ಅಮೆರಿಕದ ಪ್ರತಿಷ್ಠಿತ ಕಂಪನಿ ವಾಲ್‌ಮಾರ್ಟ್‌ ಒಡೆತನದಲ್ಲಿರುವ ಫ್ಲಿಪ್‌ಕಾರ್ಟ್‌, ರಿಲಯನ್ಸ್‌ ಬೆಂಬಲ ಹೊಂದಿರುವ ಡುಂಜೋ ಕಂಪನಿಯನ್ನು ಖರೀದಿಸಲು ಮುಂದಾಗಿದೆ ಎನ್ನುವ ವರದಿಗಳಿವೆ. 

ಬೆಂಗಳೂರು (ಫೆ.21): ಭಾರತದ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ಅನ್ನು ಖರೀದಿ ಮಾಡುವ ಮೂಲಕ ದೇಶದ ಮಾರುಕಟ್ಟೆಗೆ ಪ್ರವೇಶಿಸಿರುವ ವಾಲ್‌ಮಾರ್ಟ್‌ ಮತ್ತೊಂದು ದೊಡ್ಡ ಡೀಲ್‌ನ ಮೂಲಕ ಸುದ್ದಿಯಾಗಿದೆ. ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಹೆಸರಿನಲ್ಲಿಯೇ ವ್ಯವಹಾರ ಮುಂದುವರಿಸಿರುವ ವಾಲ್‌ಮಾರ್ಟ್‌ ಆನ್‌ ಡಿಮಾಂಡ್‌ ಡೆಲಿವರಿ ಫ್ಲಾಟ್‌ಫಾರ್ಮ್‌ ಆಗಿರುವ ಡುಂಜೋ ಖರೀದಿ ಮಾಡಲು ಮುಂದಾಗಿದೆ ಎನ್ನುವ ಮಾಹಿತಿಗಳಿವೆ. ಈ ಕುರಿತಾಗಿ ಟೆಕ್‌ಕ್ರಂಚ್‌ ವರದಿ ಮಾಡಿದ್ದು, ಇದರ ಬಗ್ಗೆ ತಿಳಿದಿರುವ ಮೂವರು ವ್ಯಕ್ತಿಗಳ ಮೂಲವನ್ನು ಆಧರಿಸಿ ವರದಿ ಮಾಡಿದೆ. ಈ ಒಪ್ಪಂದ ಇನ್ನೂ ಮಾತುಕತೆಯ ಹಂದಲ್ಲಿದೆ. ಡುಂಜೋ ಕಂಪನಿಯ ಮಾಲೀಕತ್ವದ ರಚನೆಯಲ್ಲಿನ ಕೆಲ ಸಮಸ್ಯೆಗಳ ಕಾರಣದಿಂದಾಗಿ ಒಪ್ಪಂದದ ಬಗ್ಗೆ ಈಬರೆಗೂ ಒಂದು ನಿರ್ಧಾರದಕ್ಕೆ ಬರಲು ಎರಡೂ ಕಂಪನಿಗಳಿಗೆ ಅಡ್ಡಿಯಾಗಿದೆ ಎನ್ನಲಾಗಿದೆ. ರಿಯಲನ್ಸ್‌ ಇಂಡಸ್ಟ್ರೀಸ್‌ನ ರಿಟೇಲ್‌ ವಿಭಾಗ, 2022ರಲ್ಲಿ 200 ಮಿಲಿಯನ್‌ ಯುಎಸ್‌ ಡಾಲರ್‌ಗೆ ಡುಂಜೋ ಕಂಪನಿಯಲ್ಲಿ ಶೇ. 26ರಷ್ಟು ಷೇರುಗಳನ್ನು ಖರೀದಿ ಮಾಡಿತ್ತು. ಆದರೆ, ಈ ಒಪ್ಪಂದಕ್ಕೆ ರಿಲಯನ್ಸ್‌ ಇನ್ನೂ ಅಂತಿಮ ಮುದ್ರೆ ಹಾಕಿಲ್ಲ.

ಇನ್ನು ಡುಂಜೋ ಮಾತ್ರ ಈ ಸುದ್ದಿಯನ್ನು ನಿರಾಕರಿಸಿದೆ. "ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಂಪನಿಗಳೊಂದಿಗೆ ನಾವು ಯಾವುದೇ ರೀತಿಯ ಮಾತುಕತೆಯನ್ನು ಹೊಂದಿಲ್ಲ" ಎಂದು ತಿಳಿಸಿದೆ. ಇನ್ನೊಂದೆಡೆ ಫ್ಲಿಪ್‌ಕಾರ್ಟ್‌ ಆಗಲಿ, ವಾಲ್‌ಮಾರ್ಟ್‌ ಆಗಲಿ ಈ ಸುದ್ದಿಯನ್ನೂ ನಿಜವಾಗಲಿ, ಸುಳ್ಳು ಎಂದಾಗಲಿ ಹೇಳಿಲ್ಲ. ಆರ್ಥಿಕ ಹಿನ್ನಡೆಯಲ್ಲಿರುವ ಡುಂಜೋ ಕಂಪನಿಗೆ ಆಲ್ಫಾಬೆಟ್‌ (ಗೂಗಲ್‌) ಬೆಂಬಲವೂ ಇದೆ. ಅಂದಾಜು ಕಳೆದ ಒಂದು ವರ್ಷದಿಂದ ಡುಂಜೋ ಕಂಪನಿಯ ಆರ್ಥಿಕ ಸ್ಥಿತಿ ಸರಿಯಾಗಲ್ಲ. ಇದೇ ಕಾರಣಕ್ಕಾಗಿ ಕೆಲ ದಿನಗಳ ಹಿಂದೆ ಸ್ಟಾರ್ಟ್‌ಅಪ್‌, ತನ್ನ ನೌಕರರನ್ನು ವಜಾ ಮಾಡಿದ್ದಲ್ಲದೆ, ಉದ್ಯೋಗಿಗಳ ವೇತನವನ್ನು ಕೆಲ ತಿಂಗಳ ಕಾಲ ತಡೆಹಿಡಿದಿತ್ತು. ಕಳೆದ ಕೆಲ ವರ್ಷದಲ್ಲಿ ಈ ಸ್ಟಾರ್ಟ್‌ಅಪ್‌ನ ನಿರ್ದೇಶಕ ಮಂಡಳಿಯ ಪ್ರಮುಖ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಇದರ ಸಹ ಸಂಸ್ಥಾಪಕರಾಗಿರುವ ದಲವೀರ್‌ ಸೂರಿ ಕೂಡ ರಾಜೀನಾಮೆ ನೀಡಿದ್ದಾರೆ.

