ಟ್ವಿಟ್ಟರ್ ಬ್ಲೂಟಿಕ್ ಸೇವೆ ಜಾರಿ: ಟ್ವೀಟ್ ಪದಗಳ ಮಿತಿ 4000ಕ್ಕೆ ಹೆಚ್ಚಳ..!
ನಕಲಿ ಖಾತೆಗಳ ಹಾವಳಿ ನಿಯಂತ್ರಿಸಲು ಕಂಪನಿಗಳು, ಸೆಲೆಬ್ರಿಟಿಗಳು, ಸರ್ಕಾರಿ ಮುಖ್ಯಸ್ಥರು, ಪತ್ರಕರ್ತರ ನಿಜವಾದ ಖಾತೆಗಳನ್ನು ಪರಿಶೀಲಿಸಿ ಟ್ವಿಟ್ಟರ್ ಅವರಿಗೆ ಬ್ಲೂಟಿಕ್ ನೀಡುತ್ತದೆ. ಈ ಬ್ಲೂಟಿಕ್‌ನಿಂದಾಗಿ ನೈಜ ಖಾತೆ ಹಾಗೂ ನಕಲಿ ಖಾತೆ ನಡುವೆ ವ್ಯತ್ಯಾಸ ಗುರುತಿಸಲು ಸಹಾಯವಾಗುತ್ತದೆ.
ನ್ಯೂಯಾರ್ಕ್: ಭಾರಿ ವಿರೋಧದ ಹೊರತಾಗಿಯೂ ಟ್ವಿಟ್ಟರ್ (Twitter) ತನ್ನ ಚಂದಾದಾರರಿಗೆ (Subscribers) ಮಾಸಿಕ ಚಂದಾ ಆಧರಿತ ಬ್ಲೂಟಿಕ್ (Blue Tick) ಸೇವೆ ನೀಡಲು ಮುಂದಾಗಿದೆ. ಬ್ಲೂಟಿಕ್ ಪಡೆಯಲು ಇನ್ನು ತಿಂಗಳಿಗೆ ಸುಮಾರು 8 ಡಾಲರ್ (660 ರು.) ಹಾಗೂ ಐಫೋನ್ (iPhone) ಬಳಕೆದಾರರು ತಿಂಗಳಿಗೆ 11 ಡಾಲರ್ (908 ರು.) ಪಾವತಿಸಬೇಕಾಗುತ್ತದೆ. ಇದರೊಂದಿಗೆ ಈ ಚಂದಾದಾರಿಗೆ ಕಡಿಮೆ ಜಾಹೀರಾತು ವೀಕ್ಷಣೆ (Less Advertisements), ಹೆಚ್ಚು ಸಮಯದ ವಿಡಿಯೋ (Video) ಪ್ರಸಾರಕ್ಕೆ ಅವಕಾಶ ಮೊದಲಾದ ಇತರೆ ಸೌಲಭ್ಯವನ್ನೂ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ನಕಲಿ ಖಾತೆಗಳ (Fake Accounts) ಹಾವಳಿ ನಿಯಂತ್ರಿಸಲು ಕಂಪನಿಗಳು, ಸೆಲೆಬ್ರಿಟಿಗಳು, ಸರ್ಕಾರಿ ಮುಖ್ಯಸ್ಥರು, ಪತ್ರಕರ್ತರ ನಿಜವಾದ ಖಾತೆಗಳನ್ನು ಪರಿಶೀಲಿಸಿ ಟ್ವಿಟ್ಟರ್ ಅವರಿಗೆ ಬ್ಲೂಟಿಕ್ ನೀಡುತ್ತದೆ. ಈ ಬ್ಲೂಟಿಕ್‌ನಿಂದಾಗಿ ನೈಜ ಖಾತೆ ಹಾಗೂ ನಕಲಿ ಖಾತೆ ನಡುವೆ ವ್ಯತ್ಯಾಸ ಗುರುತಿಸಲು ಸಹಾಯವಾಗುತ್ತದೆ. ಆದರೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು 3.6 ಲಕ್ಷ ಕೋಟಿ ರೂ.ಗೆ ಖರೀದಿಸಿದ ಬಳಿಕ ಪರಿಶೀಲಿಸಿದ ಖಾತೆಗಳನ್ನು ಹೊಂದಿರುವವರು ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕಾಗುತ್ತದೆ ಎಂದಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಇದನ್ನು ಓದಿ: ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್ ಮಸ್ಕ್ ಘೋಷಣೆ
ಟ್ವೀಟ್ ಪದ ಮಿತಿ 280 ರಿಂದ 4000ಕ್ಕೆ ಹೆಚ್ಚಳ
