ರಿಯಲ್ ಎಸ್ಟೇಟ್‌ನಲ್ಲಿ ಹಣ ತೊಡಗಿಸೋ ಮುನ್ನ ಇವಿಷ್ಟು ವಿಚಾರ ಗಮನಿಸಿ
ಇಂದಿಗೂ ಹೂಡಿಕೆದಾರರಿಗೆ ಸುರಕ್ಷಿತ ತಾಣವೆಂದ್ರೆ ರಿಯಲ್ ಎಸ್ಟೇಟ್. ಆದ್ರೆ ಈ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸೋ ಮುನ್ನ ಕೆಲವು ವಿಚಾರಗಳನ್ನು ಗಮನಿಸೋದು ಅಗತ್ಯ.
ಬಹುತೇಕರು ಹೂಡಿಕೆಗೆ ನೆಚ್ಚಿಕೊಂಡಿರೋ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಒಂದು. ಕೊರೋನಾ ಅಲೆ ಅಲೆಯಾಗಿ ಅಪ್ಪಳಿಸಿದ ಬಳಿಕವಂತೂ ಜನರು ಸುರಕ್ಷಿತ ಹಾಗೂ ನಷ್ಟವುಂಟು ಮಾಡದ ಹೂಡಿಕೆ ಕಡೆಗೆ ಮನಸ್ಸು ಮಾಡುತ್ತಿದ್ದಾರೆ.
ಪರಿಣಾಮ ಈ ಎಲ್ಲ ಅಂಶಗಳನ್ನೊಳಗೊಂಡಿರೋ ರಿಯಲ್ ಎಸ್ಟೇಟ್ ನೆಚ್ಚಿನ ಹೂಡಿಕೆ ಕ್ಷೇತ್ರವಾಗಿಯೇ ಉಳಿದುಕೊಂಡಿದೆ. ಆದ್ರೆ ನಿವೇಶನ ಅಥವಾ ಭೂಮಿ ಮೇಲೆ ಹೂಡಿಕೆ ಮಾಡೋ ಮುನ್ನ ಹೂಡಿಕೆದಾರ ಕೆಲವು ಅಂಶಗಳನ್ನು ಗಮನಿಸೋದು ಅಗತ್ಯ.
ವೈದ್ಯಕೀಯ ತುರ್ತು ವೆಚ್ಚಕ್ಕೆ ವಿಮೆ ಬಿಟ್ರೆ ಬೇರೆ ಅವಕಾಶಗಳೇನಿವೆ?
ಯಾವ ಉದ್ದೇಶದ ಹೂಡಿಕೆ ನಿರ್ಧರಿಸಿ
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಗೆ ಅನೇಕ ಅವಕಾಶಗಳಿವೆ. ನೀವು ಇದ್ರಲ್ಲಿ ಹೂಡಿಕೆ ಮಾಡೋ ಮುನ್ನ ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ ಎಂಬುದನ್ನು ಮೊದಲು ನಿರ್ಧರಿಸಿ. ಅಂದ್ರೆ ವಸತಿ, ವಾಣಿಜ್ಯ ಅಥವಾ ಫೈನಾನ್ಸಿಯಲ್ ಇನ್ಸ್‌ಟ್ರುಮೆಂಟ್, ಇವುಗಳಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡುತ್ತೀರಿ ಎಂಬುದನ್ನು ನಿರ್ಧರಿಸಿ.
ಆನ್‌ಲೈನ್ ಮೋಸದಿಂದ ಪಾರಾಗೋದು ಹೇಗೆ?
ನೀವು ಬಾಡಿಗೆ ಮನೆಯಲ್ಲಿದ್ದು,ಸ್ವಂತ ಮನೆ ಹೊಂದಲು ಬಯಸಿದ್ರೆ ಅದು ಅಪಾರ್ಟ್‌ಮೆಂಟ್ ಅಥವಾ ಪ್ರತ್ಯೇಕ ಮನೆ ಇವುಗಳಲ್ಲಿ ಯಾವುದನ್ನು ಆರಿಸಿಕೊಳ್ಳುತ್ತೀರಿ ಎಂಬುದು ಕೂಡ ಮುಖ್ಯ. ನಿವೇಶನ ಅಥವಾ ಪ್ರತ್ಯೇಕ ಮನೆಗಳಲ್ಲಿ ಹಣ ತೊಡಗಿಸೋದ್ರಿಂದ ನಿಮ್ಮ ಸ್ವಂತ ಮನೆ ಕನಸು ನನಸಾಗೋ ಜೊತೆ ಭವಿಷ್ಯದಲ್ಲಿ ನೀವು ಖರೀದಿಸಿದ್ದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗೋದು ಖಚಿತ. ಅದೇ ಫ್ಲ್ಯಾಟ್ ಖರೀದಿಸಿದ್ರೆ ನೀವು ಸ್ವಂತ ಮನೆಯನ್ನೇನೋ ಹೊಂದುತ್ತೀರಿ ಆದ್ರೆ ಅದ್ರಿಂದ ಉತ್ತಮ ರಿಟರ್ನ್ಸ್ ನಿರೀಕ್ಷಿಸೋದು ಕಷ್ಟ.
