ಬೆಂಗಳೂರು(ಆ.15): ದೇಶ ಇಂದು 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಆದರೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆರ್ಥಿಕ ಸ್ವಾತಂತ್ರ್ಯ ಸಿಗುವವರೆಗೂ ನಿಜವಾದ ಸ್ವಾತಂತ್ರ್ಯ ದಕ್ಕಿದಂತೆ ಆಗುವುದಿಲ್ಲ ಎಂಬ ಮಾತು ಕೂಡ ಅಷ್ಟೇ ಸತ್ಯ.

ನಮ್ಮ ಬದುಕಿನ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಹಣದ ಅವಶ್ಯಕತೆ ಇದ್ದೇ ಇದೆ. ಹಣವಿಲ್ಲದೇ ಜೀವನದ ಬಂಡಿಯನ್ನು ಎಳೆಯಲು ಸಾಧ್ಯವೇ ಇಲ್ಲ. ಅದರಂತೆ ಕೇವಲ ಹಣ ಗಳಿಸುವುದು ಮತ್ತು ಹಣ ಖರ್ಚು ಮಾಡುವುದಷ್ಟೇ ಆರ್ಥಿಕತೆ ಅಲ್ಲ. ಬದಲಿಗೆ ಭವಿಷ್ಯಕ್ಕಾಗಿ ಹಣವನ್ನು ಕೂಡಿಡುವುದು ಕೂಡ ಉತ್ತಮ ಆರ್ಥಿಕ ಲಕ್ಷಣಗಳಲ್ಲೊಂದು.

ಹಣ ಕೂಡಿಡುವ ಅನೇಕ ವಿಧಾನಗಳಿವೆ ಹೌದಾದರೂ, ಇತ್ತೀಚಿನ ಟ್ರೆಂಡ್ ಅಂದರೆ ಅದು ಮ್ಯೂಚುವಲ್ ಫಂಡ್. ಹೌದು, ಮ್ಯೂಚುವಲ್ ಫಂಡ್ ಹಣ ಉಳಿತಾಯಕ್ಕೆ ಹೇಳಿ ಮಾಡಿಸಿದ ಯೋಜನೆ. ಇಂದಿನ ಆಧುನಿಕ ಜೀವನ ಪದ್ದತಿಯಲ್ಲಿ ಹಣದ ಉಳಿತಾಯ ತುಸು ಕಷ್ಟವೇ ಹೌದಾದರೂ, ಮ್ಯೂಚುವಲ್ ಫಂಡ್ ಮೂಲಕ ಭವಿಷ್ಯದ ಯೋಜನೆಗಳ ಸಾಕಾರಕ್ಕೆ ಮುನ್ನುಡಿ ಬರೆಯಬಹುದು.

ಮಾರುಕಟ್ಟೆಯಲ್ಲಿ ತರಹೇವಾರಿ ಮ್ಯೂಚುವಲ್ ಫಂಡ್ ಯೋಜನೆಗಳು ಲಭ್ಯವಿದೆಯಾದರೂ, ನಮ್ಮ ಹಣಕಾಸು ಪರಿಸ್ಥಿತಿ, ಉತ್ತಮ ಬಡ್ಡಿ, ಒಳ್ಳೆಯ ರಿಟರ್ನ್ಸ್ ಆಧಾರದ ಮೇಲೆ ಹಲವು ಆಕರ್ಷಕ ಮತ್ತು ಉತ್ತಮ ಮ್ಯೂಚುವಲ್ ಫಂಡ್ ಮಾಹಿತಿ ನಿಮಗಾಗಿ ಕೊಡಲಾಗಿದೆ.

1. ಆಕ್ಸಿಸ್ ಬ್ಲೂಚಿಪ್ ಫಂಡ್: ಇದು ಒಂದು ಉತ್ತಮ ಮ್ಯೂಚುವಲ್ ಫಂಡ್ ಆಗಿದ್ದು, ಡೈರೆಕ್ಟ್ ಪ್ಲ್ಯಾನ್ ಮೂಲಕ ಹಣ ಹೂಡಿಕೆ ಮಾಡಲು ಉತ್ತಮ ಅವಕಾಶವಿದೆ. 30.45 ರ ದರದಲ್ಲಿ ಯೂನಿಟ್ ದರ ಇದ್ದು, ತಿಂಗಳಾವಾರು ಬಡ್ಡಿ ಇದರಲ್ಲಿ ಸೇರಿಸಲಾಗುತ್ತದೆ.

2. ಆಕ್ಸಿಸ್ ಮಿಡ್ ಕ್ರಾಫ್ಟ್ ಫಂಡ್: ಹೂಡಿಕೆ ಮಾಡಲು ಇದು ಕೂಡ ಉತ್ತಮ ಮ್ಯೂಚುವಲ್ ಫಂಡ್ ಯೋಜನೆಯಾಗಿದ್ದು, 39.32 ಯೂನಿಟ್ ದರದೊಂದಿಗೆ ತಿಂಗಳಾವಾರು ಬಡ್ಡಿಯ ಲಾಭ ಕೂಡ ಸಿಗಲಿದೆ.

3. ಹೆಚ್‌ಡಿಎಫ್ ಸಿ ಸ್ಮಾಲ್ ಕ್ಯಾಪ್ ಫಂಡ್: ಡೈರೆಕ್ಟ್ ಪ್ಲ್ಯಾನ್ ಸಹಾಯದೊಂದಿಗೆ 47.46 ಯೂನಿಟ್ ದರದ ಜೊತೆಗೆ ತಿಂಗಳಾಚಾರು ಉತ್ತಮ ಹಾಗೂ ಆಕರ್ಷಕ ಬಡ್ಡಿ ದರವನ್ನು ಇಲ್ಲಿ ಕೊಡಲಾಗಿದೆ.

4. ಇನ್ವೆಸ್ಕೋ ಗ್ರೋತ್ ಅಪಾರ್ಚುನಿಟೀಸ್ ಫಂಡ್: ಇದು ಕೂಡ ಡೈರೆಕ್ಟ್ ಪ್ಲ್ಯಾನ್ ಆಗಿದ್ದು, ಇದರ ಯೂನಿಟ್ ದರ 32.62 ಇದೆ. ಅಲ್ಲದೇ ತಿಂಗಳಾವಾರು ಬಡ್ಡಿದರ ಕೂಡ ಆಕರ್ಷಕವಾಗಿದೆ.

5. ಐಸಿಐಸಿಐ ಪ್ರುಡೆನ್ಸಿಯಲ್ ಬ್ಲೂಚಿಪ್ ಫಂಡ್: ಯೂನಿಟ್ ದರ 44.23 ಆಗಿದ್ದು, ತಿಂಗಳಾವಾರು ಮತ್ತು ವರ್ಷವಾರು ಬಡ್ಡಿದರ ತುಂಬ ಆಕರ್ಷಕವಾಗಿದೆ.

ಭವಿಷ್ಯದಲ್ಲಿ ಮಕ್ಕಳ ಶಿಕ್ಷಣ, ಮದುವೆ, ನಿವೇಶನ ಖರೀದಿ ಮತ್ತಿತರ ಧೀರ್ಘಾವಧಿ ಗುರಿಗಳನ್ನು ಸಾಧಿಸುವ ಸಲುವಾಗಿ ಮ್ಯೂಚುವಲ್ ಫಂಡ್ ನಿಜಕ್ಕೂ ಉತ್ತಮ ವೇದಿಕೆಯಾಗಿದೆ ಎಂದು ಹೇಳಬಹುದು.