Asianet Suvarna News Asianet Suvarna News

ಸಿಇಓ ಸ್ಥಾನ ತೊರೆದ ಅಲಿಬಾಬ ಸ್ಥಾಪಕನ ನಂಬಲಸಾಧ್ಯ ಕಥೆ

 ಸುಮಾರು 38.6 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಅಂದರೆ ಸುಮಾರು 28 ಸಾವಿರ ಕೋಟಿಗಳ ಅಧಿಪತಿ. ಈತ ಅಲಿಬಾಬ ಕಂಪೆನಿಯನ್ನು ಆರಂಭಿಸಿ ಬೆಳೆಸಿದ್ದೇ ರೋಚಕ ಕಥೆ.

The Inspirational Story of Alibaba Founder Jack Ma
Author
Bengaluru, First Published Sep 15, 2018, 8:16 PM IST

*ಪ್ರಿಯಾ ಕೆರ್ವಾಶೆ

ಒಂದು ಸಣ್ಣ ಸೋಲಿಗೆ ಬಹಳ ಹತಾಶರಾಗುತ್ತೇವೆ. ಆತ್ಮಹತ್ಯೆ ಮಾಡಿಕೊಳ್ಳುವ ಲೆವೆಲ್‌ವರೆಗೂ ಯೋಚಿಸುತ್ತೇವೆ. ಬಹುಶಃ ನಮ್ಮ ರೀತಿಯಲ್ಲಿ ಯೋಚಿಸುತ್ತಿದ್ದರೆ ಜಾಕ್ ಮಾ ಸತ್ತು ಯಾವುದೋ ಕಾಲ ಆಗಿರುತ್ತಿತ್ತೇನೋ. ಏಕೆಂದರೆ, ಅವರು ಪ್ರೈಮರಿ ಶಾಲೆಯಲ್ಲಿ ಮೂರು ವರ್ಷ ಫೇಲ್, ಹೈಸ್ಕೂಲ್‌ನಲ್ಲೂ ಫೇಲ್. ಕಾಲೇಜಿಗೆ ವರ್ಷಕ್ಕೊಮ್ಮೆ ಎಂಟ್ರೆನ್ಸ್ ಎಕ್ಸಾಮ್ ನಡೆಯುತ್ತೆ. ಈತನಿಗೆ ಆ ಒಂದು ಎಂಟ್ರೆನ್ಸ್ ಎಕ್ಸಾಂನಲ್ಲಿ ಪಾಸ್ ಆಗಲು ನಾಲ್ಕು ವರ್ಷ ಬೇಕಾಯ್ತು. ಅಮೆರಿಕಾದ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ಗೆ ಗರಿಷ್ಠ 10 ಬಾರಿ ಎಂಟ್ರೆನ್ಸ್ ಎಕ್ಸಾಮ್ ಬರೆಯಬಹುದು. ಈತ ಅಷ್ಟರಲ್ಲೂ ಫೇಲ್. ಮುಂದೆ ಸುಮಾರು ಉದ್ಯೋಗಕ್ಕಾಗಿ ಸುಮಾರು 30 ಕಡೆ ಎಂಟ್ರೆನ್ಸ್ ಎಕ್ಸಾಂ ಬರೆದಿದ್ದು ಒಂದರಲ್ಲೂ ತೇರ್ಗಡೆಯ ಮಾರ್ಕ್ ಸಿಗಲಿಲ್ಲ. ಪೊಲೀಸ್ ಎಂಟ್ರೆನ್ಸ್ ಎಕ್ಸಾಂನಲ್ಲಂತೂ ‘ಯು ಆರ್ ನೋ ಗುಡ್’ ಎಂದು ಉಗಿಸಿಕೊಳ್ಳಬೇಕಾಯ್ತು.

ಇದು ಅಲಿಬಾಬ ಸಮೂಹ ಸಂಸ್ಥೆಗಳ ಸಂಸ್ಥಾಪಕ ಜಾಕ್ ಮಾ ಸೋಲಿನ ಸಣ್ಣ ಝಲಕ್. ಒಂದು ಕಾಲದ ಈ ಮಹಾ ನತದೃಷ್ಟ ಈಗ ಈತ ಚೀನಾ ಅತೀ ಶ್ರೀಮಂತ ವ್ಯಕ್ತಿ. ಸುಮಾರು 38.6 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಅಂದರೆ ಸುಮಾರು 28 ಸಾವಿರ ಕೋಟಿಗಳ ಅಧಿಪತಿ. ಈತ ಅಲಿಬಾಬ ಕಂಪೆನಿಯನ್ನು ಆರಂಭಿಸಿ ಬೆಳೆಸಿದ್ದೇ ರೋಚಕ ಕಥೆ.

