ಮತ್ತೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಸಿಟ್ಟಾದ ಸುಬ್ರಮಣಿಯನ್ ಸ್ವಾಮಿ| ಆರ್‌ಬಿಐ ನೂತನ ಗರ್ವನರ್ ನೇಮಕ ವಿರೋಧಿಸಿದ ಬಿಜೆಪಿ ನಾಯಕ| ಶಕ್ತಿಕಾಂತ್ ದಾಸ್ ಆರ್‌ಬಿಐ ಗರ್ವನರ್ ಆಗುವ ಅರ್ಹತೆ ಇಲ್ಲ ಎಂದ ಸ್ವಾಮಿ| ‘ಪಿ. ಚಿದಂಬರಂ ಜೊತೆ ಶಕ್ತಿಕಾಂತ್ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿ’| ಶಕ್ತಿಕಾಂತ್ ದಾಸ್ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ

ನವದೆಹಲಿ(ಡಿ.12): ಆರ್‌ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಕ್ಕೆ ಆತಂಕ ವ್ಯಕ್ತಪಡಿಸಿದ್ದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಇದೀಗ ನೂತನ ಗರ್ವನರ್ ಆಯ್ಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್‌ಬಿಐ ನೂತನ ಗರ್ವನರ್ ಆಗಿ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿದ ಮೋದಿ ಸರ್ಕಾರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಸ್ವಾಮಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಅರ್ಥಶಾಸ್ತ್ರದ ಮೂಲ ಜ್ಞಾನವೇ ಗೊತ್ತಿರದ ವ್ಯಕ್ತಿಯನ್ನು ಆರ್‌ಬಿಐ ಗರ್ವನರ್ ಸ್ಥಾನದಲ್ಲಿ ಊಹಿಸಿಕೊಳ್ಳುವುದು ಕಷ್ಟ ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಪಿ. ಚಿದಂಬರಂ ಅವಧಿಯಲ್ಲಿ ನಡೆದ ಹಲವು ಭ್ರಷ್ಟಾಚಾರಗಳಲ್ಲಿ ಶಕ್ತಿಕಾಂತ್ ಪಾತ್ರವಿದೆ ಎಂದು ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Scroll to load tweet…

ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ನಡೆದಿದ್ದ ಕೆಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಕ್ತಿಕಾಂತ್ ಕೈವಾಡವಿದ್ದು, ನ್ಯಾಯಾಲಯದಲ್ಲಿ ಚಿದಂಬರಂ ಅವರನ್ನು ರಕ್ಷಿಸಲು ಶಕ್ತಿಕಾಂತ್ ಪ್ರಯತ್ನ ಪಟ್ಟಿದ್ದಾಗಿ ಸ್ವಾಮಿ ಆರೋಪಿಸಿದ್ದಾರೆ.

ಊರ್ಜಿತ್ ಪಟೇಲ್ ರಾಜೀನಾಮೆಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು ಊರ್ಜಿತ್ ಪಟೇಲ್ ಅವರ ಮನವೋಲಿಸಿ ಅವರನ್ನೇ ಮತ್ತೆ ಗರ್ವನರ್ ಆಗಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದರು.

Scroll to load tweet…

ಇನ್ನು ಇಂತದ್ದೇ ಅಸಮಾಧಾನವನ್ನು ಬಿಜೆಪಿ ಮತ್ತೋರ್ವ ನಾಯಕ ಜೆ.ಎನ್. ವ್ಯಾಸ್ ಕೂಡ ವ್ಯಕ್ತಪಡಿಸಿದ್ದು, ಶಕ್ತಿಕಾಂತ್ ದಾಸ್ ಅವರನ್ನು ಓರ್ವ ಐಎಎಸ್ ಅಧಿಕಾರಿಯಾಗಿ ಗೌರವಿಸಬಹುದೇ ಹೊರತು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸ್ಥಿತಿಗತಿಗಳ ಕುರಿತು ಅವರಿಗೆ ಜ್ಞಾನವಿಲ್ಲ ಎಂದು ಕಿಡಿಕಾರಿದ್ದಾರೆ.