ಮುಂಬೈ[ಮಾ.13]: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪುನರಾಯ್ಕೆಯಾಗುತ್ತದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದದ್ದು ಸೇರಿ ವಿವಿಧ ಕಾರಣಗಳಿಗಾಗಿ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 481 ಅಂಕಗಳಷ್ಟು ಏರಿಕೆ ಕಂಡಿದೆ.

ಸೋಮವಾರ 383 ಅಂಕಗಳಷ್ಟು ಏರಿಕೆ ಕಂಡಿದ್ದ ಸೆನ್ಸೆಕ್ಸ್ ಮಂಗಳವಾರವೂ ಏರಿಕೆ ದಾಖಲಿಸಿ 37535 ರಲ್ಲಿ ವಹಿವಾಟು ಮುಗಿಸಿದೆ. ಇದೇ ವೇಳೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 133 ಅಂಕ ಏರಿಕೆಯೊಂದಿಗೆ 11,300ರ ಗಡಿಯನ್ನು ದಾಟಿದ್ದು, 11301ಕ್ಕೆ ತಲುಪಿದೆ. ಮತ್ತೆ ಮೋದಿ ಸರ್ಕಾರವೇ ಆಯ್ಕೆಯಾಗುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದರಿಂದ ರಾಜಕೀಯ ಅನಿಶ್ಚಿತತೆ ಇರುವುದಿಲ್ಲ ಎಂಬ ಭಾವ ಹೂಡಿಕೆದಾರರಲ್ಲಿ ಕಂಡು ಬರುತ್ತಿದೆ.

ಅಲ್ಲದೆ ಕಳೆದ ಕೆಲ ದಿನಗಳಿಂದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಬಲವರ್ಧನೆ ಗೊಳ್ಳುತ್ತಿದೆ. ವಿದೇಶಿ ಹೂಡಿಕೆದಾರರು ಭಾರತೀಯ ಷೇರುಪೇಟೆಯಲ್ಲಿ ಹೆಚ್ಚು ಹಣ ತೊಡಗಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಷೇರುಪೇಟೆ ಏರಿಕೆ ಕಂಡಿದೆ ಎಂದು ತಜ್ಞರು ತಿಳಿಸಿದ್ದಾರೆ