ಆಟಿಕೆ ರಫ್ತಿನಲ್ಲಿ ಶೇ.60ರಷ್ಟು ಹೆಚ್ಚಳ, ಆಮದು ಇಳಿಕೆಗೆ ಕೈಗೊಂಡ ಕ್ರಮಗಳೇ ಇದಕ್ಕೆ ಕಾರಣ: ಕೇಂದ್ರ ಸರ್ಕಾರ
ಭಾರತ ವಿದೇಶಿ ಆಟಿಕೆಗಳಿಗೆ ಉತ್ತಮ ಮಾರುಕಟ್ಟೆಯಾಗಿದೆ.ಆದರೆ, ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ಆಟಿಕೆಗಳ ಆಮದಿನಲ್ಲಿ ಇಳಿಕೆಯಾಗಿದೆ. ಹಾಗೆಯೇ ಆಟಿಕೆಗಳ ರಫ್ತಿನಲ್ಲಿ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.
ನವದೆಹಲಿ (ಆ.11): ಭಾರತದ ಆಟಕೆಗಳ ರಫ್ತಿನಲ್ಲಿ ಶೇ.60ರಷ್ಟು ಏರಿಕೆಯಾಗಿದ್ದು, 2018-19ನೇ ಸಾಲಿನಲ್ಲಿ 203.46 ಮಿಲಿಯನ್ ಡಾಲರ್ ನಿಂದ 2022-23ನೇ ಸಾಲಿನಲ್ಲಿ 325.72 ಮಿಲಿಯನ್ ಡಾಲರ್ ಗೆ ಹೆಚ್ಚಳವಾಗಿದೆ ಎಂದು ಬುಧವಾರ ಕೇಂದ್ರ ಸರ್ಕಾರ ತಿಳಿಸಿದೆ. ಇನ್ನೊಂದೆಡೆ ಆಟಿಕೆಗಳ ಆಮದಿನಲ್ಲಿ ಶೇ.57ಷ್ಟು ಇಳಿಕೆಯಾಗಿದ್ದು, 2018-19ರಲ್ಲಿ 371.69 ಮಿಲಿಯನ್ ಡಾಲರ್ ನಿಂದ 2022-23ನೇ ಸಾಲಿನಲ್ಲಿ 158.70 ಮಿಲಿಯನ್ ಡಾಲರ್ ಗೆ ಕುಸಿತ ಕಂಡಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಸಂಸತ್ತಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ. ದೇಶೀಯ ಆಟಿಕೆಗಳ ಕೈಗಾರಿಕೆಯನ್ನು ಉತ್ತೇಜಿಸಲು ಸರ್ಕಾರ ಉತ್ತೇಜನಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ. ಸರ್ಕಾರ ಕೈಗೊಂಡ ಅನೇಕ ಕ್ರಮಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಗೆ ಆಮದಾಗಿರುವ ಆಟಿಕೆಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವ ಸೋಮ್ ಪ್ರಕಾಶ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ನೊಂದು ಪ್ರಶ್ನೆಗೆ ಪ್ರತ್ಯೇಕವಾಗಿ ಉತ್ತರಿಸಿದ್ದ ಸಚಿವರು, ಸಚಿವಾಲಯದ ಅಡಿಯಲ್ಲಿ 1991 ರ ಜನವರಿಯಿಂದ 2023ರ ಜುಲೈ 31ರ ತನಕ ಒಟ್ಟು 1,10,525 ಕೈಗಾರಿಕೆಗಳು ನೋಂದಣಿಯಾಗಿವೆ ಎಂದು ತಿಳಿಸಿದ್ದಾರೆ. ಒಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ನಲ್ಲಿ (ಒಎನ್ ಡಿಸಿ) ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಘೋಯಲ್, ಒಎನ್ ಡಿಸಿ 'ಫೀಟ್ ಆನ್ ಸ್ಟ್ರೀಟ್ (ಎಫ್ ಒಎಸ್ ) ಕಾರ್ಯಕ್ರಮ ಪ್ರಾರಂಭಿಸಿದೆ. ಇದು 90 ಎಫ್ ಒಎಸ್ ಸಂಪನ್ಮೂಲಗಳನ್ನು ಒಳಗೊಂಡಿದ್ದು, ಮಾರಾಟಗಾರರನ್ನು ಗುರುತಿಸಲು ಹಾಗೂ ಅವರಿಗೆ ಇದರ ಪ್ರಯೋಜನಗಳ ಬಗ್ಗೆ ತಿಳಿಸಲು ನೆರವು ನೀಡಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಕಳೆದ 2 ವರ್ಷಗಳಲ್ಲಿ ಭಾರತದಿಂದ 1,240.6 ಮಿಲಿಯನ್ ಡಾಲರ್ ಆಯುಷ್, ಗಿಡಮೂಲಿಕೆ ಉತ್ಪನ್ನ ರಫ್ತು: ಕೇಂದ್ರ ಸರ್ಕಾರ