ಇಷ್ಟೆಲ್ಲ ಸಾಧಿಸಿ ಚೀನಾದಲ್ಲಿ ಯಾರೂ ಏರದ ಎತ್ತರಕ್ಕೆ ಏರಿದ ಮೇಲೆ ಕಳೆದ ವಾರ ಹುದ್ದೆ ತ್ಯಜಿಸಿ ಸಮಾಜ ಸೇವೆ ಮಾಡ್ತೀನಿ ಅಂತ ಹೊರಟ ಮಹಾನುಭಾವ. ತಾನೇ ಕಟ್ಟಿ ಬೆಳೆಸಿದ ಅಲಿಬಾಬ ಸಾಮ್ರಾಜ್ಯದ ಹೊಣೆಗಾರಿಕೆಯನ್ನು ಇನ್ನೊಬ್ಬರ ಹೆಗಲಿಗೇರಿಸಿ ತಾನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾದದ್ದು ಈತನ ಉದಾರತೆಗೆ ಹಿಡಿದ ಕನ್ನಡಿ.

ಸೋಲಿನ ಬೂದಿಯಿಂದೇಳುವ ಫೀನಿಕ್ಸ್ ಜಾಕ್ ಮಾ ಜಾಕ್ ಮಾ ಹುಟ್ಟಿದ್ದು ಚೀನಾದ ಪ್ರವಾಸಿ ತಾಣವೊಂದರ ಸಮೀಪದ ಪಟ್ಟಣದಲ್ಲಿ. ಈತನ ತಂದೆ ತಾಯಿಗಳು ಹಾಡು-ಕಥೆ ಹೇಳುತ್ತಾ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ತನ್ನ ಊರಿಂದ ತುಸು ದೂರದಲ್ಲಿರುವ ಪ್ರವಾಸಿ ತಾಣ, ಅಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಬಗ್ಗೆ ಈತನಿಗೆ ಆಕರ್ಷಣೆ. ಜೊತೆಗೆ ಇಂಗ್ಲೀಷ್ ಬಗ್ಗೆಯೂ. ಅವರಿಂದ ಇಂಗ್ಲೀಷ್ ಕಲಿಯುತ್ತಾ, ಮಾತನಾಡುತ್ತಾ ಗೈಡ್‌ನಂತೆ ಕೆಲಸ ಮಾಡುತ್ತಿದ್ದ. ಈ ನಡುವೆ ಶಾಲೆಗೂ ಹೋಗಬೇಕಿತ್ತು. ಚುರುಕಾಗಿದ್ದರೂ ಕಲಿಕೆಯಲ್ಲಿ ದಡ್ಡನೆಂದು ಕರೆಸಿಕೊಂಡಿದ್ದ ಹುಡುಗ 3 ವರ್ಷ ಫೇಲ್ ಆದ. ಮುಂದೆ ಹೈಸ್ಕೂಲ್‌ಗೆ ಹೋದರೆ ಅಲ್ಲೂ ಸೋಲಿನ ಸರಣಿ ಮುಂದುವರಿದಿತ್ತು.

ಕಾಲೇಜ್‌ನಲ್ಲಿ ಎಂಟ್ರೆನ್ಸ್ ಎಕ್ಸಾಮ್ ಪಾಸಾಗಲಿಕ್ಕೇ 4 ವರ್ಷ ಬೇಕಾಯ್ತು. ಹೀಗೆಲ್ಲ ಸರ್ಕಸ್ ಮಾಡಿದ ಹುಡುಗನಿಗೆ ಅಮೆರಿಕಾದ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಓದುವ ಕನಸು. ಅದಕ್ಕಾಗಿ ಗರಿಷ್ಠ 10 ವರ್ಷ ಪ್ರವೇಶ ಪರೀಕ್ಷೆ ಬರೆದೂ ಪಾಸಾಗಲಿಲ್ಲ. ಕೆಲವು ವರ್ಷಗಳ ಬಳಿಕ ಅಲ್ಲಿ ಓದಿದವರು ಆರಂಭಿಸಿದ ಸ್ಟಾರ್ಟ್‌ಅಪ್‌ಗಳು ಮುಗ್ಗರಿಸುವಂತಾದಾಗ ಈತ ಅಲಿಬಾಬ ಕಂಪೆನಿ ಮೂಲಕ ಹೂಡಿಕೆ ಮಾಡಿ ಅವು ಚೇತರಿಸಿಕೊಳ್ಳುವಂತೆ ಮಾಡಿದ್ದು ಇನ್ನೊಂದು ಕಥೆ. ಈತನಿಗೆ ಯುನಿವರ್ಸಿಟಿಯಿಂದ ಉನ್ನತ ಪದವಿ ಸಿಕ್ಕಿದ್ದು 47ನೇ ಪ್ರಾಯದಲ್ಲಿ. 

