'ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಟ್ 2023 ' ಮಂಗಳವಾರ ಬಿಡುಗಡೆಯಾಗಿದ್ದು,ಇದರ ಅನ್ವಯ ಸಿಂಗಾಪುರದ ಪಾಸ್ ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಆಗಿದೆ. ಅತ್ಯಂತ ದುರ್ಬಲ ಪಾಸ್ಪೋರ್ಟ್ ಹೊಂದಿರುವ ರಾಷ್ಟ್ರ ಅಫ್ಘಾನಿಸ್ಥಾನವಾಗಿದೆ. ಭಾರತ ಈ ಪಟ್ಟಿಯಲ್ಲಿ 80ನೇ ಸ್ಥಾನದಲ್ಲಿದೆ. 

ಲಂಡನ್ (ಜು.19): ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಹೊಂದಿರುವ ರಾಷ್ಟ್ರ ಸಿಂಗಾಪುರ ಎಂದು 'ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಟ್ 2023 ' ತಿಳಿಸಿದೆ. ಜಗತ್ತಿನಾದ್ಯಂತ 227 ಪ್ರವಾಸಿ ತಾಣಗಳ ಪೈಕಿ 192ಕ್ಕೆ ವೀಸಾಮುಕ್ತ ಪ್ರವೇಶವನ್ನು ಸಿಂಗಾಪುರ ಪಾಸ್ ಫೋರ್ಟ್ ಹೊಂದಿದೆ. ಈ ಮೂಲಕ ವಿಶ್ವದ ಶಕ್ತಿಶಾಲಿ ಪಾಸ್ ಫೋರ್ಟ್ ಪಟ್ಟಿಯಲ್ಲಿ ಕಳೆದ 5 ವರ್ಷಗಳಿಂದ ನಂ.1 ಸ್ಥಾನದಲ್ಲಿದ್ದ ಜಪಾನ್ ಅನ್ನು ಈ ಬಾರಿ ಸಿಂಗಾಪುರ ಹಿಂದಿಕ್ಕಿದೆ. 189 ರಾಷ್ಟ್ರಗಳಿಗೆ ವೀಸಾಮುಕ್ತ ಪ್ರವೇಶ ಹೊಂದಿರುವ ಜಪಾನ್ ಪಾಸ್ ಪೋರ್ಟ್ ಈ ಬಾರಿ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದೆ. ಅಲ್ಲದೆ, ಮೂರನೇ ಸ್ಥಾನವನ್ನು ಆಸ್ಟ್ರಿಯಾ, ಫಿನ್ ಲ್ಯಾಂಡ್, ಫ್ರಾನ್ಸ್ , ಲುಕ್ಸೆಂಬರ್ಗ್, ದಕ್ಷಿಣ ಕೊರಿಯಾ ಹಾಗೂ ಸ್ವೀಡನ್ ಜೊತೆಗೆ ಹಂಚಿಕೊಂಡಿದೆ. ಇನ್ನು ಭಾರತ ಕಳೆದ ವರ್ಷಕ್ಕಿಂತ ಈ ಬಾರಿ ಶ್ರೇಯಾಂಕ ಪಟ್ಟಿಯಲ್ಲಿ 5 ಸ್ಥಾನ ಮೇಲೇರಿದ್ದು, 57 ರಾಷ್ಟ್ರಗಳಿಗೆ ವೀಸಾಮುಕ್ತ ಪ್ರವೇಶ ಹೊಂದಿರುವ ಮೂಲಕ 80ನೇ ಸ್ಥಾನದಲ್ಲಿದೆ. ಭಾರತ ಈ ಸ್ಥಾನವನ್ನು ಟೊಗೋ ಹಾಗೂ ಸೆನೆಗಲ್ ರಾಷ್ಟ್ರಗಳ ಜೊತೆಗೆ ಹಂಚಿಕೊಂಡಿದೆ.

2023ನೇ ಸಾಲಿನ ವಿಶ್ವದ ಶಕ್ತಿಶಾಲಿ ಪಾಸ್ ಪೋರ್ಟ್ ಗಳ ಶ್ರೇಯಾಂಕವನ್ನು ಲಂಡನ್ ಮೂಲದ ವಲಸೆ ಸಲಹಾ ಸಂಸ್ಥೆ ಹೆನ್ಲಿ ಮಂಗಳವಾರ ಬಿಡುಗಡೆಗೊಳಿಸಿದೆ. ಈ ಶ್ರೇಯಾಂಕವು ಯಾವ ದೇಶದ ನಾಗರಿಕರು ಪ್ರಯಾಣಿಸಲು ಹೆಚ್ಚು ಮುಕ್ತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಮೂರು ಯುರೋಪಿಯನ್ ರಾಷ್ಟ್ರಗಳಾದ ಜರ್ಮನಿ, ಇಟಲಿ ಹಾಗೂ ಸ್ಪೇನ್ 190 ರಾಷ್ಟ್ರಗಳಿಗೆ ವೀಸಾಮುಕ್ತ ಪ್ರವೇಶ ಹೊಂದಿರುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿವೆ.

