ಪ್ರತಿ ಈಕ್ವಿಟಿ ಷೇರಿಗೆ 2ರೂ. ಡಿವಿಡೆಂಡ್ ಘೋಷಿಸಿದ ಟಾಟಾ ಮೋಟಾರ್ಸ್; ಹಂಚಿಕೆ ಯಾವಾಗ?
ಟಾಟಾ ಮೋಟಾರ್ಸ್ ತನ್ನ ಷೇರುದಾರರಿಗೆ ಶುಭ ಸುದ್ದಿ ನೀಡಿದೆ. 2023ರ ಮಾರ್ಚ್ 31ಕ್ಕೆ ಅಂತ್ಯವಾದ ಹಣಕಾಸು ಸಾಲಿನ ಅಂತಿಮ ಡಿವಿಡೆಂಡ್ ಅನ್ನು ಅರ್ಹ ಸದಸ್ಯರಿಗೆ ಹಂಚಿಕೆ ಮಾಡುವ ದಿನಾಂಕದ ಬಗ್ಗೆ ಟಾಟಾ ಮೋಟಾರ್ಸ್ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಹಾಗಾದ್ರೆ ಯಾವಾಗ ಡಿವಿಡೆಂಡ್ ಹಂಚಿಕೆ ಮಾಡಲಾಗುತ್ತದೆ?
ನವದೆಹಲಿ (ಜೂ.12): ದೇಶದ ಜನಪ್ರಿಯ ವಾಹನ ಉತ್ಪಾದಕ ಸಂಸ್ಥೆ ಟಾಟಾ ಮೋಟಾರ್ಸ್ ತನ್ನ ಷೇರುದಾರರಿಗೆ ಡಿವಿಡೆಂಡ್ ವಿತರಣೆ ದಿನಾಂಕವನ್ನು ಘೋಷಿಸಿದೆ. 2023ರ ಮಾರ್ಚ್ 31ಕ್ಕೆ ಅಂತ್ಯವಾದ ಹಣಕಾಸು ಸಾಲಿನ ಅಂತಿಮ ಡಿವಿಡೆಂಡ್ ಅನ್ನು ಅರ್ಹ ಸದಸ್ಯರಿಗೆ ಹಂಚಿಕೆ ಮಾಡುವ ದಿನಾಂಕದ ಬಗ್ಗೆ ಟಾಟಾ ಮೋಟಾರ್ಸ್ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಕಳೆದ ಮೇ 12ರಂದು ನಡೆದ ಸಭೆಯಲ್ಲಿ 2ರೂ. ಮುಖಬೆಲೆ ಹೊಂದಿರುವ ಪ್ರತಿ ಸಾಮಾನ್ಯ ಷೇರಿಗೆ 2ರೂ. ಅಂತಿಮ ಡಿವಿಡೆಂಡ್ ಹಾಗೂ 2ರೂ. ಮುಖಬೆಲೆಯ 'ಎ' ಸಾಮಾನ್ಯ ಪ್ರತಿ ಷೇರಿಗೆ 2.10ರೂ. ಡಿವಿಡೆಂಡ್ ಘೋಷಿಸುವಂತೆ ನಿರ್ದೇಶಕರ ಮಂಡಳಿ ಶಿಫಾರಸ್ಸು ಮಾಡಿತ್ತು. ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ ಇ) ಫೈಲಿಂಗ್ ನಲ್ಲಿ ಉಲ್ಲೇಖಿಸಿರುವ ಕಂಪನಿ, ಅಂತಿಮ ಡಿವಿಡೆಂಡ್ ಅನ್ನು ನಿರ್ಧರಿತ ಅರ್ಹ ಸದಸ್ಯರಿಗೆ ನೀಡಲು ಜುಲೈ 29 ಅನ್ನು ರೆಕಾರ್ಡ್ ದಿನಾಂಕವನ್ನಾಗಿ ನಿಗದಿ ಮಾಡಿರೋದಾಗಿ ಮಾಹಿತಿ ನೀಡಿದೆ. ಅಲ್ಲದೆ, ಈ ಕಾರಣಕ್ಕೆ ಲಿಸ್ಟಿಂಗ್ ನಿಯಮಗಳ 42ನೇ ನಿಯಮದ ಅಡಿಯಲ್ಲಿ ಸದಸ್ಯರ ನೋಂದಣಿ ಹಾಗೂ ಕಂಪಿಯ ಷೇರು ವರ್ಗಾವಣೆ ಪುಸ್ತಕಗಳನ್ನು ಜುಲೈ 29ರ ಶನಿವಾರದಿಂದ ಆಗಸ್ಟ್ 8ರ ಮಂಗಳವಾರದ ತನಕ ಕ್ಲೋಸ್ ಮಾಡಲಾಗುವುದು ಎಂದು ಟಾಟಾ ಮೋಟಾರ್ಸ್ ಬಿಎಸ್ ಇ ಫೈಲಿಂಗ್ ನಲ್ಲಿ ತಿಳಿಸಿದೆ.