ಒಂದು ಹಂತದ ಶಿಕ್ಷಣ ಪಡೆದ ಬಳಿಕ ಉದ್ಯೋಗ ಬೇಟೆ ಶುರುವಾಯ್ತು. ಚಿಕ್ಕ ದೊಡ್ಡ ಕಂಪೆನಿಗಳಲ್ಲಿ, ಸರ್ಕಾರಿ ಆಫೀಸ್‌ಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿದ್ದಾಯ್ತು. ಈತನ ಲಕ್ ಚೆನ್ನಾಗಿರಲಿಲ್ಲವೋ ಅಥವಾ ಅವರು ಬಯಸಿದ ಟ್ಯಾಲೆಂಟ್ ಈತನಲ್ಲಿರಲಿಲ್ಲವೋ ಗೊತ್ತಿಲ್ಲ. ಸುಮಾರು 30 ಕಡೆಗಳಲ್ಲಿ ಪ್ರವೇಶ ಪರೀಕ್ಷೆ ಬರೆದರೂ ಯಾವ ಕಂಪೆನಿಯೂ ಕೆಲಸಕ್ಕೆ ಕರೆಯಲಿಲ್ಲ. ಬದಲಿಗೆ ‘ಯು ಆರ್ ನೋ ಗುಡ್’ ಎಂಬ ಫೀಡ್‌ಬ್ಯಾಕ್ ಸಿಕ್ಕಿತು.

‘ನಮ್ಮೂರಿಗೆ ಕೆಎಫ್‌ಸಿ ಬಂದಾಗ ಅಲ್ಲೂ ಕೆಲಸ ಕೇಳಿಕೊಂಡು ಹೋಗಿದ್ದೆ. 24 ಜನ ಇಂಟರ್‌ವ್ಯೆಗೆ ಬಂದಿದ್ದರು. ಅವರಲ್ಲಿ 23 ಜನ ಸೆಲೆಕ್ಟ್ ಆದರು. ರಿಜೆಕ್ಟ್ ಆದ ಏಕೈಕ ಹುಡುಗ ನಾನಾಗಿದ್ದೆ..’ ಅಂತ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಜಾಕ್. 

ಇಂಟರ್‌ನೆಟ್ ಮೋಹ ಕಾಲೇಜೊಂದರಲ್ಲಿ ಇಂಗ್ಲೀಷ್ ಕಲಿಸುತ್ತಾ ಬದುಕು ಕಟ್ಟಿಕೊಂಡ ಜಾಕ್ ಮಾ ಮುಂದೆ ಟ್ರಾನ್ಸಲೇಟರ್ ಆಗಿಯೂ ದುಡಿಯುತ್ತಾರೆ. ಇದೇ ಹೊತ್ತಿಗೆ ಜಾಕ್ ಗೆ ಇಂಟರ್‌ನೆಟ್ ಪರಿಚಯವಾಗುತ್ತೆ. ಬಿಲಿಯನ್‌ಗಟ್ಟಲೆ ಜನರನ್ನು ಏಕಕಾಲಕ್ಕೆ ಸಂಪರ್ಕಿಸುವ ಈ ಆಧುನಿಕ ಜಾಲ ಅವರನ್ನು ಅಚ್ಚರಿಗೀಡುಮಾಡುತ್ತದೆ. ಇಂಟರ್‌ನೆಟ್ ಮೂಲಕ ಬ್ಯುಸಿನೆಸ್ ನಡೆಸಿ ಲಾಭ ಮಾಡಿಕೊಳ್ಳುವ ದಾರಿಗಳ ಬಗ್ಗೆ ಜಾಕ್ ಚಿಂತಿಸುತ್ತಾರೆ. 

