ತೆರಿಗೆ ಉಳಿತಾಯದ ಎಫ್ ಡಿ ಮೇಲೆ ಅತ್ಯಧಿಕ ಬಡ್ಡಿ ನೀಡುವ ನಾಲ್ಕು ಸರ್ಕಾರಿ ಬ್ಯಾಂಕ್ ಗಳು ಇವೇ ನೋಡಿ!
ಹಣದ ಉಳಿತಾಯದ ಜೊತೆಗೆ ತೆರಿಗೆಯನ್ನೂ ಉಳಿಸುವಂತಹ ಕೆಲವು ಯೋಜನೆಗಳಿವೆ. ಅಂಥವುಗಳಲ್ಲಿ ತೆರಿಗೆ ಉಳಿತಾಯದ ಎಫ್ ಡಿ ಕೂಡ ಒಂದು. ಹಾಗಾದ್ರೆ ಯಾವ ಬ್ಯಾಂಕುಗಳು ತೆರಿಗೆ ಉಳಿತಾಯದ ಎಫ್ ಡಿಗಳ ಮೇಲೆ ಅಧಿಕ ಬಡ್ಡಿ ನೀಡುತ್ತವೆ? ಇಲ್ಲಿದೆ ಮಾಹಿತಿ.
Business Desk: ಭಾರತದಲ್ಲಿ ಬಹುತೇಕ ಹೂಡಿಕೆದಾರರು ರಿಸ್ಕ್ ಕಡಿಮೆ ಇರುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇನ್ನೂ ಕೆಲವರು ಹೂಡಿಕೆ ಮಾಡಿ ತೆರಿಗೆ ಉಳಿಸಲು ಪ್ರಯತ್ನಿಸುತ್ತಾರೆ. ಈ ರೀತಿ ತೆರಿಗೆ ಹೊರೆ ತಗ್ಗಿಸಿಕೊಳ್ಳಲು ಬಯಸುವ ಹೂಡಿಕೆದಾರರು ತೆರಿಗೆ ಉಳಿಸುವ ಠೇವಣಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇಂಥ ಠೇವಣಿಗಳಲ್ಲಿ ಹೂಡಿಕೆ ಮಾಡೋದ್ರಿಂದ ತೆರಿಗೆ ಉಳಿತಾಯದ ಜೊತೆಗೆ ಉತ್ತಮ ರಿಟರ್ನ್ ಕೂಡ ಸಿಗುತ್ತದೆ. ಬಹುತೇಕ ತೆರಿಗೆ ಉಳಿತಾಯದ ಠೇವಣಿಗಳು 5 ವರ್ಷಗಳ ಲಾಕ್ -ಇನ್ ಅವಧಿಯನ್ನು ಹೊಂದಿರುತ್ತವೆ. ಅಲ್ಲದೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನವನ್ನು ಕೂಡ ಹೊಂದಿರುತ್ತದೆ. ಹೂಡಿಕೆದಾರರ ವಯಸ್ಸಿಗೆ ಅನುಗುಣವಾಗಿ ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳು ಮಾಸಿಕ ಅಥವಾ ತ್ರೈಮಾಸಿಕ ಬಡ್ಡಿ ನೀಡುತ್ತವೆ. ಇನ್ನು ಹಿರಿಯ ನಾಗರಿಕರು ಇತರ ವಯಸ್ಸಿನ ಗ್ರಾಹಕರಿಗಿಂತ ಸ್ವಲ್ಪ ಹೆಚ್ಚಿನ ರಿಟರ್ನ್ಸ್ ಪಡೆಯುತ್ತಾರೆ. ಇಂಥ ತೆರಿಗೆ ಉಳಿತಾಯದ ಠೇವಣಿಗಳು (ಎಫ್ ಡಿ) ಅನೇಕ ಬ್ಯಾಂಕ್ ಗಳಲ್ಲಿ ಲಭ್ಯವಿದೆ. ಅದರಲ್ಲೂ ಅತ್ಯಧಿಕ ರಿಟರ್ನ್ಸ್ ನೀಡುವ ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕುಗಳ ವಿವರ ಇಲ್ಲಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ನವೆಂಬರ್ ತಿಂಗಳಿಂದ ಜಾರಿಗೆ ಬರುವಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಳ ಮಾಡಿದೆ. ಪ್ರಸ್ತುತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಐದು ವರ್ಷಗಳ ಅವಧಿಯ ತೆರಿಗೆ ಉಳಿತಾಯದ ಎಫ್ ಡಿಗಳ ಮೇಲೆ ಶೇ.6.7 ಬಡ್ಡಿದರ ವಿಧಿಸಿದೆ. ಇನ್ನು ಹಿರಿಯ ಹೂಡಿಕೆದಾರರಿಗೆ ಹೆಚ್ಚುವರಿ 50 ಬೇಸಿಸ್ ಪಾಯಿಂಟ್ಸ್ ಬಡ್ಡಿ ವಿಧಿಸಿದೆ. ಹೀಗಾಗಿ ಐದು ವರ್ಷಗಳ ಅವಧಿಯ ಬ್ಯಾಂಕ್ ಆಫ್ ಇಂಡಿಯಾದ ತೆರಿಗೆ ಉಳಿತಾಯದ ಎಫ್ ಡಿ ಮೇಲೆ ಹಿರಿಯ ನಾಗರಿಕರಿಗೆ ಶೇ.7.2 ಬಡ್ಡಿ ವಿಧಿಸಲಾಗುತ್ತಿದೆ.