ನಗರ ಅಥವಾ ಪ್ರದೇಶವನ್ನು ಆರಿಸಿ
ಒಂದು ವೇಳೆ ನೀವು ಸ್ವಂತ ವಾಸಕ್ಕಾಗಿ ಮನೆ ಅಥವಾ ಫ್ಲ್ಯಾಟ್ ಖರೀದಿಸದೆ ಹೂಡಿಕೆ ಉದ್ದೇಶ ಹೊಂದಿದ್ರೆ ಯಾವ ನಗರ ಅಥವಾ ಪ್ರದೇಶದಲ್ಲಿ ಆಸ್ತಿ ಕೊಂಡುಕೊಳ್ಳಬೇಕು ಎಂಬುದನ್ನು ಮೊದಲು ನಿರ್ಧರಿಸಿ. ಮನೆ ಅಥವಾ ನಿವೇಶನದ ಮೇಲೆ ಹೂಡಿಕೆ ಮಾಡೋವಾಗ ಕೆಲವೊಂದು ಅಂಶಗಳನ್ನು ಗಮನಿಸೋದು ಅಗತ್ಯ. ಆ ಪ್ರದೇಶದಲ್ಲಿ ಹೂಡಿಕೆ ಮಾಡಿದ್ರೆ ಭವಿಷ್ಯದಲ್ಲಿ ಉತ್ತಮ ರಿಟರ್ನ್ಸ್ ಬರುತ್ತದೋ ಇಲ್ಲವೋ ಎಂದು ಯೋಚಿಸೋದು ಅಗತ್ಯ.
ಮ್ಯೂಚುವಲ್ ಫಂಡ್ ಮೇಲೆ ಸಾಲ ಪಡೆಯೋದು ಹೇಗೆ?
ಯಾವ ನಗರದಲ್ಲಿ ಹೂಡಿಕೆ ಮಾಡೋದು ಎಂದು ಯೋಚಿಸಿದ ಬಳಿಕ ಅಲ್ಲಿನ ಪ್ರದೇಶ ಆಯ್ಕೆ ಮಾಡೋದು ಕೂಡ ಮುಖ್ಯ. ವಾಣಿಜ್ಯ ಉದ್ದೇಶಕ್ಕಾಗಿ ನಿವೇಶನ ಅಥವಾ ಕಟ್ಟಡ ಖರೀದಿಸುತ್ತಿದ್ರೆ ಅಲ್ಲಿ ವ್ಯಾಪಾರ-ಉದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿ. ಇನ್ನು ವಾಸ್ತವ್ಯದ ಉದ್ದೇಶದಿಂದ ಹೂಡಿಕೆ ಮಾಡುತ್ತಿದ್ರೆ, ಅಲ್ಲಿ ಉತ್ತಮ ಬಾಡಿಗೆ ಬರಬಹುದಾ ಎಂಬುದನ್ನು ಲೆಕ್ಕ ಹಾಕೋ ಜೊತೆ ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ, ಮೆಟ್ರೋ ಸೇರಿದಂತೆ ಅಗತ್ಯ ಸೌಲಭ್ಯಗಳ ಲಭ್ಯತೆ ಬಗ್ಗೆಯೂ ಯೋಚಿಸಬೇಕು. ಇಂಥ ಸೌಲಭ್ಯಗಳಿದ್ರೆ ಹೂಡಿಕೆಗೆ ಪ್ರತಿಯಾಗಿ ಉತ್ತಮ ಆದಾಯ ಲಭಿಸುತ್ತದೆ.