ವರದಿಯ ಪ್ರಕಾರ, ಫ್ಲಿಪ್‌ಕಾರ್ಟ್ ಮತ್ತು ಡಂಜೊ ನಡುವಿನ ಸ್ವಾಧೀನ ಮಾತುಕತೆಗಳು ಇನ್ನೂ ನಡೆಯುತ್ತಿವೆ. ಹಾಗಿದ್ದರೂ, ಒಪ್ಪಂದವು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಏಕೆಂದರೆ ಫ್ಲಿಪ್‌ಕಾರ್ಟ್ ಸ್ವಾಧೀನಪಡಿಸಿಕೊಳ್ಳುವ ಮೂಲಕ ಏನನ್ನು ಸಾಧಿಸಬಹುದು ಎನ್ನುವ ಬಗ್ಗೆ ಗೊಂದಲದಲ್ಲಿದೆ ಎನ್ನಲಾಗಿದೆ. ರಿಲಯನ್ಸ್ ರಿಟೇಲ್‌ ಜೊತೆ ಡುಂಜೋ ದೊಡ್ಡ ಸಂಬಂಧ ಹೊಂದಿದೆ. ಇಲ್ಲಿಯವರೆಗೂ ರಿಲಯನ್ಸ್‌ ಗ್ರೂಪ್‌ ಈ ಡೀಲ್‌ಗೆ ತನ್ನ ಸಹಮತಿ ವ್ಯಕ್ತಪಡಿಸಿಲ್ಲ. ವರದಿಯ ಪ್ರಕಾರ, ಫ್ಲಿಪ್‌ಕಾರ್ಟ್ ಹೈಪರ್‌ಲೋಕಲ್ ಡೆಲಿವರಿ ಸಂಸ್ಥೆಯ ವ್ಯವಹಾರದಿಂದ ವ್ಯಾಪಾರದ ಕೊಡುಗೆಗಳನ್ನು ಒಳಗೊಂಡಂತೆ ಡಂಜೊದ ಕೆಲವು ಸ್ವತ್ತುಗಳಲ್ಲಿ ಮೌಲ್ಯವನ್ನು ಕಂಡಿದೆ.

ಅಂಥಾ ಅಂಬಾನಿ ಬಳೀನೂ ದುಡ್ಡಿಲ್ವಾ..ಒಡೆತನದ ಸಂಸ್ಥೆಯಲ್ಲಿ ಬಿಕ್ಕಟ್ಟು, ಸ್ಯಾಲರಿ ಸಿಗದೆ ಉದ್ಯೋಗಿಗಳು ಕಂಗಾಲು!

2015ರಲ್ಲಿ ಕಬೀರ್‌ ಬಿಸ್ವಾಸ್‌, ದಲ್‌ವೀರ್‌ ಸೂರಿ, ಮುಕುಂದ್‌ ಝಾ ಹಾಗೂ ಅಂಕುರ್‌ ಅಗರ್‌ವಾಲ್‌ ಅವರಿಂದ ಡುಂಜೋ ಸ್ಥಾಪನೆಯಾಗಿತ್ತು. ಗ್ರಾಹಕರು ತಮ್ಮ ದಿನನಿತ್ಯದ ದಿನಸಿ ವಸ್ತುಗಳನ್ನು ಸಮೀಪದ ಅಂಗಡಿಯಲ್ಲಿ ಖರೀದಿಸಿದ್ದಲ್ಲಿ ಅದನ್ನು ಮನೆಗೆ ತಲುಪಿಸುವ ಸಹಾಯವನ್ನು ಡುಂಜೋ ಮಾಡುತ್ತಿತ್ತು. ದಿನಸಿ ಮಾತ್ರವಲ್ಲದೆ, ಔಷಧ ಮತ್ತು ಆಹಾರ, ಅಗತ್ಯ ಸಾಮಗ್ರಿಗಳನ್ನು ಡುಂಜೋ ತಲುಪಿಸುತ್ತಿತ್ತು. ಡುಂಜೋ ಡೈಲಿ ಮೂಲಕ ಇನ್ನೊಂದು ಸಾಹಸಕ್ಕೆ ಕಂಪನಿ ಕೈಹಾಕಿದರೂ, ಇದು ಹೆಚ್ಚಿನ ನಷ್ಟಕ್ಕೆ ಕಾರಣವಾಯಿತು.

ವಾಟ್ಸಾಪ್‌ ಗ್ರೂಪ್‌ನಲ್ಲಿ ನಡೆಸ್ತಿದ್ದ ಬಿಸಿನೆಸ್‌ಗೆ 1600 ಕೋಟಿ ಹೂಡಿಕೆ ಮಾಡಿದ ಮುಕೇಶ್ ಅಂಬಾನಿ, ಬಂದ ಲಾಭವೆಷ್ಟು?