Asianet Suvarna News Asianet Suvarna News

Nano Plant in Singur: ಮಮತಾ ಬ್ಯಾನರ್ಜಿಗೆ ಮುಖಭಂಗ, ಟಾಟಾ ಮೋಟಾರ್ಸ್‌ಗೆ 1356 ಕೋಟಿ ಪಾವತಿಸಲು ಆದೇಶ!

ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿ ಟಾಟಾ ಮೋಟಾರ್ಸ್‌ನ ನ್ಯಾನೋ ಪ್ಲ್ಯಾಂಟ್‌ಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದೆ. ಮೂವರು ಸದಸ್ಯರ ಆರ್ಬಿಟ್ರಲ್ ಟ್ರಿಬ್ಯೂನಲ್ ಈ ಕೇಸ್‌ನಲ್ಲಿ ಟಾಟಾ ಮೋಟಾರ್ಸ್‌ ಪರವಾಗಿ ತೀರ್ಪು ನೀಡಿದೆ.

Tata Motors wins Singur plant arbitration says West Bengal Need to pay 1356 crore san
Author
First Published Oct 30, 2023, 8:40 PM IST

ನವದೆಹಲಿ (ಅ.30): ದೇಶದ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾಗಿರುವ ದೇಶದ ಹೆಮ್ಮೆಯ ಟಾಟಾ ಮೋಟಾರ್ಸ್‌ ಕಂಪನಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತಾನು ಹೂಡಿದ್ದ ಪ್ರತಿಷ್ಠಿತ ದಾವೆಯನ್ನು ಗೆದ್ದುಕೊಂಡಿದೆ. ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿನ ನ್ಯಾನೋ ಕಾರುಗಳ ಫ್ಯಾಕ್ಟರಿ ಸ್ಥಾಪಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್‌ ದೊಡ್ಡ ಮಟ್ಟದ ಹೂಡಿಕೆ ಮಾಡಿತ್ತು. ನ್ಯಾನೋ ಕಾರುಗಳ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಸಿಂಗೂರ್‌ ಪ್ಲ್ಯಾಂಟ್‌ನಲ್ಲಿ ಟಾಟಾ ಮೋಟಾರ್ಸ್‌ ಅಂದು 766 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ಅದರೆ, ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಅಂದು ವಿರೋಧ ಪಕ್ಷದಲ್ಲಿದ್ದರು) ನೇತೃತ್ವದಲ್ಲಿ ಇದಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿ ಬಳಿಕ ಟಾಟಾ ಮೋಟಾರ್ಸ್‌ ಈ ಪ್ಲ್ಯಾಂಟ್‌ಅನ್ನು ಗುಜರಾತ್‌ಗೆ ಶಿಫ್ಟ್‌ ಮಾಡಿತ್ತು. ಆದರೆ ಸಿಂಗೂರ್‌ನಲ್ಲಿ ಹೂಡಿಕೆ ಮಾಡಿದ್ದ 766 ಕೋಟಿ ರೂಪಾಯಿ ಪಡೆಯುವ ನಿಟ್ಟಿನಲ್ಲಿ  ಆರ್ಬಿಟ್ರಲ್ ಟ್ರಿಬ್ಯೂನಲ್‌ನಲ್ಲಿ ದಾವೆ ಹೂಡಿತ್ತು. ಸೋಮವಾರ ಇದರ ತೀರ್ಪು ಬಂದಿತ್ತು. ಮೂವರು ಸದಸ್ಯರ ಟ್ರಿಬ್ಯೂನಲ್‌ ಟಾಟಾ ಮೋಟಾರ್ಸ್ ಪರವಾಗಿ ಅವಿರೋಧ ತೀರ್ಪು ನೀಡಿದೆ. ಇದು ಪಶ್ಚಿಮ ಬಂಗಾಳ ಸರ್ಕಾರದ ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳ ಇಲಾಖೆಯ ನೋಡಲ್ ಏಜೆನ್ಸಿಯಾದ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧದ ವಿಚಾರಣೆಯ ಅಂತ್ಯವನ್ನು ಸೂಚಿಸಿದೆ.