ಡಿಸೆಂಬರ್ ತಿಂಗಳಲ್ಲಿ ಈ ನಿಯಮಗಳಲ್ಲಿ ಬದಲಾವಣೆ; ಜೇಬಿನ ಮೇಲೆ ಹೆಚ್ಚಲಿದೆಯಾ ಹೊರೆ?
ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್ ಕೂಡ ತೆರಿಗೆ ಉಳಿತಾಯದ ಸ್ಥಿರ ಠೇವಣಿ ಮೇಲೆ ಉತ್ತಮ ರಿಟರ್ನ್ಸ್ ನೀಡುತ್ತಿದೆ. ಈ ಬ್ಯಾಂಕ್ ಅಕ್ಟೋಬರ್ 31ರಂದು ಕೊನೆಯ ಬಾರಿ ಬಡ್ಡಿದರ ಪರಿಷ್ಕರಣೆ ಮಾಡಿದೆ. ಕೆನರಾ ಬ್ಯಾಂಕ್ ಐದು ವರ್ಷಗಳ ಅವಧಿಯ ತೆರಿಗೆ ಉಳಿತಾಯದ ಸ್ಥಿರ ಠೇವಣಿ ಮೇಲಿನ ಇತ್ತೀಚಿನ ಬಡ್ಡಿದರ ಸಾರ್ವಜನಿಕರಿಗೆ ಶೇ.6.50 ಹಾಗೂ ಹಿರಿಯ ನಾಗರಿಕರಿಗೆ ಶೇ.7ರಷ್ಟಿದೆ. ಕೆನರಾ ಬ್ಯಾಂಕ್ ಗರಿಷ್ಠ ಠೇವಣಿ 1.50ಲಕ್ಷ ರೂ. ಆಗಿದೆ.
ಇಂಡಿಯನ್ ಓವರ್ ಸೀಸ್ ಬ್ಯಾಂಕ್
ಇಂಡಿಯನ್ ಓವರ್ ಸೀಸ್ ಬ್ಯಾಂಕ್ ತೆರಿಗೆ ಉಳಿತಾಯದ ಎಫ್ ಡಿಗಳ ಮೇಲೆ ಅತ್ಯಧಿಕ ಬಡ್ಡಿ ನೀಡುವ ಮೂರನೇ ದೊಡ್ಡ ಬ್ಯಾಂಕ್ ಆಗಿದೆ. ತೆರಿಗೆ ಉಳಿತಾಯದ ಎಫ್ ಡಿಗಳ ಮೇಲಿನ ಬಡ್ಡಿದರ ನವೆಂಬರ್ 11, 2022ರಿಂದ ಜಾರಿಗೆ ಬರಲಿದೆ. ಸಾರ್ವಜನಿಕರಿಗೆ ತೆರಿಗೆ ಉಳಿತಾಯದ ಎಫ್ ಡಿಗಳ ಮೇಲಿನ ಬಡ್ಡಿ ದರ ಶೇ. 6.40, ಹಿರಿಯ ನಾಗರಿಕರಿಗೆ ಶೇ. 6.90 ಹಾಗೂ ಶೇ.7.15ರಷ್ಟಿದೆ.
Forbes 100 Richest Indians: ಅದಾನಿ, ಅಂಬಾನಿ, ಧಮಾನಿ ಭಾರತದ ಟಾಪ್ 3 ಶ್ರೀಮಂತರು: ಕರ್ನಾಟಕದ 10 ಮಂದಿಗೆ ಸ್ಥಾನ
ಇಂಡಿಯನ್ ಬ್ಯಾಂಕ್
ತೆರಿಗೆ ಉಳಿತಾಯದ ಎಫ್ ಡಿಗಳ ಮೇಲೆ ಅತ್ಯಧಿಕ ಬಡ್ಡಿ ನೀಡುವ ನಾಲ್ಕನೇ ದೊಡ್ಡ ಬ್ಯಾಂಕ್ ಇಂಡಿಯನ್ ಬ್ಯಾಂಕ್. ದೇಶೀಯ ರಿಟೇಲ್ ಟರ್ಮ್ ಠೇವಣಿಗಳ ಮೇಲಿನ ಬಡ್ಡಿ ದರ 2022ರ ಅಕ್ಟೋಬರ್ 29ರಿಂದ ಜಾರಿಗೆ ಬರಲಿದೆ. ಇನ್ನು ಐದು ವರ್ಷಗಳ ಅವಧಿಯ ತೆರಿಗೆ ಉಳಿತಾಯದ ಎಫ್ ಡಿಗಳ ಮೇಲೆ ಬ್ಯಾಂಕ್ ಶೇ.6.40 ಬಡ್ಡಿದರ ವಿಧಿಸುತ್ತದೆ. ಹಾಗೆಯೇ ಹಿರಿಯ ನಾಗರಿಕರಿಗೆ ಶೇ.6.90 ಬಡ್ಡಿದರ ವಿಧಿಸಲಾಗುತ್ತದೆ.