ಒಎನ್ ಡಿಸಿ ನೆಟ್ ವರ್ಕ್ ಭಾಗಿದಾರರಿಗೆ ಸರಕು ಹಾಗೂ ಸೇವೆಗಳನ್ನು ಸಮರ್ಪಕವಾಗಿ ವಿನಿಮಯ ಮಾಡಿಕೊಳ್ಳಲು ನೆರವು ನೀಡುತ್ತದೆ. ಹಾಗೆಯೇ ಗ್ರಾಹಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಈ ವ್ಯಾಪಾರ ನೆಟ್ ವರ್ಕ್ ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವರಿಗೆ ನೆರವು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
1,240.6 ಮಿಲಿಯನ್ ಡಾಲರ್ ಆಯುಷ್ ಉತ್ಪನ್ನ ರಫ್ತು
ಕಳೆದ ಎರಡು ವರ್ಷಗಳಲ್ಲಿ (2021-2022 ರಿಂದ 2022-23) ಭಾರತವು ಒಟ್ಟು 1,240.6 ಮಿಲಿಯನ್ ಡಾಲರ್ ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳನ್ನು ರಫ್ತು ಮಾಡಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಸಭೆಗೆ ಮಾಹಿತಿ ನೀಡಿದೆ. 2021-2022ನೇ ಸಾಲಿನಲ್ಲಿ ಒಟ್ಟು 612.1 ಮಿಲಿಯನ್ ಡಾಲರ್ ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳನ್ನು ರಫ್ತು ಮಾಡಲಾಗಿತ್ತು. ಹಾಗೆಯೇ 2022-2023ನೇ ಸಾಲಿನಲ್ಲಿ 628.25 ಮಿಲಿಯನ್ ಡಾಲರ್ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದು ಆಯುಷ್ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ರಾಜ್ಯಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.
ಕಳೆದ ಆರ್ಥಿಕ ಸಾಲಿನಲ್ಲಿ ಭಾರತದ ಸ್ಟಾರ್ಟ್ ಅಪ್ ಗಳು ಉದ್ಯೋಗಿಗಳ ವೇತನದಲ್ಲಿ ಎಷ್ಟು ಹೆಚ್ಚಳ ಮಾಡಿವೆ ಗೊತ್ತಾ?
ಭಾರತೀಯ ಎಕ್ಸಿಂ ಬ್ಯಾಂಕ್ ಒದಗಿಸಿರುವ ಮಾಹಿತಿಯನ್ನು ಉಲ್ಲೇಖಿಸಿದ ಸಚಿವರು, ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳನ್ನು ಮಾತ್ರೆಗಳು, ಪೌಡರ್, ಜೆಲ್, ತುಪ್ಪ, ಪೇಸ್ಟ್, ಪಿಲ್ ಗಳು, ಕಣ್ಣು ಹಾಗೂ ಮೂಗಿನ ಡ್ರಾಪ್ ಗಳು, ಬಾಡಿ ಲೋಷನ್ಸ್, ಚರ್ಮ ಹಾಗೂ ಕೂದಲಿನ ಸಂರಕ್ಷಣಾ ಉತ್ಪನ್ನಗಳು ಸೇರಿದಂತೆ ವಿವಿಧ ರೂಪದಲ್ಲಿ ರಫ್ತು ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ. ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳ ರಫ್ತು ಹೆಚ್ಚಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂಬ ಮಾಹಿತಿಯನ್ನು ಕೂಡ ಸಚಿವರು ನೀಡಿದ್ದಾರೆ.