೆಹಲಿ(ಮೇ.30): ಹಿಂದಿನ ವರ್ಷಕ್ಕೆ ಹೋಲಿಸಿದರೆ 2021-22ರಲ್ಲಿ ದೇಶದಲ್ಲಿ ನಕಲಿ ನೋಟುಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ ಎಂದು ಭಾರತೀಯ ರಿಸವ್‌ರ್ ಬ್ಯಾಂಕ್‌ನ ವರದಿ ಹೇಳಿದೆ. ಇದು ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೊಳಿಸಿದ ಅಪನದೀಕರಣವನ್ನು ಬಹುವಾಗಿ ವಿರೋಧಿಸಿದ್ದ ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮುಗಿಬೀಳಲು ಹೊಸ ಅಸ್ತ್ರ ಕಲ್ಪಿಸಿದೆ.
ಆರ್‌ಬಿಐನ ಹೊಸ ವರದಿ ಅನ್ವಯ, 2020-21ಕ್ಕೆ ಹೋಲಿಸಿದರೆ 2021-22ರಲ್ಲಿ ಎಲ್ಲಾ ಮಾದರಿಯ ನಕಲಿ ನೋಟುಗಳ ಬಳಕೆ ಭಾರೀ ಹೆಚ್ಚಾಗಿದೆ. ಅದರಲ್ಲೂ 500 ರು. ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ ಶೇ.101.9 ಮತ್ತು 2000 ರು. ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ.54.16ರಷ್ಟುಏರಿಕೆಯಾಗಿದೆ.
2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಅಪನಗದೀಕರಣದ ಘೋಷಿಸಿದಾಗ, ಕಪ್ಪುಹಣ ಮತ್ತು ನಕಲಿ ನೋಟುಗಳ ನಿರ್ಮೂಲನೆಯೇ ಮುಖ್ಯ ಉದ್ದೇಶ ಎಂದು ಹೇಳಿತ್ತು. ಆದರೆ ಅಪನಗದೀಕರಣ 5 ವರ್ಷದ ಬಳಿಕವೂ ಸಮಸ್ಯೆ ಕಡಿಮೆಯಾಗುವುದರ ಬದಲು ದ್ವಿಗುಣವಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಅಪನಗದೀಕರಣದ ಒಂದೇ ದುರದೃಷ್ಟಕರ ಯಶಸ್ಸು ಎಂದರೆ, ಭಾರತದ ಆರ್ಥಿಕತೆಯನ್ನು ಬುಡಮೇಲು ಮಾಡಿದ್ದು’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಟಿಎಂಸಿಯ ಡೆರಿಕ್ ಒ’ಬ್ರಿಯಾನ್ ಪ್ರತಿಕ್ರಿಯಿಸಿ ‘ನಮಸ್ಕಾರ ಮಿ.ಪ್ರಧಾನಿ ಮೋದಿ. ಅಪನಗದೀಕರಣ, ನೆನಪಿದೆಯಲ್ಲವೇ? ಇಂಥ ಘೋಷಣೆ ವಿರುದ್ಧ ಮಮತಾ ತಕ್ಷಣವೇ ಏನು ಎಚ್ಚರಿಸಿದ್ದರು ಎಂದು ನೆನಪಿದೆಯಲ್ಲವೇ? ಆಗ ನೀವು ದೇಶದಲ್ಲಿನ ಎಲ್ಲಾ ನಕಲಿ ನೋಟುಗಳು ನಿರ್ಮೂಲನೆಯಾಗುತ್ತದೆ ಎಂದು ನೀವು ಹೇಗೆ ಭರವಸೆ ನೀಡಿದ್ದಿರಿ. ಆದರೆ ಇದೀಗ ಸ್ವತಃ ಆರ್‌ಬಿಐನ ವರದಿಯೇ ದೇಶದಲ್ಲಿ ನಕಲಿ ನೋಟುಗಳಲ್ಲಿ ಭಾರೀ ಏರಿಕೆಯಾಗಿದೆ ಎನ್ನುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.