ಮೂವರು ಸದಸ್ಯರ ಆರ್ಬಿಟ್ರಲ್ ಟ್ರಿಬ್ಯೂನಲ್ ಟಾಟಾ ಮೋಟಾರ್ಸ್ ಪರವಾಗಿ ಸರ್ವಾನುಮತದಿಂದ ತೀರ್ಪು ನೀಡಿತು. WBIDC ಯಿಂದ ಯಾವ ದಿನ ಟಾಟಾ ಮೋಟಾರ್ಸ್‌ ಸಂಪೂರ್ಣ ಹಣವನ್ನು ವಾಪಾಸ್‌ ಪಡೆಯುತ್ತದೆಯೋ ಅಲ್ಲಿಯವರೆಗಿನ ದಿನಕ್ಕೆ 2016 ಸೆಪ್ಟೆಂಬರ್‌ 1 ರಿಂದ ಪ್ರತಿ ವರ್ಷಕ್ಕೆ ಶೇ. 11ರಷ್ಟು ಬಡ್ಡಿಯೊಂದಿಗೆ ಮೂಲ ಹಣವನ್ನು ನೀಡಬೇಕು ಎಂದು ಆದೇಶ ನೀಡಲಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ಈ ಬಗ್ಗೆ ಬಿಎಸ್‌ಇಗೆ ಮಾಹಿತಿ ನೀಡಿದೆ “ಟಾಟಾ ಮೋಟಾರ್ಸ್ ಲಿಮಿಟೆಡ್ (ಟಿಎಂಎಲ್) ಮತ್ತು ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಡಬ್ಲ್ಯುಬಿಐಡಿಸಿ) ನಡುವಿನ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ, ವಿವಿಧ ಮುಖ್ಯಸ್ಥರ ಅಡಿಯಲ್ಲಿ ಡಬ್ಲ್ಯುಬಿಐಡಿಸಿಯಿಂದ ಟಿಎಂಎಲ್‌ನ ಪರಿಹಾರದ ಕ್ಲೈಮ್‌ಗೆ ಸಂಬಂಧಿಸಿದಂತೆ, ಬಂಡವಾಳ ಹೂಡಿಕೆಯ ನಷ್ಟದ ಕಾರಣ, ಸಿಂಗೂರ್ (ಪಶ್ಚಿಮ ಬಂಗಾಳ) ನಲ್ಲಿರುವ ವಾಹನ ತಯಾರಿಕಾ ಸೌಲಭ್ಯಕ್ಕೆ ಸಂಬಂಧಿಸಿದಂತೆ, ಮೂರು ಸದಸ್ಯರ ಮಧ್ಯಸ್ಥಿಕೆ ನ್ಯಾಯಮಂಡಳಿಯ ಮುಂದೆ ಹೇಳಲಾದ ಬಾಕಿ ಉಳಿದಿರುವ ಆರ್ಬಿಟ್ರಲ್ ಪ್ರಕ್ರಿಯೆಗಳನ್ನು ಅಂತಿಮವಾಗಿ ಸರ್ವಾನುಮತದ 2023ರ ಅಕ್ಟೋಬರ್‌ 30ರಂದು ವಿಲೇವಾರಿ ಮಾಡಲಾಗಿದೆ. ಹಾಗೂ ಇದು ಟಿಎಂಎಲ್‌ ಪರವಾಗಿ ಬಂದಿದೆ' ಎಂದು ತಿಳಿಸಿದೆ.

7 ವರ್ಷಗಳಲ್ಲಿ (ಸೆಪ್ಟೆಂಬರ್ 1, 2016 - ಸೆಪ್ಟೆಂಬರ್ 1, 2023) 11% ರಷ್ಟು ಎಂದು ಲೆಕ್ಕಾಚಾರ ಮಾಡಿದರೆ, 766 ಕೋಟಿ ರೂಪಾಯಿಗೆ 589.65 ಕೋಟಿ ರೂಪಾಯಿ ಬಡ್ಡಿ ಆಗುತ್ತದೆ. ಇದರಿಂದಾಗಿ ಪಶ್ಚಿಮ ಬಂಗಾಳ ಸರ್ಕಾರ ಟಾಟಾ ಮೋಟಾರ್ಸ್‌ಗೆ ನೀಡಬೇಕಿರುವ ಸದ್ಯದ ಮೊತ್ತ ₹1,355.43 ಕೋಟಿ ರೂಪಾಯಿ. ಆದರೆ, ಆರ್ಬಿಟಲ್‌ ಹೇಳಿರುವ ಅನುಸಾರ, ಪಾವತಿ ಮಾಡುವ ದಿನದವರೆಗೂ ಬಡ್ಡಿ ಅನ್ವಯವಾಗುವ ಕಾರಣ ಈ ಮೊತ್ತ ಇನ್ನಷ್ಟು ಏರಿಕೆ ಆಗುವ ಸಾಧ್ಯತೆಯೂ ಇದೆ. ಇದರ ಜೊತೆಗೆ, ಟಾಟಾ ಮೋಟಾರ್ಸ್‌ಗೆ ಪ್ರಕ್ರಿಯೆಯ ವೆಚ್ಚಕ್ಕೆ ₹ 1 ಕೋಟಿ ವಸೂಲಿ ಮಾಡಲು ಅನುಮತಿ ನೀಡಲಾಗಿದೆ.

ಬಂಗಾಳದಿಂದ ಟಾಟಾ ಓಡಿಸಿದ್ದು ಸಿಪಿಎಂ, ನಾನಲ್ಲ : ಮಮತಾ ಬ್ಯಾನರ್ಜಿ

2018ರಲ್ಲಿ ಟಾಟಾ ಮೋಟಾರ್ಸ್‌ ಕಂಪನಿ ನ್ಯಾನೋ ಕಾರ್‌ಗಳ ಉತ್ಪಾದನೆಯನ್ನು ನಿಲ್ಲಿಸಿದೆ. (2018ರಲ್ಲಿ ಗುಜರಾತ್‌ನ ಸಾನಂದ್‌ ಪ್ಲ್ಯಾಂಟ್‌ನಲ್ಲಿ ಕೇವಲ 1 ನ್ಯಾನೋ ಕಾರ್‌ಅನ್ನು ಉತ್ಪಾದನೆ ಮಾಡಿತ್ತು) ಪ್ರಸ್ತುತ ಗುಜರಾತ್‌ನಲ್ಲಿರುವ ಪ್ಲ್ಯಾಂಟ್‌ ಟಾಟಾ ಟಿಯಾಗೋ ಮತ್ತು ಟಿಗೋರ್‌ನಂಥ ಇತರ ಹ್ಯಾಚ್‌ ಬ್ಯಾಕ್‌ ಕಾರುಗಳನ್ನು ಉತ್ಪಾದನೆ ಮಾಡುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಟಾಟಾ ಕಂಪೆನಿಗೆ ತೀವ್ರ ಹಿನ್ನಡೆ, ಟಿಎಂಸಿಗೆ ಜಯ

Follow Us:
Download App:
  • android
  • ios