ಚೀನಾದ ಸಣ್ಣ ಹಾಗೂ ಮಧ್ಯಮ ಎಂಟರ್‌ಪ್ರೈಸ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಕಾರ್ಯಕ್ಕೆ ಕೈ ಹಾಕುತ್ತಾರೆ. ಈ ನಿಟ್ಟಿನಲ್ಲಿ ಚೈನಾದ ಬಗ್ಗೆ ಹಾಗೂ ಚೈನೀಸ್ ಕಂಪೆನಿ ಪ್ರಾಡಕ್ಟ್‌ಗಳ ಬಗ್ಗೆ ಇಂಟರ್‌ನೆಟ್‌ನಲ್ಲಿ ವೆಬ್‌ಪೇಜ್ ಕ್ರಿಯೇಟ್ ಮಾಡಿ ಪ್ರಚಾರ ಮಾಡಲು ನಿರ್ಧರಿಸುತ್ತಾರೆ. ಈ ಹಿನ್ನೆಲೆಯಲ್ಲಿ 1995ರಲ್ಲಿ ಜಾಕ್ ಮಾ, ಈತನ ಪತ್ನಿ ಕ್ಯಾಥಿ ಹಾಗೂ ಗೆಳೆಯರು 20000 ಡಾಲರ್ ಹೂಡಿಕೆ ಮಾಡಿ ಆರಂಭಿಸಿದ ಕಂಪೆನಿ ‘ಚೈನಾ ಪೇಜಸ್’. 

ವೆಬ್ ಸೈಟ್ ಆರಂಭಿಸಿದ ಕೆಲವು ಸಮಯಕ್ಕೇ ವಿಶ್ವಮಟ್ಟದಿಂದ ಪ್ರತಿಕ್ರಿಯೆ ಬಂತು. ತಮ್ಮ ಕಂಪೆನಿಯನ್ನು ಪಾರ್ಟ್‌ನರ್ ಮಾಡಿಕೊಳ್ಳಬೇಕೆಂಬ ಬೇಡಿಕೆಯನ್ನೂ ಕೆಲವರು ಮುಂದಿಟ್ಟರು. ವಿಶ್ವವನ್ನೇ ಒಂದು ಜಾಲದಲ್ಲಿ ಬಂಧಿಸುವ ಈ ಇಂಟರ್‌ನೆಟ್ ಭವಿಷ್ಯದಲ್ಲಿ ಕ್ರಾಂತಿಯನ್ನೇ ಮಾಡಬಲ್ಲದು ಎಂಬುದು ಮನದಟ್ಟಾಯ್ತು.

‘ಆಗ ಇಂಟರ್‌ನೆಟ್ ಬಹಳ ಸ್ಲೋ ಇರುತ್ತಿತ್ತು. ಅರ್ಧ ಪೇಜ್ ಓಪನ್ ಆಗಲು ಮೂರೂವರೆ ಗಂಟೆ ಬೇಕಾಗುತ್ತಿತ್ತು. ಕುಡ್ಕೊಂಡು, ಟಿ.ವಿ ನೋಡ್ಕೊಂಡು, ಕಾರ್ಡ್ಸ್ ಆಡ್ಕೊಂಡು ಪೇಜ್‌ಗಾಗಿ ಕಾಯುತ್ತಿದ್ದೆವು. ಆದರೆ ಈ ಮೂಲಕ ಇಂಟರ್‌ನೆಟ್‌ನ ಅಗಾಧ ಸಾಧ್ಯತೆಯನ್ನು ಚೀನಾಕ್ಕೆ ತೋರಿಸಿದ ಬಗ್ಗೆ ನನಗೆ ಹೆಮ್ಮೆ ಇದೆ’ ಅನ್ನುತ್ತಾರೆ ಜಾಕ್. 

ಈ ಕಂಪೆನಿ ಅಂಥ ಲಾಭ ಮಾಡದಿದ್ದರೂ ಹಾಕಿದ ಬಂಡವಾಳಕ್ಕೇನೂ ಸಮಸ್ಯೆಯಾಗಲಿಲ್ಲ. ಮುಂದೆ ಚೀನಾ ಸರ್ಕಾರದ ಇಲಾಖೆಯೊಂದರಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದರು ಜಾಕ್. ಈ ವೇಳೆ ವಿಶ್ವದ ಪ್ರಭಾವಿ ವ್ಯಕ್ತಿಗಳ ಜೊತೆಗೆ ಸಂಪರ್ಕ ಸಾಧಿಸುವುದು ಸಾಧ್ಯವಾಯಿತು. 1999ರಲ್ಲಿ ಸರ್ಕಾರಿ ಉದ್ಯೋಗ ತ್ಯಜಿಸಿದರು. 

