ಕಡಲ ಸೌಂದರ್ಯ ಸೆರೆ ಹಿಡಿಯಬಲ್ಲ ರತನ್ ಟಾಟಾ ಅವರ ಮುಂಬೈನ ಐಷಾರಾಮಿ ಬಂಗಲೆಯಲ್ಲಿ ಏನೆಲ್ಲ ಇದೆ ಗೊತ್ತಾ?
ಟಾಟಾ ಸಮೂಹ ಸಂಸ್ಥೆ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಮುಂಬೈನ ಕೊಲಾಬಾದಲ್ಲಿರುವ ನಿವಾಸದಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ.'ಕ್ಯಾಬಿನ್' ಹೆಸರಿನ ಈ ಐಷಾರಾಮಿ ಬಂಗಲೆಯಲ್ಲಿ ಇನ್ಫಿನಿಟಿ ಫೂಲ್, ಬಾರ್ಬಿಕ್ಯು ಝೋನ್, ಜಿಮ್ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳಿವೆ.

Business Desk:ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ಖಾಸಗಿ ಬದುಕನ್ನು ಎಂದೂ ಸಮಾಜದ ಮುಂದೆ ತೆರೆದಿಟ್ಟವರಲ್ಲ. ಸರಳ ಹಾಗೂ ನೆಮ್ಮದಿಯ ಜೀವನಕ್ಕೆ ಆದ್ಯತೆ ನೀಡುವ ಅವರು, ಖಾಸಗಿ ವಿಚಾರಗಳ ಕಾರಣಕ್ಕೆ ಪ್ರಚಾರ ಪಡೆದದ್ದು ತೀರಾ ವಿರಳ. ಉದ್ಯಮ ರಂಗದಿಂದ ನಿವೃತ್ತಿ ಹೊಂದಿದ್ದರೂ ರತನ್ ಟಾಟಾ ಅವರ ಜನಪ್ರಿಯತೆ ಒಂಚೂರು ತಗ್ಗಿಲ್ಲ. ಇಂದಿಗೂ ಇಡೀ ಭಾರತದ ಜನರಿಗೆ ರತನ್ ಟಾಟಾ ಅಂದ್ರೆ ಅಪಾರ ಗೌರವ, ಪ್ರೀತಿ. ಮುಂಬೈನ ಕೊಲಾಬಾದಲ್ಲಿ ನಿವೃತ್ತಿ ಜೀವನವನ್ನು ಸವಿಯುತ್ತಿರುವ ರತನ್ ಟಾಟಾ ಅವರ ಮನೆ ಹೇಗಿರಬಹುದು ಎಂಬ ಕುತೂಹಲ ಅನೇಕರಿಗೆ ಇದ್ದೇಇರುತ್ತದೆ. ಮುಂಬೂ ನಗರದ ಕೊಲಾಬಾದಲ್ಲಿರುವ ರತನ್ ಟಾಟಾ ಅವರ ಐಷಾರಾಮಿ ಮನೆ ಸಕಲ ಸೌಲಭ್ಯಗಳನ್ನು ಒಳಗೊಂಡಿದೆ. ಸಮುದ್ರಕ್ಕೆ ಮುಖ ಮಾಡಿರುವ ರತನ್ ಟಾಟಾ ಅವರ ಈ ಮನೆ ಆ ಪ್ರದೇಶದ ಅತ್ಯಂತ ಸೊಗಸಾದ ಬಂಗಲೆ ಎಂದೇ ಹೇಳಬಹುದು. ಕೊಲಾಬಾ ಮುಂಬೈ ನಗರದ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ. ರತನ್ ಟಾಟಾ ಅವರ ನಿವಾಸದ ಹೆಸರು 'ಕ್ಯಾಬಿನ್'. ಟಾಟಾ ಗ್ರೂಪ್ ನಿಂದ ನಿವೃತ್ತಿ ಹೊಂದಿದ ಬಳಿಕ ಈ ಮನೆಯಲ್ಲೇ ರತನ್ ಟಾಟಾ ವಾಸಿಸುತ್ತಿದ್ದಾರೆ.
ಟಾಟಾ ಸನ್ಸ್ ಮುಖ್ಯಸ್ಥ ಹುದ್ದೆಯಿಂದ ರತನ್ ಟಾಟಾ 2012ರಲ್ಲಿ ಕೆಳಗಿಳಿದಿದ್ದರು. ಆ ಬಳಿಕ ಅವರು ಐಷಾರಾಮಿ ಕೊಲಾಬಾ ಮನೆಯಲ್ಲಿ ತಮ್ಮ ನಿವೃತ್ತಿ ಜೀವನವನ್ನು ಸವಿಯುತ್ತಿದ್ದಾರೆ. ಬ್ರೋಕರೇಜ್ ಸಂಸ್ಥೆಯೊಂದು ನೀಡಿರುವ ಮಾಹಿತಿ ಪ್ರಕಾರ 2023ಕ್ಕೆ ಅನ್ವಯವಾಗುವಂತೆ ರತನ್ ಟಾಟಾ ಅವರ ಮನೆ 150 ಕೋಟಿ ರೂ. ಮೌಲ್ಯದಾಗಿದೆ.