ಇನ್ನು ಡಿವಿಡೆಂಡ್ ಪಾವತಿ ಟಿಡಿಎಸ್ ಕಡಿತಕ್ಕೆ ಒಳಪಡಲಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಇನ್ನು ಈ ಡಿವಿಡೆಂಡ್ ಗಳ ಪಾವತಿ ಮಂಡಳಿಯ ಅನುಮೋದನೆಗೆ ಒಳಪಟ್ಟಿದ್ದು, ಷೇರುದಾರರಿಗೆ ಆಗಸ್ಟ್ 14 ಅಥವಾ ಆ ದಿನದಿಂದ ಹಂಚಿಕೆ ಮಾಡಲಾಗುವುದು ಎಂದು ಟಾಟಾ ಮೋಟಾರ್ಸ್ ಮಾಹಿತಿ ನೀಡಿದೆ.
ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್ ಜು.10ಕ್ಕೆ ಬಿಡುಗಡೆ, ಬೆಲೆ 6 ಲಕ್ಷ ರೂ!
ನಾಲ್ಕನೇ ತ್ರೈಮಾಸಿಕದಲ್ಲಿ 5,408 ಕೋಟಿ ರೂ. ಲಾಭ
ಟಾಟಾ ಮೋಟಾರ್ಸ್ ಮೇ 12ರಂದು ತನ್ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದೆ. ಅದರಲ್ಲಿ 2023ರ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ 5,408 ಕೋಟಿ ರೂ. ನಿವ್ವಳ ಲಾಭವನ್ನು ತೋರಿಸಲಾಗಿದೆ. 2021-22ನೇ ಹಣಕಾಸು ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 1,033 ಕೋಟಿ ರೂ. ನಿವ್ವಳ ನಷ್ಟವಾಗಿರುವ ಬಗ್ಗೆ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಟಾಟಾ ಮೋಟಾರ್ಸ್ ಮಾಹಿತಿ ನೀಡಿದೆ. ಇನ್ನು ಕಾರ್ಯನಿರ್ವಹಣೆಯಿಂದ ಕಂಪನಿಗೆ ನಾಲ್ಕನೇ ತ್ರೈಮಾಸಿಕದಲ್ಲಿ ಬಂದಿರುವ ಒಟ್ಟು ಆದಾಯ 1,05,932 ಕೋಟಿ ರೂ. ಒಂದು ವರ್ಷದ ಹಿಂದೆ ಇದು 78.439 ಕೋಟಿ ರೂ. ಆಗಿತ್ತು ಎಂದು ಕಂಪನಿ ತಿಳಿಸಿದೆ.
ಬರೀ ಒಂದೇ ತಿಂಗಳಲ್ಲಿ ಟಾಟಾ ಸಮೂಹದ ಈ ಷೇರಿನಿಂದ 692 ಕೋಟಿ ಗಳಿಸಿದ ರೇಖಾ ಜುಂಜುನ್ ವಾಲಾ
ಹೆಚ್ಚುವರಿ ನಿರ್ದೇಶಕರಾಗಿ ಓಂ ಪ್ರಕಾಶ್ ಭಟ್ ಮರುನೇಮಕ
ಟಾಟಾ ಮೋಟಾರ್ಸ್ ಮೇ 6ರಂದು ಎಸ್‌ಬಿಐ (SBI)ಮಾಜಿ ಅಧ್ಯಕ್ಷ ಓಂ ಪ್ರಕಾಶ್ ಭಟ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ಮರುನೇಮಕಗೊಳಿಸಿದೆ. ಮಾರ್ಚ್ 7, 2026 ರವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದಲ್ಲಿ ಕಂಪನಿಯ ಆಡಳಿತ ಮಂಡಳಿಯು ಪ್ರಕಾಶ್ ಭಟ್ ಅವರನ್ನು ಹೆಚ್ಚುವರಿ ಕಾರ್ಯನಿರ್ವಾಹಕರಲ್ಲದ ಹುದ್ದೆಗೆ ನೇಮಕ ಮಾಡಲು ಅನುಮೋದನೆ ನೀಡಿದೆ. 2022ರ ಮೇ 9ರಿಂದ ಸತತ ಎರಡನೇ ಅವಧಿಗೆ ಸ್ವತಂತ್ರ ನಿರ್ದೇಶಕರಾಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ಬಿಎಸ್ ಇಗೆ (BSE) ಸಲ್ಲಿಕೆ ಮಾಡಿದ ಫೈಲಿಂಗ್‌ನಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ಅವರು ಮೇ 9, 2017 ರಿಂದ ಮೇ 8, 2022 ರವರೆಗೆ ಅಂದರೆ ಒಟ್ಟು ಐದು ವರ್ಷಗಳ ಅವಧಿಗೆ ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರು ಇದಕ್ಕೂ ಮುನ್ನ ಎಸ್ ಬಿಐ ಅಧ್ಯಕ್ಷ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.