ಇಂಟರ್‌ನೆಟ್ ಅನ್ನು ಮೂಲವಾಗಿಟ್ಟುಕೊಂಡು ಎರಡನೆ ಪ್ರಯತ್ನಕ್ಕೆ ಕೈ ಹಾಕಿದರು. ಜಾಕ್ ಹಾಗೂ ಆತನ ಪತ್ನಿಯೂ ಸೇರಿ ಹದಿನೆಂಟು ಜನರ ಒಂದು ಗ್ರೂಪ್ ಸಿದ್ಧವಾಯ್ತು. ಚೈನಾ ಮೂಲದ ಸಣ್ಣ ಹಾಗೂ ಮಧ್ಯಮ ಮಟ್ಟದ ಕಂಪೆನಿಗಳ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವ ಹೊಸ ಕಂಪೆನಿ ‘ಅಲಿಬಾಬ’ ಅಸ್ತಿತ್ವಕ್ಕೆ ಬಂತು. 

ಆರಂಭದ ಹಂತದಲ್ಲಿ ಜಾಕ್ ಅಮೆರಿಕಾದ ಟೆಕ್‌ಹಬ್ ಸಿಲಿಕಾನ್ ವ್ಯಾಲಿಯಿಂದ ಫಂಡ್ ರೈಸ್ ಮಾಡಲು ತೀರ್ಮಾನಿಸಿದರು. ಆದರೆ ಇದು ತಿರಸ್ಕೃತವಾಯ್ತು. ಇದು ನಷ್ಟದ ಬಾಬತ್ತು, ಇಂಥ ಕಾಂಸೆಪ್ಟ್‌ಗಳನ್ನಿಟ್ಟು ಬ್ಯುಸಿನೆಸ್‌ನಲ್ಲಿ ಯಶಸ್ವಿಯಾಗೋದು ಕಷ್ಟ ಎಂಬ ಸಮಜಾಯಿಶಿ ಸಿಕ್ಕಿತು. ಅಷ್ಟಕ್ಕೇ ಜಾಕ್ ನಿರಾಶರಾಗಲಿಲ್ಲ. ಅದು ಅವರ ಪ್ರವೃತ್ತಿಯೂ ಅಲ್ಲ. ಅಲ್ಲಿ ಇಲ್ಲಿ ಫಂಡ್ ರೈಸ್ ಮಾಡುತ್ತಾ ಕಂಪೆನಿ ಮುನ್ನಡೆಸಿದರು. ಅಷ್ಟರಲ್ಲೇ ಅದೃಷ್ಟದ ಬಾಗಿಲು ತೆರೆಯಿತು. ಜಾಗತಿಕ ದೈತ್ಯ ಹೂಡಿಕೆದಾರ ಸಂಸ್ಥೆ ಗೋಲ್ಡ್‌ಮಾನ್ ಸಾಕ್ಸ್ ಅಲಿಬಾಬದಲ್ಲಿ ಹೂಡಿಕೆಗೆ ಮುಂದಾಯ್ತು. ಅದು 5 ಮಿಲಿಯನ್ ಡಾಲರ್ ಹಾಗೂ 20 ಮಿಲಿಯನ್ ಡಾಲರ್‌ಗಳ ಹೂಡಿಕೆ. ಕಂಪೆನಿಯ ಚಟುವಟಿಕೆ ಗರಿಗೆದರತೊಡಗಿತು.

ಅದು 2000ನೇ ಇಸವಿ. ಡಾಟ್‌ಕಾಮ್‌ಗಳ ಭರಾಟೆಗೆ ಹಠಾತ್ ಬ್ರೇಕ್ ಬಿತ್ತು. ಜಾಗತಿಕ ಮಟ್ಟದ ಈ ಹಿನ್ನಡೆ ಅಲಿಬಾಬ ಕಂಪೆನಿಗೆ ದೊಡ್ಡ ಸವಾಲು. ಜಾಕ್ ಮಾ ಕಂಪೆನಿಯನ್ನು ಮರು ಸಂಘಟಿಸುವಲ್ಲಿ ಯಶಸ್ವಿಯಾದರು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬ್ಯುಸಿನೆಸ್‌ಅನ್ನು ಚೈನಾದ ದೇಶೀ ಮಾರುಕಟ್ಟೆಗೆ ಶಿಫ್ಟ್ ಮಾಡಲಾಯ್ತು. ಒಂದು ಹಂತದ ಬಳಿಕ ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವ್ಯವಹಾರ ವಿಸ್ತರಣೆಯಾಯ್ತು.