ಕಟ್ಟಡದ ವಿನ್ಯಾಸ, ವಾಸ್ತು, ಗುಣಮಟ್ಟ ಗಮನಿಸಿ
ಇತ್ತೀಚಿನ ದಿನಗಳಲ್ಲಿ ಮನೆ ಖರೀದಿಸೋವಾಗ ವಿಸ್ತೀರ್ಣ, ಕಟ್ಟಡದ ಗುಣಮಟ್ಟ, ವಾಸ್ತು ಮುಂತಾದ ಅಂಶಗಳನ್ನು ಗಮನಿಸುತ್ತಾರೆ. ಕೊರೋನಾ ಬಳಿಕ ವರ್ಕ್ ಫ್ರಂ ಹೋಮ್ ಹೆಚ್ಚಿರೋ ಕಾರಣ ವಿಶಾಲ ಸ್ಥಳಾವಕಾಶವಿರೋ ಮನೆಗೆ ಬೇಡಿಕೆ ಹೆಚ್ಚಿದೆ. ಒಳಾಂಗಣ ವಿನ್ಯಾಸ ಕೂಡ ಮುಖ್ಯವಾಗಿರುತ್ತದೆ. ಹೀಗಾಗಿ ನೀವು ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡೋವಾಗ ಅಥವಾ ಕಟ್ಟಿರೋ ಮನೆಯನ್ನು ಖರೀದಿಸೋವಾಗ ಈ ಎಲ್ಲ ಅಂಶಗಳ ಬಗ್ಗೆ ಗಮನ ನೀಡಿ.
ಪ್ರಾಮಾಣಿಕ ದರಕ್ಕಾಗಿ ಪ್ರಯತ್ನಿಸಿ
ಆಸ್ತಿ ಖರೀದಿಸೋವಾಗ ಡೆವಲಪರ್ಸ್ ಅಥವಾ ಮಧ್ಯವರ್ತಿಗಳ ಜೊತೆ ನೀವೇಗೆ ಸಂವಹನ ನಡೆಸುತ್ತೀರಿ ಎಂಬುದು ಬೆಲೆ ನಿಗದಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ ನಿವೇಶನ, ಮನೆ ಅಥವಾ ಕಟ್ಟಡ ಖರೀದಿಸೋವಾಗ ಬೆಲೆಯ ಬಗ್ಗೆ ಎಚ್ಚರ ವಹಿಸಿ. ಹೇಳಿದ ಬೆಲೆಗೆ ಒಪ್ಪಿಕೊಳ್ಳದೆ ಒಂದಿಷ್ಟು ಚರ್ಚೆ ನಡೆಸೋದು ಅಗತ್ಯ. ಅಲ್ಲದೆ, ಆ ಪ್ರದೇಶದಲ್ಲಿ ಪ್ರಸಕ್ತ ಮಾರುಕಟ್ಟೆಯಲ್ಲಿ ನಿವೇಶನಕ್ಕೆ ಎಷ್ಟು ದರವಿದೆ ಎಂಬುದನ್ನು ಮೊದಲೇ ಪರಿಶೀಲಿಸಿ.
ಬಂಡವಾಳ ಬೆಳೆಯಲು ಸಮಯ ನೀಡಿ
ನಿವೇಶನ ಅಥವಾ ಆಸ್ತಿ ಖರೀದಿಸಿದ ತಕ್ಷಣ ಅದ್ರಿಂದ ಉತ್ತಮ ಆದಾಯ ಬರುತ್ತೆ ಎಂದು ನಿರೀಕ್ಷಿಸೋ ಬದಲು ದೀರ್ಘಾವಧಿಯಲ್ಲಿ ಏನಾಗ್ಬಹುದು ಎಂಬುದನ್ನು ಲೆಕ್ಕ ಹಾಕಿ. ವರ್ಷಗಳು ಕಳೆದಂತೆ ನಿವೇಶನದ ಮೇಲೆ ನೀವು ಹಾಕಿರೋ ಬಂಡವಾಳದ ಮೌಲ್ಯ ಹೆಚ್ಚುತ್ತ ಹೋಗುತ್ತದೆ. ಹೀಗಾಗಿ ಭವಿಷ್ಯದಲ್ಲಿ ಉತ್ತಮ ರಿಟರ್ನ್ಸ್ ತರೋ ಪ್ರದೇಶಗಳಲ್ಲಿ ಹೂಡಿಕೆ ಮಾಡಿ.