ಟ್ವಿಟ್ಟರ್ ಅನ್ನು ತೆಕ್ಕೆಗೆ ಪಡೆದುಕೊಂಡ ಬಳಿಕ ಸಾಕಷ್ಟು ಬದಲಾವಣೆಗೆ ಮುಂದಾಗಿರುವ ಎಲಾನ್ ಮಸ್ಕ್, ಟ್ವೀಟ್‌ಗೆ ಇರುವ ಪದಗಳ ಮಿತಿಯನ್ನು 280 ರಿಂದ 4000ಕ್ಕೆ ಹೆಚ್ಚಿಸುವ ಬಗ್ಗೆ ಸುಳಿವು ನೀಡಿದ್ದಾರೆ. ನೆಟ್ಟಿಗರೊಬ್ಬರು ಈ ಕುರಿತ ವರದಿಗಳ ಬಗ್ಗೆ ಪ್ರಶ್ನಿಸಿದಾಗ ಹೌದು, ನಾವು ಪದಗಳ ಮಿತಿಯನ್ನು 4000ಕ್ಕೆ ಹೆಚ್ಚಿಸಲಿದ್ದೇವೆ ಎಂದು ಎಲಾನ್ ಮಸ್ಕ್ ಉತ್ತರ ನೀಡಿದ್ದಾರೆ. ಆದರೆ ಇದಕ್ಕೆ ನೆಟ್ಟಿಗರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಅಷ್ಟು ಉದ್ದ ಬರೆಯಲು ಅವಕಾಶ ನೀಡಿದರೆ ಅದು ಚುಟುಕು ಜಾಲತಾಣವಾಗದು, ಬದಲಾಗಿ ಪ್ರಬಂಧವಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ಅಷ್ಟು ಉದ್ದದ ಟ್ವೀಟ್‌ಗಳಲ್ಲಿ ಮುಖ್ಯ ಅಂಶವೇ ಹುದುಗಿ ಹೋಗಬಹುದು ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರಿ ಟೀಕೆಗಳ ಹೊರತಾಗಿಯೂ ನವೆಂಬರ್ 29ರಿಂದ ಹೊಸ ಬ್ಲೂಟಿಕ್ ನೀತಿ ಜಾರಿಗೆ ತರುವುದಾಗಿ ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಘೋಷಿಸಿದ್ದರು. ನವೆಂಬರ್ 29ರಂದು ಟ್ವಿಟ್ಟರ್ ಬ್ಲೂಟಿಕ್ ಅನ್ನು ಪರಿಶೀಲಿಸ್ಪಟ್ಟ ಖಾತೆಗಳಿಗೆ ನೀಡುವ ನೀತಿಯನ್ನು ಮರುಜಾರಿಗೊಳಿಸಲಾಗುತ್ತಿದೆ. ಈ ವೇಳೆ ಬ್ಲೂಟಿಕ್ ಪಡೆದ ಬಳಕೆದಾರರು ತಮ್ಮ ಖಾತೆಯ ಹೆಸರನ್ನು ಬದಲಾಯಿಸಿದರೆ ಹೊಸ ಹೆಸರನ್ನು ಟ್ವಿಟ್ಟರ್ ಖಚಿತಪಡಿಸುವವರೆಗೂ ಬ್ಲೂಟಿಕ್ ಕಳೆದುಕೊಳ್ಳಲಿದ್ದಾರೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಆದರೆ, ಅದು ಇಂದಿನಿಂದ ಜಾರಿಯಾಗುತ್ತಿದೆ.
ಇದನ್ನೂ ಓದಿ: Twitter ಬ್ಲೂಟಿಕ್‌ಗೆ 8 ಡಾಲರ್ ಶುಲ್ಕಕ್ಕೆ ತಡೆ..! ನಕಲಿ ಖಾತೆಗಳು ಹೆಚ್ಚಿದ ಕಾರಣ ಅಮಾನತು..?
ಅದಕ್ಕೂ ಮುನ್ನ ಟ್ವಿಟ್ಟರ್‌ನ ಬ್ಲೂಟಿಕ್ ಖಾತೆದಾರರಿಗೆ ಮುಂದಿನ ತಿಂಗಳಿಂದ ಆರಂಭವಾಗಲಿದೆ ಎಂದು ಹೇಳಲಾದ ಮಾಸಿಕ ಶುಲ್ಕ 719 ರೂ.ಗೆ ನಿಗದಿ ಆಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ನವೆಂಬರ್ ತಿಂಗಳಲ್ಲಿ ಹೇಳಿದ್ದವು. ಕೆಲವು ಮುಂದುವರಿದ ಪಾಶ್ಚಾತ್ಯ ದೇಶಗಳಲ್ಲಿ 7.99 ಡಾಲರ್ ಮಾಸಿಕ ಶುಲ್ಕವನ್ನು ಟ್ವಿಟ್ಟರ್ ಇತ್ತೀಚೆಗೆ ತನ್ನ ಬ್ಲೂಟಿಕ್ ಖಾತೆದಾರರಿಗೆ ಜಾರಿಗೆ ತಂದಿತ್ತು. ಇದರ ಬೆನ್ನಲ್ಲೇ ಭಾರತೀಯರಿಗೂ ಮುಂದಿನ ತಿಂಗಳು ಶುಲ್ಕ ಹಾಕಲಾಗುವುದು ಎಂದು ಟ್ವಿಟ್ಟರ್ ನೂತನ ಮಾಲೀಕ ಎಲಾನ್ ಮಸ್ಕ್ ಹೇಳಿದ್ದರು.