ನವದೆಹಲಿ(ಜೂ.08): ಕೋವಿಡ್‌ ಲಸಿಕೆ ಪಡೆದವರಿಗೆ ಕೇಂದ್ರ ಸರ್ಕಾರ ಲಕ್ಕಿ ಡ್ರಾ ಬಹುಮಾನ ಘೋಷಿಸಿದ ಬೆನ್ನಲ್ಲೇ, ಇದೀಗ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕೂಡಾ ಲಸಿಕೆ ಪಡೆದವರಿಗೆ ಹೆಚ್ಚಿನ ಬಡ್ಡಿದರ ಆಫರ್‌ ನೀಡಿವೆ. ಈ ಮೂಲಕ ಲಸಿಕೆ ಪಡೆಯುವುದಕ್ಕೆ ಉತ್ತೇಜನ ನೀಡಲು ಮುಂದಾಗಿವೆ.

ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್‌, 1 ಡೋಸ್‌ ಲಸಿಕೆ ಪಡೆದವರು 999 ದಿನಕ್ಕಿಂತ ಹೆಚ್ಚಿನ ಅವಧಿಗೆ ಇಡುವ ಠೇವಣಿಗೆ ಶೇ.0.30ರಷ್ಟುಬಡ್ಡಿಯ ಆಫರ್‌ ನೀಡಿದೆ. ಇದಕ್ಕೆ ಯುಕೋವಾಕ್ಸಿ-999 ಎಂದು ಹೆಸರು ನೀಡಿದೆ.

ಇನ್ನು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಇಮ್ಯೂನ್‌ ಇಂಡಿಯಾ ಡೆಪಾಸಿಟ್‌ ಎಂಬ ಯೋಜನೆ ಆರಂಭಿಸಿದೆ. ಇದರನ್ವಯ 1111 ದಿನಗಳ ಎಫ್‌ಡಿಗೆ ಶೇ.0.25ರಷ್ಟು ಬಡ್ಡಿಯ ಆಫರ್‌ ನೀಡಿದೆ.

ವ್ಯರ್ಥ ಮಾಡಿದವರಿಗೆ ಲಸಿಕೆ ಪ್ರಮಾಣ ಕಡಿತ: ಕೇಂದ್ರದ ಎಚ್ಚರಿಕೆ

ಕೇಂದ್ರ ಸರ್ಕಾರವು 18ರಿಂದ 44 ವರ್ಷದ ವ್ಯಕ್ತಿಗಳ ಲಸಿಕೆ ಹೊಣೆ ಹೊತ್ತುಕೊಂಡ ಬೆನ್ನಲ್ಲೇ ಪರಿಷ್ಕೃತ ಲಸಿಕಾ ಮಾರ್ಗಸೂಚಿ ಹೊರಡಿಸಿದೆ. ಲಸಿಕೆಯನ್ನು ಆಯಾ ರಾಜ್ಯಗಳ ಜನಸಂಖ್ಯೆ, ಸೋಂಕಿನ ತೀವ್ರತೆ ಹಾಗೂ ಲಸಿಕಾ ಅಭಿಯಾನದ ವೇಗ ಆಧರಿಸಿ ನೀಡಲು ತೀರ್ಮಾನಿಸಿದೆ.

ಜೊತೆಗೆ ಈವರೆಗೆ ನೀಡಿದ ಲಸಿಕೆ ಬಳಕೆಯ ವೇಳೆ ಭಾರೀ ಪ್ರಮಾಣದಲ್ಲಿ ಅದನ್ನು ವ್ಯರ್ಥ ಮಾಡಿದ ರಾಜ್ಯಗಳಿಗೆ, ಮುಂದಿನ ಹಂಚಿಕೆ ವೇಳೆ ಕಡಿತ ಮಾಡಲಾಗುವುದಾಗಿ ಕೇಂದ್ರ ಸರ್ಕಾರ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.