ನವದೆಹಲಿ(ನ.1): ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಶಾಕ್ ನೀಡಿದೆ. ಸಬ್ಸಿಡಿ ಸಹಿತ ಅಡುಗೆ ಅನಿಲ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್‌ಗೆ 2.94 ರೂ. ಏರಿಕೆ ಮಾಡಲಾಗಿದೆ.
 
502.34 ರೂ. ಇದ್ದ 14 .2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 505.34 ರೂ. ಹೆಚ್ಚಳವಾಗಿದ್ದು, ನವೆಂಬರ್ 1ರ ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ದೇಶದ ಅತಿದೊಡ್ಡ  ತೈಲ ಪೂರೈಕೆ ಕಂಪನಿ ಭಾರತೀಯ ತೈಲ ನಿಗಮ ತಿಳಿಸಿದೆ.

ಕಳೆದ ಜೂನ್ ತಿಂಗಳಿನಿಂದ ಈವರೆಗೂ ಸತತ ಆರನೇ ತಿಂಗಳೂ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಪ್ರತಿ ಸಿಲಿಂಡರ್ ಬೆಲೆಯಲ್ಲಿ ಈವರೆಗೂ 14. 13 ರೂ. ಹೆಚ್ಚಳವಾಗಿದೆ. ಸರ್ಕಾರ ಸಬ್ಸಿಡಿ ಮೊತ್ತವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಲ್ಲಿ ಒದಗಿಸುವ ಮೂಲಕ ವರ್ಷವೊಂದರಲ್ಲಿ ಪ್ರತಿ ಕುಟುಂಬಕ್ಕೆ 14.2 ಕೆ.ಜಿ. 12 ಸಿಲಿಂಡರ್ ಗಳನ್ನು ನೀಡುತ್ತದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಹಾಗೂ ವಿದೇಶಿ ವಿನಿಮಯ ದರಕ್ಕನುಗುಣವಾಗಿ ಪ್ರತಿ ತಿಂಗಳು ಸಬ್ಸಿಡಿ ಹಣದಲ್ಲಿ ವ್ಯತ್ಯಾಸವಾಗುತ್ತದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ದರಗಳು ಹೆಚ್ಚಾದಾಗ ಸರ್ಕಾರ ಹೆಚ್ಚಿನ ಸಬ್ಸಿಡಿ ನೀಡುತ್ತದೆ. ಆದರೆ, ತೆರಿಗೆ ಕಾನೂನು ಹಾಗೂ ಎಲ್‌ಪಿಜಿ ಮೇಲೆ ಜಿಎಸ್ ಟಿ ಅಡುಗೆ ಅನಿಲದ ಮಾರುಕಟ್ಟೆ ದರವನ್ನು ಲೆಕ್ಕಾಚಾರ ಮಾಡುತ್ತದೆ.

ಇನ್ನು ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆ 60 ರೂ.ನಷ್ಟು ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 880 ರೂ. ಆಗಿದೆ.