ಹೊಸ ವರ್ಷದಲ್ಲಿ ಹೂಡಿಕೆ ಪ್ರಾರಂಭಿಸುವ ಉದ್ಯೋಗಸ್ಥ ಮಹಿಳೆಯರಿಗೆ ಈ 5 ಯೋಜನೆಗಳು ಬೆಸ್ಟ್
ಉದ್ಯೋಗಸ್ಥ ಮಹಿಳೆಯರು ಇಂದು ಹೂಡಿಕೆಯತ್ತ ಕೂಡ ಆಸಕ್ತಿ ತೋರುತ್ತಿದ್ದಾರೆ. ಹೀಗಿರುವಾಗ 2024ನೇ ಸಾಲಿನಲ್ಲಿ ಹೂಡಿಕೆ ಮಾಡಲು ಪ್ಲ್ಯಾನ್ ಮಾಡುತ್ತಿರುವ ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲಿದೆ 5 ಅತ್ಯುತ್ತಮ ಹೂಡಿಕೆ ಆಯ್ಕೆಗಳು.
Business Desk: ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಹಿಳೆಯರು ಈಗ ಆರ್ಥಿಕವಾಗಿ ಹೆಚ್ಚು ಸ್ವಾತಂತ್ರರಾಗುತ್ತಿದ್ದಾರೆ. ಹೀಗಾಗಿ ದುಡಿದ ಹಣದಲ್ಲಿ ಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಜೊತೆಗೆ ಒಂದಿಷ್ಟು ಹಣವನ್ನು ಉಳಿತಾಯ ಹಾಗೂ ಹೂಡಿಕೆ ಕೂಡ ಮಾಡುತ್ತಿದ್ದಾರೆ. ಹಣಕಾಸಿನ ಸುರಕ್ಷತೆಯ ಬಗ್ಗೆ ಇಂದು ಮಹಿಳೆಯರು ಕೂಡ ಹೆಚ್ಚು ಜಾಗೃತರಾಗಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಒಂದಿಷ್ಟು ಹೂಡಿಕೆ ಮಾಡುವ ಬಗ್ಗೆ ಕೂಡ ಯೋಚಿಸುತ್ತಿದ್ದಾರೆ. ಹೀಗಿರುವಾಗ ಇನ್ನೂ ಹೂಡಿಕೆ ಬಗ್ಗೆ ಯೋಚಿಸದ ಮಹಿಳೆಯರಿಗೆ ಆ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಲು ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳಲು ಇದು ಸೂಕ್ತ ಸಮಯ. ಏಕೆಂದರೆ ಇನ್ನೆರಡು ದಿನಗಳಲ್ಲಿ 2024ನೇ ಸಾಲು ಪ್ರಾರಂಭವಾಗಲಿದೆ. ಹಾಗಾಗಿ ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಇದು ಸೂಕ್ತ ಸಮಯ. ಹಾಗಾದ್ರೆ ಉದ್ಯೋಗಸ್ಥ ಮಹಿಳೆಯರಿಗೆ ಹೂಡಿಕೆಗೆ ಸೂಕ್ತವಾದ 5 ಆಯ್ಕೆಗಳು ಯಾವುವು? ಇಲ್ಲಿದೆ ಮಾಹಿತಿ.
1.ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್): ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡೋರಿಗೆ ಎನ್ ಪಿಎಸ್ ಅತ್ಯುತ್ತಮ ಯೋಜನೆ. ಎನ್ ಪಿಎಸ್ ಮಾರುಕಟ್ಟೆ ಸಂಪರ್ಕಿತ ಉಳಿತಾಯ ಕಾರ್ಯಕ್ರಮವಾಗಿದೆ. ಒಬ್ಬ ವ್ಯಕ್ತಿ ಈ ಯೋಜನೆಯಲ್ಲಿ ತೊಡಗಿಸಿದ ಹಣವನ್ನು ಈಕ್ವಿಟಿ, ಕಾರ್ಪೋರೇಟ್ ಬಾಂಡ್ಸ್, ಲಿಕ್ವಿಡ್ ಫಂಡ್ಸ್, ಗವರ್ನಮೆಂಟ್ ಬಾಂಡ್ಸ್ ಹಾಗೂ ಫಿಕ್ಸಡ್ ಫೈನಾನ್ಷಿಯಲ್ ಇನ್ಸ್ ಟ್ರುಮೆಂಟ್ ಸೇರಿದಂತೆ ವಿವಿಧ ಕಡೆ ಹೂಡಿಕೆ ಮಾಡಲಾಗುತ್ತದೆ. ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಈ ಯೋಜನೆಯನ್ನು ನಿಯಂತ್ರಿಸುತ್ತದೆ. ಈ ಯೋಜನೆ ನಿಮಗೆ ಹೂಡಿಕೆ ನಿಧಿ ಮ್ಯಾನೇಜರ್, ಫಂಡ್ ಅಲ್ಟ್ರನೇಟಿವ್ಸ್ ಮುಂತಾದವರನ್ನು ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡುತ್ತದೆ.
ಸುಕನ್ಯಾ ಸಮೃದ್ಧಿ, 3 ವರ್ಷದ ಠೇವಣಿಗೆ ಬಡ್ಡಿ ದರ ಏರಿಸಿದ ಕೇಂದ್ರ ಸರ್ಕಾರ!
2.ಸ್ಥಿರ ಠೇವಣಿ: ಸ್ಥಿರ ಠೇವಣಿ ಹೂಡಿಕೆಗಳು ನಿಮ್ಮ ನಿಧಿಯನ್ನು ಸಂರಕ್ಷಿಸಲು ಇರುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿವೆ. ಇವು ನಿಮಗೆ ಹಣ ಉಳಿತಾಯ ಮಾಡಲು ಮಾತ್ರವಲ್ಲ, ಬದಲಿಗೆ ಅದರಿಂದ ಒಂದಿಷ್ಟು ಗಳಿಕೆ ಮಾಡಲು ಕೂಡ ಅವಕಾಶ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ವಿವಿಧ ಬ್ಯಾಂಕುಗಳ ಎಫ್ ಡಿಗಳ ಮೇಲಿನ ಬಡ್ಡಿದರದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಎಫ್ ಡಿಗಳು ಕೂಡ ಹೂಡಿಕೆ ಮೇಲೆ ಉತ್ತಮ ರಿಟರ್ನ್ಸ್ ನೀಡುತ್ತಿವೆ.
3.ಮ್ಯೂಚುವಲ್ ಫಂಡ್ ಎಸ್ ಐಪಿ: ಮ್ಯೂಚುವಲ್ ಫಂಡ್ ಕೂಡ ಮಹಿಳೆಯರಿಗೆ ಹೂಡಿಕೆಗಿರುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿವೆ. ನಿಮ್ಮ ಹಣಕಾಸಿನ ಉದ್ದೇಶಗಳನ್ನು ಆಧರಿಸಿ ನೀವು ಈಕ್ವಿಟಿ, ಡೆಟ್ ಅಥವಾ ಹೈಬ್ರೀಡ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ದೀರ್ಘಾವಧಿ ಹೂಡಿಕೆಗೆ ಸಿಸ್ಟಮೆಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ (ಎಸ್ ಐಪಿ) ಉತ್ತಮವಾಗಿದೆ.
4.ಚಿನ್ನ: ಚಿನ್ನ ಹಿಂದೆ, ಇಂದು ಹಾಗೂ ಮುಂದೆ ಹೀಗೆ ಎಂದೆಂದಿಗೂ ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಅದರಲ್ಲೂ ಮಹಿಳೆಯರಿಗೆ ಖಂಡಿತವಾಗಿಯೂ ಹೂಡಿಕೆಗೆ ಚಿನ್ನ ಮೆಚ್ಚಿನ ಆಯ್ಕೆಯಾಗಿರುತ್ತದೆ. ಚಿನ್ನದ ಮೇಲಿನ ಹೂಡಿಕೆ ಎಷ್ಟು ಉಪಯುಕ್ತ ಅನ್ನೋದನ್ನು ಮಹಿಳೆಯರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಬೇರೆ ಯಾರೂ ಇರಲಿಕ್ಕಿಲ್ಲ. ಚಿನ್ನದ ಮೇಲೆ ನಾನಾ ರೀತಿಯಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಆಭರಣಗಳು, ನಾಣ್ಯಗಳು, ಬಾರ್ ಗಳು, ಗೋಲ್ಡ್ ಎಕ್ಸ್ ಚೆಂಜ್ ಟ್ರೇಡೆಡ್ ಫಂಡ್ಸ್, ಗೋಲ್ಡ್ ಫಂಡ್ಸ್. ಸಾವರಿನ್ ಗೋಲ್ಡ್ ಬಾಂಡ್ ಕಾರ್ಯಕ್ರಮ ಇತ್ಯಾದಿ ಮೂಲಕ ಹೂಡಿಕೆ ಮಾಡಬಹುದು.
ಹೊಲಗಳಲ್ಲಿ ಉಳಿದ ಒಣಹುಲ್ಲಿನಲ್ಲಿ ಅಣಬೆ ಬೆಳೆದು ತಿಂಗಳಿಗೆ 20 ಲಕ್ಷ ಗಳಿಸುತ್ತಿದ್ದಾರೆ ಇಂದೋರಿನ ಈ ಮಹಿಳೆ
5.ಆರೋಗ್ಯ ವಿಮೆ: ಇದು ಎಲ್ಲರೂ ಅಗತ್ಯವಾಗಿ ಮಾಡಲೇಬೇಕಾದ ಹೂಡಿಕೆ. ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಹೀಗಾಗಿ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡೋದು ಅಗತ್ಯ. ಆರೋಗ್ಯ ವಿಮೆ ನಿಮ್ಮನ್ನು ಅನಿರೀಕ್ಷಿತವಾಗಿ ಎದುರಾಗುವ ದೊಡ್ಡ ಆರ್ಥಿಕ ಸಂಕಷ್ಟದಿಂದ ಪಾರು ಮಾಡುತ್ತದೆ.