ಟಾಟಾ ಮಾಲಿಕತ್ವದ ಏರ್‌ಇಂಡಿಯಾ-ವಿಸ್ತಾರ ವಿಲೀನಕ್ಕೆ ರಾಷ್ಟ್ರೀಯ ಸ್ಪರ್ಧಾ ಆಯೋಗ ಒಪ್ಪಿಗೆ
13,000 ಚದರ ಅಡಿ ವಿಸ್ತೀರ್ಣ
ರತನ್ ಟಾಟಾ ಅವರ ನಿವಾಸ 13,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಏಳು ಅಂತಸ್ತುಗಳನ್ನು ಹೊಂದಿದೆ. ಇನ್ನು ಈ ಮನೆಯಲ್ಲಿ 4 ಬೆಡ್ ರೂಮ್ ಗಳಿವೆ. ಅದರ ಜೊತೆಗೆ ಖಾಸಗಿ ಜಿಮ್, ಕೊನೆಯ ಮಹಡಿಯಲ್ಲಿ ಇನ್ಫಿನಿಟಿ ಫೂಲ್, ಆಕರ್ಷಕ ಪೂಜಾ ಕೋಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಬಂಗಲೆ ಹೊಂದಿದೆ. ಮನೆಯಿಂದ ಸಮುದ್ರವನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಈ ಮನೆಯಲ್ಲಿ ದೊಡ್ಡದಾದ ಮೀಟಿಂಗ್ ಏರಿಯಾ ಕೂಡ ಇದೆ.
ರತನ್ ಟಾಟಾ ಅವರ ಈ ಬಂಗಲೆಯ ಇನ್ನೊಂದು ವಿಶೇಷತೆ ಏರ್ ಸನ್ ಡೆಕ್. ಬಿಸಿಲು ಹಾಗೂ ಗಾಳಿಗೆ ತೆರೆದುಕೊಂಡಿರುವ ಈ ಡೆಕ್ ನಲ್ಲಿ ಒಮ್ಮೆಗೆ 50 ಜನ ಸೇರಬಹುದು. ಇನ್ನು ಈ ಮನೆಯ ಬೇಸ್ ಮೆಂಟ್ ನಲ್ಲಿ ಕಾರ್ ಪಾರ್ಕಿಂಗ್ ಗೆ ವಿಶಾಲವಾದ ಸ್ಥಳಾವಕಾಶವಿದೆ. ಇದರಲ್ಲಿ 15ಕ್ಕೂ ಅಧಿಕ ಕಾರುಗಳನ್ನು ಪಾರ್ಕ್ ಮಾಡಲು ಸ್ಥಳಾವಕಾಶವಿದೆ. ಇನ್ನು ಟಾಪ್ ಫ್ಲೋರ್ ನಲ್ಲಿ ವಿಶಾಲವಾದ ಬಾರ್ ಹಾಗೂ ಬಾರ್ಬಿಕ್ಯು ಝೋನ್ ಕೂಡ ಇದೆ. ರತನ್ ಟಾಟಾ ಅವರ ಈ ಮನೆಯಲ್ಲಿ ಆರ್ಟ್ ಮೀಡಿಯಾ ರೂಮ್, ಒಂದು ಗ್ರಂಥಾಲಯ, ಹೈ-ಟೆಕ್ ಸಾಧನಗಳನ್ನು ಹೊಂದಿರುವ ಜಿಮ್ ಕೂಡ ಇದೆ.
ಟಾಟಾ ಗ್ರೂಪ್‌ನಲ್ಲಿ ಉದ್ಯೋಗ ಪಡೆಯಲು ರತನ್ ಟಾಟಾ ರೆಸ್ಯೂಮ್ ರೆಡಿ ಮಾಡಿದ ಸೀಕ್ರೆಟ್ ಬಯಲು!
ರತನ್ ಟಾಟಾ ಈ ಮನೆಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೆ ಅವರು ಸಾಮಾಜಿಕ ಮಾಧ್ಯಮಗಳಿಂದ ಸಾಕಷ್ಟು ದೂರವೇ ಉಳಿದಿದ್ದಾರೆ. ಹಾಗೆಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಎಲ್ಲೂ ಬಹಿರಂಗಪಡಿಸಲು ಬಯಸೋದಿಲ್ಲ ಕೂಡ. ಸದಾ ಸರಳತೆ, ಆಡಂಬರರಹಿತ ವ್ಯಕ್ತಿತ್ವದಿಂದ ಭಾರತೀಯರ ಮನ ಗೆದ್ದಿರುವ ರತನ್ ಟಾಟಾ ಈಗ ಈ ಮನೆಯಲ್ಲಿ ಬದುಕಿನ ಇಳಿಸಂಜೆಯನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ.