ಬಳ್ಳಾರಿ[ಫೆ.05]: ಕೆಂಪು ಒಣ ಮೆಣಸಿನಕಾಯಿ ದರ ಬಳ್ಳಾರಿ ಮಾರುಕಟ್ಟೆಯಲ್ಲಿ ದಿಢೀರ್‌ ಕುಸಿತವಾಗಿದ್ದು, ಬೆಳಗಾರರಲ್ಲಿ ಆತಂಕ ಮೂಡಿಸಿದೆ. ಕ್ವಿಂಟಲ್‌ಗೆ .19 ಸಾವಿರ ಗಡಿದಾಟಿದ್ದ ಕೆಂಪು ಮೆಣಸಿನಕಾಯಿ ಬೆಲೆ ಇದೀಗ ಸುಮಾರು 6 ರಿಂದ 7 ಸಾವಿರ ರು. ವರೆಗೆ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುದರ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ.

ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಎಕರೆ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಈ ಮೆಣಸಿನಕಾಯಿ ಅರಬ್‌ ರಾಷ್ಟ್ರ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಚೀನಾದಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡಿರುವುದರಿಂದ ರಫ್ತು ಪ್ರಮಾಣ ಕಡಿಮೆಯಾಗಿ ದರ ಕುಸಿದಿದೆ ಎನ್ನಲಾಗಿದೆ.

ಕಳೆದ ತಿಂಗಳಷ್ಟೇ ಕೆಂಪು ಒಣ ಮೆಣಸಿನಕಾಯಿ ದರ ಗಗನಕ್ಕೇರಿತ್ತು. ಇದೀಗ ಹಠಾತ್ತಾಗಿ ಕುಸಿತ ಕಂಡಿದೆ.