2005ನೇ ಇಸವಿ ಅಲಿಬಾಬ ಕಂಪೆನಿಯ ಯಶಸ್ಸಿನ ಉತ್ತುಂಗಕ್ಕೇರಿದ ವರ್ಷ. ಯೂಹೂ ಕಂಪೆನಿ 1 ಬಿಲಿಯನ್ ಡಾಲರ್‌ಗಳಷ್ಟು ಬೃಹತ್ ಮೊತ್ತವನ್ನು ಅಲಿಬಾಬದಲ್ಲಿ ಹೂಡಿಕೆ ಮಾಡಿತು. ವಿಶ್ವದ ಸ್ಟಾರ್ಟ್‌ಅಪ್ ಗಳಲ್ಲಿ ಹಾಗೂ ಚಿಕ್ಕ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತ ತನ್ನ ಬ್ಯುಸಿನೆಸ್ ಅನ್ನು ಬೃಹತ್ ಮಟ್ಟಕ್ಕೆ ವಿಸ್ತರಿಸಿ ಜಗತ್ತಿನ ಅತೀದೊಡ್ಡ ಐಪಿಓ ಆಗಿ ಹೊರ ಹೊಮ್ಮಿದ್ದು ಜಾಕ್ ಚಾಣಾಕ್ಷತೆಗೆ ಹಾಗೂ ಪರಿಶ್ರಮಕ್ಕೆ ಸಂದ ಜಯ.

2014ಕ್ಕೆ 25 ಬಿಲಿಯನ್ ಡಾಲರ್‌ಗಳಷ್ಟು ಔನತ್ಯ ಸಾಧಿಸಿದ್ದು ಇಂದಿನವರೆಗೆ ವಿಶ್ವದ ಐಪಿಓಗಳಲ್ಲಿ ಮೊದಲ ಸ್ಥಾನ ಬಿಟ್ಟಕೊಡದಿರುವುದು ಅಲಿಬಾಬ ಹೆಗ್ಗಳಿಕೆ. ನ್ಯಾಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನ ಲಿಸ್ಟಿಂಗ್‌ನಲ್ಲಿ ಅಲಿಬಾಬ ಹೆಸರು ದಾಖಲಾಯ್ತು. 

ಅಲಿಬಾಬದ ಮೌಲ್ಯವೆಷ್ಟು?

ವಿಶ್ವದ ನಂ.1 ಓಪಿಓ ಆಗಿರುವ ಅಮೆರಿಕೇತರ ಸಂಸ್ಥೆ ಅಲಿಬಾಬದ ಒಟ್ಟು ಮೌಲ್ಯ 200 ಬಿಲಿಯನ್ ಡಾಲರ್ ಗಡಿ ದಾಟುತ್ತಿದೆ. ಚಿಕ್ಕ ಕಂಪೆನಿಗಳನ್ನೆಲ್ಲ ಅಲಿಬಾಬ ತನ್ನ ತೆಕ್ಕೆಗೆ ತೆಗೆದುಕೊಂಡು ದೈತ್ಯನಾಗಿ ಬೆಳೆಯುತ್ತಲೇ ಇದೆ. ಈ ಮೂಲಕ ಜಾಕ್ ವಿಶ್ವದ ಅತ್ಯಂತ ಯಶಸ್ವಿ ಬ್ಯುಸಿನೆಸ್‌ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಪೋರ್ಬ್ ಮ್ಯಾಗಜಿನ್‌ನ ಪ್ರಕಟಿಸಿದ ವಿಶ್ವದ ಪವರ್‌ಫುಲ್ ಮ್ಯಾನ್‌ಗಳ ಪಟ್ಟಿಯಲ್ಲಿ ಜಾಕ್ ಮಾ ಅವರಿಗೆ 2ನೇ ಸ್ಥಾನ.  
 

Follow Us:
Download App:
  • android
  • ios