ಪಾಟ್ನಾ(ನ. 29)  ಎಲ್ಲೆಲ್ಲಿಯೂ ಈರುಳ್ಳಿ ಬೆಲಕೆ ಏರಿಕೆಯದ್ದೆ ಸುದ್ದಿ. ನೂರು ರೂ ದಾಟಿದ ಈರುಳ್ಳಿ..ಕಣ್ಣೀರುಳ್ಳಿ.. ಈರುಳ್ಳಿ ಹೆಚ್ಚಿದರೆ ಮಾತ್ರ ಅಲ್ಲ.. ಈರುಳ್ಳಿ ಖರೀದಿ ಮಾಡಿದರೂ ಕಣ್ಣೀರು ಬರುತ್ತದೆ.. ಹೀಗೆ ಟ್ರೋಲ್ ಗಳೂ ಒಂದು ಕಡೆ ವಿಷಾದದ ರಂಜನೆ ನೀಡುತ್ತವೆ. 

ಈ ಗ್ರಾಮಗಳಲ್ಲಿ ಈರುಳ್ಳಿದರ ಕೆಜಿಗೆ ನೂರು ಅಲ್ಲ ಐದು ನೂರು ಆದರೂ ಚಿಂತೆ ಇಲ್ಲ. ಅದಕ್ಕೆ ಒಂದು ಕಾರಣ ಇದೆ. ಹಾಗಾದರೆ ಅತಿ ಕಡಿಮೆ ದರದಲ್ಲಿ ಈರುಳ್ಳಿ ಸಿಗುತ್ತಿರುವ ಬಿಹಾರದ ಈ ಗ್ರಾಮದ ಕತೆ ಏನು?

ದಾಖಲೆ ಬರೆದ ಈರುಳ್ಳಿ ದರ, ಕಾರಣವೇನು?

ಬಿಹಾರದ ಸ್ಟೇಟ್ ಕೋ ಆಪರೇಟಿವ್ ಮಾರ್ಕೆಟಿಂಗ್ ಅಸೋಸಿಯೇಶನ್ ಲಿಮಿಟೆಡ್ ಬಿಹಾರದ ಗ್ರಾಮಗಳಿಗೆ ಕೆಜಿಗೆ  35  ರೂ. ದರದಲ್ಲಿ ಈರುಳ್ಳಿ ಪೂರೈಕೆ ಮಾಡುತ್ತಿದೆ.  ಜನರಿಗೆ ದರ ಏರಿಕೆ ಬಿಸಿ ತಾಗದಿರಲಿ ಎಂಬುದು ಮುಖ್ಯ ಉದ್ದೇಶ.

ಆದರೆ ಬಿಹಾರದ ಈ ಗ್ರಾಮ ಇದು ಎಲ್ಲದಕ್ಕಿಂತ ಭಿನ್ನ.ಕೆಜಿಗೆ ಐದು ನೂರು ಅಲ್ಲ ಸಾವಿರ ರೂ. ಆದರೆ ಈ ಗ್ರಾಮದವರಿಗೆ ಚಿಂತೆಯೇ ಇಲ್ಲ. ಯಾಕಂದ್ರೆ ಇಡೀ ಗ್ರಾಮದ ಜನ ಈರುಳ್ಳಿಯನ್ನೇ ತಿನ್ನುವುದಿಲ್ಲ.

ಬಿಹಾರದ ಜೆಹನಾಬಾದ್ ಜಿಲ್ಲೆಯ ಛಿರಿ  ಪಂಚಾಯಿತಿ ವ್ಯಾಪ್ತಿಯ ತ್ರಿಲೋಕಿ ಗ್ರಾಮದ ಜನರಿಗೆ ಈರುಳ್ಳಿಯ ತಲೆಬಿಸಿಯೇ ಇಲ್ಲ. ಪಾಟ್ನಾದಿಂದ 80  ಕಿಮೀ ದೂರದಲ್ಲಿರುವ ಹಳ್ಳಿಯಲ್ಲಿ 35  ಕುಟುಂಬಗಳು ವಾಸ ಮಾಡುತ್ತಲಿವೆ. 300-400 ಜನರಿರುವ ಗ್ರಾಮದಲ್ಲಿ ಒಬ್ಬರೂ ಈರುಳ್ಳಿ ತಿನ್ನುವುದಿಲ್ಲ.

ಈ ಗ್ರಾಮದ ಜನರು ಈರುಳ್ಳಿ ಮಾತ್ರ ಅಲ್ಲ ಬೆಳ್ಳುಳ್ಳಿಯನ್ನು ಮುಟ್ಟುವುದಿಲ್ಲ. ಇಡೀ ಗ್ರಾಮದ ಜನರು ಪಕ್ಕಾ ಸಸ್ಯಹಾರಿ. ಯಾರೊಬ್ಬರು ಸಹ ಮದ್ಯವನ್ನು ಮುಟ್ಟುವುದಿಲ್ಲ. ಶತಮಾನಗಳಿಂದ ಈ ಗ್ರಾಮದಲ್ಲಿ ಈರುಳ್ಳಿ ತಿನ್ನದೇ ಇರುವುದರಿಂದ ದರ ಏರಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಗ್ರಾಮದ ಹಿರಿಯ ರಾಮ್ ಪ್ರವೇಶ್ ಯಾದವ್ ಹೇಳುತ್ತಾರೆ.