ಸೂರತ್‌ನ ಡೈಮಂಡ್‌ ಬೋರ್ಸ್‌ ವಿಶ್ವದಲ್ಲೇ ಬೃಹತ್‌ ಕಚೇರಿ! ಅಮೆರಿಕದ ಪೆಂಟಗನ್ ಹಿಂದಿಕ್ಕಿ ನಂ. 1 ಪಟ್ಟಕ್ಕೆ

ಇನ್ನು ವಿಶ್ವದ ಶಕ್ತಿಶಾಲಿ ಪಾಸ್ ಫೋರ್ಟ್ ಪಟ್ಟಿಯಲ್ಲಿ ದಶಕಗಳ ಹಿಂದೆ ಅಗ್ರಸ್ಥಾನದಲ್ಲಿದ್ದ ಅಮೆರಿಕ, ಈ ಬಾರಿ ಎರಡು ಸ್ಥಾನ ಕೆಳಗೆ ಜಾರುವ ಮೂಲಕ ಎಂಟನೇ ಸ್ಥಾನದಲ್ಲಿದೆ. ಇನ್ನು ಇಂಗ್ಲೆಂಡ್ ಎರಡು ಸ್ಥಾನ ಮೇಲಕ್ಕೇರುವ ಮೂಲಕ 4ನೇ ಸ್ಥಾನದಲ್ಲಿದೆ. 2017ರಲ್ಲಿ ಕೂಡ ಇಂಗ್ಲೆಂಡ್ ಈ ಪಟ್ಟಿಯಲ್ಲಿ ಇದೇ ಸ್ಥಾನದಲ್ಲಿತ್ತು. 

27 ತಾಣಗಳಿಗೆ ಮುಕ್ತ ಪ್ರವೇಶ ಹೊಂದಿರುವ ಅಫ್ಘಾನಿಸ್ಥಾನ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಮೂಲಕ ವಿಶ್ವದ ಅತ್ಯಂತ ದುರ್ಬಲ ಪಾಸ್ ಪೋರ್ಟ್ ಹೊಂದಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಇನ್ನು ಭಾರತದ ನೆರೆಯ ರಾಷ್ಟ್ರ ಪಾಕಿಸ್ಥಾನ 100ನೇ ಸ್ಥಾನದಲ್ಲಿದೆ. ಯೆಮೆನ್ 99, ಸಿರಿಯಾ 101 ಹಾಗೂ ಇರಾಕ್ 102ನೇ ಸ್ಥಾನಗಳಲ್ಲಿವೆ.

ವಿಶ್ವದ ಶಕ್ತಿಶಾಲಿ ಪಾಸ್ ಪೋರ್ಟ್ ಗಳ ಸೂಚ್ಯಂಕವನ್ನು ಹೆನ್ಲಿ ಹಾಗೂ ಪಾರ್ಟನರ್ಸ್ ಮುಖ್ಯಸ್ಥ ಡಾ.ಕ್ರಿಸ್ಟಿಯನ್ ಎಚ್. ಕೈಲಿನ್ ಸುಮಾರು 20 ವರ್ಷಗಳ ಹಿಂದೆ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಅಲ್ಲಿಂದ ಇಲ್ಲಿಯ ತನಕ ಪ್ರತಿವರ್ಷ ಈ ಸಂಸ್ಥೆ ವಿಶ್ವದ ಶಕ್ತಿಶಾಲಿ ಪಾಸ್ ಪೋರ್ಟ್ ಗಳ ಪಟ್ಟಿಯನ್ನು ಸಿದ್ಧಪಡಿಸಿ, ಬಿಡುಗಡೆಗೊಳಿಸುತ್ತ ಬಂದಿದೆ. ಈ ಸೂಚ್ಯಂಕವನ್ನು ಅಂತಾರಾಷ್ಟ್ರೀಯ ವಾಯುಯಾನ ಸಂಘಟನೆಯ (IATA) ಅಧಿಕೃತ ದಾಖಲೆಗಳನ್ನು ಆಧರಿಸಿ ಸಿದ್ಧಪಡಿಸಲಾಗುತ್ತದೆ. ಯಾವುದೇ ಪೂರ್ವಭಾವಿ ವೀಸಾ ಇಲ್ಲದೆ ಒಂದು ರಾಷ್ಟ್ರದ ಪಾಸ್ ಫೋರ್ಟ್ ಹೊಂದಿರುವ ವ್ಯಕ್ತಿ ಎಷ್ಟು ದೇಶಗಳನ್ನು ಭೇಟಿ ಮಾಡಬಹುದು ಎಂಬುದರ ಆಧಾರದಲ್ಲಿ ಸ್ಥಾನಗಳನ್ನು ನೀಡಲಾಗುತ್ತದೆ. 

ಈ ದಶಕದಲ್ಲೇ ಭಾರತ ಉದಯೋನ್ಮುಖ ಮಾರುಕಟ್ಟೆಯಾಗಲಿದ್ಯಾ? ಜಾಗತಿಕ ಉಜ್ವಲ ತಾಣ ಎನ್ನಲು ಈ 9 ಅಂಶಗಳೇ ಸಾಕ್ಷಿ!

ದೇಶದ ಹೊರಗೆ ಪ್ರಯಾಣಿಸಲು ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ಪಾಸ್ಪೋರ್ಟ್ ಅತ್ಯಗತ್ಯ. ಪಾಸ್ ಪೋರ್ಟ್ ಇಲ್ಲದೆ ನಮಗೆ ವಿದೇಶಗಳಿಗೆ ಪ್ರಯಾಣಿಸಲು ಸಾಧ್ಯವೇ ಇಲ್ಲ. ನಿಮ್ಮ ದೇಶದ ಪಾಸ್ಪೋರ್ಟ್ ಹೆಚ್ಚು ಶಕ್ತಿಶಾಲಿಯಾದಷ್ಟೂ, ನೀವು ವೀಸಾವಿಲ್ಲದೆ ಹೆಚ್ಚು ದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.